Advertisement

ಕೋಟಿ ರೂ. ವೆಚ್ಚ ಮಾಡಿದರೂ ಬಂದಿಲ್ಲ ನೀರು

11:38 PM Feb 24, 2020 | Team Udayavani |

ಹೆಬ್ರಿ: ಹೆಬ್ರಿ-ಚಾರ ಸುತ್ತಮುತ್ತಲಿನ ಗ್ರಾಮಗಳಿಗೆ ನೀರುಣಿಸುವ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಚಾರ ಬಹುಗ್ರಾಮ ಯೋಜನೆ ಪ್ರಮುಖವಾಗಿದ್ದು, 14 ವರ್ಷಗಳ ಹಿಂದೆ ಯೋಜನೆ ರೂಪುಗೊಂಡರೂ ಇನ್ನೂ ಪೂರ್ಣ ಅನುಷ್ಠಾನವಾಗದೆ ಸಮಸ್ಯೆ ಪರಿಹಾರವಾಗಿಲ್ಲ. ಪ್ರಸ್ತುತ ಕೇವಲ 4 ಗ್ರಾಮಗಳಿಗೆ ಮಾತ್ರ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣಗೊಂಡಿದೆ.

Advertisement

ಕೋಟ್ಯಂತರ ರೂ. ಖರ್ಚು ಮಾತ್ರ!
ಮೊದಲ ಹಂತದಲ್ಲಿ 5 ಕೋಟಿ ರೂ. ಹಾಗೂ ಎರಡನೇ ಹಂತದಲ್ಲಿ 5.5 ಕೋಟಿ ರೂ. ಸೇರಿ 10.5 ಕೋಟಿ ರೂ. ವರೆಗೆ ಈ ಯೋಜನೆಗೆ ಖರ್ಚಾಗಿದೆ. ಆದರೆ ಇದರಿಂದ ಪೂರ್ಣ ಪ್ರಯೋ ಜನ ಮಾತ್ರ ಸಿಕ್ಕಿಲ್ಲ. ಮಾಡಿದ ಕಾಮಗಾರಿಯೂ ಕಳಪೆಯಾಗಿದೆ ಎಂಬ ಆರೋಪಗಳೂ ಇವೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳದೆ ಕೇವಲ ನೀರು ಪೂರೈಕೆ ಘಟಕಗಳನ್ನು ನಿರ್ಮಾಣ ಮಾಡಿದ್ದು ಎಣಿಸಿದಂತೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಚಾರ ಅಣೆಕಟ್ಟು ಎತ್ತರ ಏರಿಸಿದರೆ ಸಮಸ್ಯೆ ಬಗೆಹರಿಯಲು ಸಾಧ್ಯ ಎನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಪಂಚಾಯತ್‌ ನೀರಿನ ಅವಲಂಬನೆ
ಹೆಬ್ರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 1,380 ಕುಟುಂಬಗಳು ಹಾಗೂ ಚಾರ ಗ್ರಾ.ಪಂ. ವ್ಯಾಪ್ತಿಯಲ್ಲಿ 1,400 ಕುಟುಂಬಗಳು ಇವೆ. ಹೆಚ್ಚಿನವರು ಪಂಚಾಯತ್‌ ನೀರು ಅವಲಂಬಿಸಿದ್ದಾರೆ. ಇಷ್ಟು ಪ್ರದೇಶಕ್ಕೆ ಪೂರ್ಣ ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲವಾದರೆ ಇನ್ನು ಬೇಳಂಜೆ ಹಾಗೂ ಶಿವಪುರ ಗ್ರಾಮದ ಪರಿಸ್ಥಿತಿ ಹೇಗೆ ಎನ್ನುವುದು ಪ್ರಶ್ನೆಯಾಗಿದೆ.

ಸಮಸ್ಯೆ ಎಲ್ಲೆಲ್ಲಿ?
ಹೆಬ್ರಿ ಪಂಚಾಯತ್‌ ವ್ಯಾಪ್ತಿಯ ಬಂಗಾರುಗುಡ್ಡೆ ಸಾಂತೊಳ್ಳಿ, ಹಾಡಿಮನೆ ಮತ್ತು ಗಿಲ್ಲಾಳಿ ಪ್ರದೇಶಗಳಲ್ಲಿ ವರ್ಷವೂ ಬೇಸಗೆ ಯಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆಯಾಗುತ್ತದೆ. ಬಂಗಾರುಗುಡ್ಡೆಯಲ್ಲಿ 1 ಬೋರ್‌ವೆಲ್‌ ಮಾತ್ರ ಇದ್ದು ಟ್ಯಾಂಕ್‌ ಅಗತ್ಯವಿದೆ. ಶಿವಪುರ ಗ್ರಾ.ಪಂ. ವ್ಯಾಪ್ತಿಯ ಕಾಳಾಯಿ, ಕೆರೆಬೆಟ್ಟು, ಖಜಾನೆ, ಮೂರ್ಸಾಲು, ಯಡ್ಡೆ, ಗಾಳಿಗುಡ್ಡೆ ಪ್ರದೇಶ ಹಾಗೂ ಕುಚ್ಚಾರು ಗ್ರಾ.ಪಂ. ವ್ಯಾಪ್ತಿಯ ಜನತಾ ಕಾಲೋನಿ, ಕುಡಿ ಬೈಲು, ಮಾತ್ಕಲ್ಲು, ಹಾಲಿಕೊಡ್ಲು, ಕಾನ್ಬೆಟ್ಟು ಜೆಡ್ಡು, ಸಳ್ಳೆ ಕಟ್ಟೆ, ದೇವಳಬೈಲು, ಚಿನ್ನಾರ ಕಟ್ಟೆ, ದೂಪದ ಕಟ್ಟೆ, ಬೇಳಂಜೆ 5 ಸೆನ್ಸ್‌, ಕೆಪ್ಪೆಕೆರೆ, ಕಮ¤, ದಾಸನಗುಡ್ಡೆ ಪ್ರದೇಶಗಳಲ್ಲಿ, ಚಾರ ಗ್ರಾ.ಪಂ. ವ್ಯಾಪ್ತಿಯ ಮಂಡಾಡಿಜೆಡ್ಡು, ಹುತ್ತುರ್ಕೆ, ಗಾಂಧಿನಗರ, ತೆಂಕಬೆಟ್ಟು, ಜೋಮುÉಮಕ್ಕಿ, ಗೋವೆಹಾಡಿ, ಗರಡಿಬೆಟ್ಟು, ಮೇಲ್‌ ಮಂಡಾಡಿ, ಕನ್ಯಾನ ಕಾರಾಡಿ, ನೀರ್‌ ತೋಟ್ಲು, ವಿದ್ಯಾನಗರ ಪ್ರದೇಶಗಳಲ್ಲಿ ಬೇಸಗೆಯಲ್ಲಿ ನೀರಿನ ಸಮಸ್ಯೆ ಇದೆ.

ಈ ಭಾಗದಲ್ಲಿ ಸೀತಾನದಿಗೆ ಅನಧಿಕೃತ ಪಂಪ್‌ ಸೆಟ್‌ಗಳನ್ನು ಅಳವಡಿಸಿ ನೀರು ತೆಗೆಯುವುದು ನಡೆಯುತ್ತಿದೆ. ಅಲ್ಲದೆ ಉಚಿತ ವಿದ್ಯುತ್‌ ಬಳಸಿ ನಿರಂತರ ತೋಟಕ್ಕೆ ಹಾಯಿಸಲಾಗುತ್ತಿದ್ದು, ತೋಟದಿಂದ ನೀರು ಮತ್ತೆ ನದಿ ಸೇರುವ ಪರಿಸ್ಥಿತಿ ಇದೆ.

Advertisement

ಇನ್ನು ಬೇಸಗೆ ಹೇಗೆ?
ಹೆಬ್ರಿ ಗ್ರಾ.ಪಂ. ವ್ಯಾಪ್ತಿಯಲ್ಲಿ 742 ಖಾಸಗಿ ಬಾವಿಗಳು, 28 ಸರಕಾರಿ ಬಾವಿಗಳು ಇದ್ದು ಶೇ.50 ರಷ್ಟು ಜನ ಪಂಚಾಯತ್‌ ನೀರನ್ನೇ ಅವಲಂಬಿಸಿದ್ದಾರೆ. ಆದರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಲ್ಲದೆ ಸೇಳಂಜೆ ಮಾಯಿಲ್‌ ಬೆಟ್ಟು ಹಾಗೂ ಇತರ ಪ್ರದೇಶಗಳ ನದಿ ಹಾಗೂ ಬೋರ್‌ವೆಲ್‌ ಮೂಲಗಳಿಂದ ನೀರಿನ ಪೂರೈಕೆಯಾಗುತ್ತಿದ್ದರೂ ಚಾರ ಪರಿಸರದಲ್ಲಿ 2 ದಿನಗಳಿಗೊಮ್ಮೆ ಕೇವಲ 1 ಗಂಟೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ಇನ್ನು ಬೇಸಗೆ ಹೇಗೆ ಎಂಬ ಚಿಂತೆ ಇಲ್ಲಿನವರದ್ದು. ಹೆಬ್ರಿ ಗ್ರಾಮದ ಮೊದಲ ವಾರ್ಡ್‌ ಬಂಗಾರುಗುಡ್ಡೆ ಪರಿಸರಕ್ಕೆ ಯೋಜನೆಯ ಒಂದು ಹನಿ ನೀರು ಬಂದಿಲ್ಲ. ಟ್ಯಾಂಕರ್‌ ನೀರೇ ಗತಿಯಾಗಿದೆ ಎಂದು ಪಂಚಾಯತ್‌ ಸದಸ್ಯ ನವೀನ್‌ ಅಡ್ಯಂತಾಯ ಹೇಳುತ್ತಾರೆ.

ಬೇಳಂಜೆ ಹಾಗೂ ಶಿವಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಗಳಲ್ಲಿ ಕೇವಲ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣವಾಗಿದೆಯೇ ಹೊರತು ಚಾರ ಯೋಜನೆಯಿಂದ ನೀರು ಪೂರೈಕೆ ಕಾರ್ಯ ಇನ್ನೂ ಸರಿಯಾಗಿ ಆರಂಭಗೊಳ್ಳದೆ ಇರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ.

ಪೂರ್ಣ ಮಾಹಿತಿ ಇಲ್ಲ
ಕೋಟ್ಯಂತರ ರೂ. ವೆಚ್ಚದ ಬಹುಗ್ರಾಮ ಯೋಜನೆಯ ರೂಪು ರೇಷೆ ಬಗ್ಗೆ ಪಂಚಾಯತ್‌ಗೆ ಸರಿಯಾದ ಮಾಹಿತಿ ಇಲ್ಲ. ಇಂತಹ ಯೋಜನೆ ಪ್ರಯೋಜನ ಪಡೆಯುವ ಬಗ್ಗೆ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯತ್‌ಗಳನ್ನು ಕರೆದು ಸಭೆ ನಡೆಸಿ ಯಾವ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದೆ ನೀರಿನ ಸರಬರಾಜು ಮಾರ್ಗದ ಬಗ್ಗೆ ಮಾಹಿತಿ ಪಡೆದು ಅನುಷ್ಠಾನಗೊಂಡಲ್ಲಿ ಸಮಸ್ಯೆ ಬಗೆಹರಿಯಲು ಸಾಧ್ಯವಾಗುತ್ತಿತ್ತು.
ರಾಜೇಂದ್ರ,
ಪಿಡಿಒ, ಗ್ರಾ.ಪಂ. ಚಾರ

ಶೀಘ್ರದಲ್ಲಿ ಪೂರ್ಣ
ಯೋಜನಾ ಘಟಕಕ್ಕೆ ಎಂಜಿನಿಯರ್‌ ಹಾಗೂ ಪಂಚಾಯತ್‌ ಆಡಳಿತದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಶೀಘ್ರ ಎಲ್ಲ ಕಡೆ ನೀರು ಪೂರೈಕೆಯಾಗಲಿದೆ. ಬೇಳಂಜೆ ಹಾಗೂ ಶಿವಪುರ ಗ್ರಾಮಗಳಲ್ಲಿಯೂ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಪೂರ್ಣಗೊಂಡಿದ್ದು ಶಿವಪುರಕ್ಕೆ ನೀರು ಪೂರೈಕೆ ಆರಂಭಗೊಂಡಿದೆ.
-ಎಚ್‌.ಕೆ. ಸುಧಾಕರ್‌,
ಅಧ್ಯಕ್ಷರು, ಗ್ರಾ.ಪಂ. ಹೆಬ್ರಿ

-ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next