ಕೋಲಾರ: ನಗರದಲ್ಲಿ ಆಸ್ತಿ ತೆರಿಗೆ ಪಾವತಿಸದೇ, ಬಾಕಿ ಉಳಿಸಿಕೊಂಡವರ ಅಂಗಡಿ, ಮಳಿಗೆಗಳ ವಿರುದ್ಧ ನಗರಸಭೆ ಆಯುಕ್ತ ಶ್ರೀಕಾಂತ್ ನೇತೃತ್ವದಲ್ಲಿ ಅಧಿಕಾರಿಗಳು ಗುರುವಾರ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದರು.
ನಗರಸಭೆ ಆಯುಕ್ತ ಶ್ರೀಕಾಂತ್ ಈ ಕುರಿತು ಮಾಹಿತಿ ನೀಡಿ, ನಗರದಲ್ಲಿನ ಅನೇಕ ಅಂಗಡಿ, ಮಳಿಗೆ, ಸಂಸ್ಥೆಗಳ ನೂರಾರು ಮಾಲಿಕರು 2002-03ರಿಂದಲೂ ಆಸ್ತಿ ತೆರಿಗೆ ಪೂರ್ಣ ಪಾವತಿಸದೆ, ಬಾಕಿ ಉಳಿಸಿಕೊಂಡಿರುವ ಮಾಲಿಕರಿಗೆನ.21ರ ಸಂಜೆ ಕಡೆ ದಿನ ಎಂದು ಸ್ಪಷ್ಟಪಡಿಸಿ ನಗರಸಭೆಯಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ, ಆಸ್ತಿ ಮಾಲಿಕರು ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿಸಲು ಮುಂದಾಗದ ಹಿನ್ನೆಲೆಯಲ್ಲಿ ನಗರಸಭೆ ಕಂದಾಯ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹೇಳಿದರು.
ಬೀಗ ಅನಿವಾರ್ಯ: ಈ ವೇಳೆ ಕೆಲವು ಆಸ್ತಿ ಮಾಲಿಕರು ಇನ್ನಷ್ಟು ಸಮಯಾವಕಾಶ, ಕಂತು ರೂಪದಲ್ಲಿ ಹಣ ಪಾವತಿಸುವುದಾಗಿ ಕೋರಿಕೆಗೆ ಉತ್ತರಿಸಿದ ಅಧಿಕಾರಿಗಳು, ಆರ್ಥಿಕ ವರ್ಷ ಆರಂಭದ ಮೂರು ತಿಂಗಳು ಕಂತಿನ ರೂಪದಲ್ಲಿಪಾವತಿಸಲು ಅವಕಾಶವಿದೆ. ನೋಟಿಸ್ ನೀಡಿದ ನಂತರ ಅವಕಾಶ ಇಲ್ಲ, ಬಾಕಿ ಪಾವತಿಸದಿದ್ದರೆ ಬೀಗ ಹಾಕುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಅಧಿಕಾರಿ ಚಂದ್ರಶೇಖರ್, ನಗರದ ಕೋಟೆಯ ಸ್ಯಾಮ್ಯುಯೆಲ್ ಪುಟ್ಟರಾಜು 1.67 ಲಕ್ಷ ರೂ., ಡಾ.ಶಾರದಾ 2.30 ಲಕ್ಷ ರೂ., ಮೇರಿ ಕಮಿಟಿ ಹಾಲ್‌ನಿಂದ 5.93 ಲಕ್ಷ ರೂ., ಮಹಿಳಾ ಸಮಾಜ ಶಾಲೆ ಹಾಗೂ ಕಾಲೇಜಿನಿಂದ ಒಟ್ಟು 23 ಲಕ್ಷ ರೂ., ಎಂ.ಜಿ.ರಸ್ತೆಯಲ್ಲಿನ ಬೇಕರಿಯೊಂದರಿಂದ 16.15 ಲಕ್ಷ ರೂ. ಸೇರಿದಂತೆ ಅನೇಕ ಮಂದಿ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದರಿಂದ ವಸೂಲಾತಿಗೆ ಮುಂದಾಗಿದ್ದೇವೆ ಎಂದು ಹೇಳಿದರು.
ನಗರಸಭೆ ವ್ಯಾಪ್ತಿಯಲ್ಲಿ 34,000 ಆಸ್ತಿಗಳಿದ್ದು, 22,000 ಆಸ್ತಿಗಳು ಖಾತೆಯಾಗಿದೆ. 2019-20ನೇ ಸಾಲಿನಲ್ಲಿ 5 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದಗುರಿ ಇಟ್ಟುಕೊಳ್ಳಲಾಗಿದ್ದು, ಇದುವರೆಗೆ ಶೇ.60 ಮಾತ್ರ ವಸೂಲಿ ಆಗಿದೆ. ಇನ್ನು 2 ಕೋಟಿ ರೂ.ಗೂ ಅಧಿಕ ಮೊತ್ತ ಬಾಕಿ ಇದೆ. 43 ಆಸ್ತಿ ಮಾಲಿಕರು ಪಾವತಿಸದೆ ಬಾಕಿ ಉಳಿಸಿಕೊಂಡಿರುವ 1.05 ಕೋಟಿ ರೂ. ತೆರಿಗೆ ವಸೂಲಾತಿಗಾಗಿ ನ್ಯಾಯಾಧೀಶರ ನೇತೃತ್ವದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಅದಾಲತ್‌ಗೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಂದಾಯ ಅಧಿಕಾರಿ ವಿದ್ಯಾ, ಕಂದಾಯ ನಿರೀಕ್ಷಕ ತ್ಯಾಜರಾಜ್, ಬಿಲ್ ಕಲೆಕ್ಟರ್ ಅಭಿಷೇಕ್ ಮಾನೆ ಇತರರು ಪಾಲ್ಗೊಂಡಿದ್ದರು.