Advertisement

ಕೋಟಿಗಟ್ಟಲೆ ರೂ. ವ್ಯಯಿಸಿದರೂ ನೀಗಿಲ್ಲ ನೀರಿನ ಬವಣೆ 

01:00 AM Feb 13, 2019 | Team Udayavani |

ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಪೂರ್ವದ ಗಡಿಯಲ್ಲಿ ಬನ್ನಾಡಿ ದೊಡ್ಡ ಹೊಳೆ ಸದಾ ಕಾಲ ತುಂಬಿ ಹರಿಯುತ್ತದೆ. ನೀರಿನ ಯೋಜನೆಗೆ ಕೋಟಿಗಟ್ಟಲೆ ವ್ಯಯಿಸಲಾಗಿದೆ. ಆದರೂ ಇಲ್ಲಿ ನೀರಿನ ಬವಣೆ ತಪ್ಪಿಲ್ಲ. ವರ್ಷಂಪ್ರತಿ ಮಾರಿಗುಡಿ, ಯಕ್ಷಿಮಠ, ತೋಡ್ಕಟ್ಟು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಸಾಮಾನ್ಯವಾಗಿದ್ದು, ಈ ವರ್ಷವೂ ಇದೆ.  

Advertisement

ಎಲ್ಲೆಲ್ಲಿ  ಸಮಸ್ಯೆ? 
ಗುಂಡ್ಮಿ, ಯಕ್ಷಿಮಠ, ಅಲಿತೋಟ, ಪಾರಂಪಳ್ಳಿ, ಚುಂಚ್‌ಮನೆ, ಹೊಳ್ಳರ ತೋಟ, ಮಧ್ಯಸ್ಥರ ತೋಟ, ಶಾಲಾ ತೋಟ, ಬೆಟ್ಲಕ್ಕಿ, ಹೊಳೆಕೆರೆ, ಕೆಮ್ಮಣ್ಣುಕೆರೆ ಮೊದಲಾದೆಡೆ  ಪ್ರತಿ ವರ್ಷ ನೀರಿನ ಸಮಸ್ಯೆ ಎದು ರಾಗುತ್ತದೆ. ಗುಂಡ್ಮಿ, ಪಾರಂಪಳ್ಳಿ ಗ್ರಾಮದಲ್ಲಿ ಉಪ್ಪು ನೀರಿನ ಹೊಳೆ ಹರಿಯುವು ದರಿಂದ ಬಾವಿಗಳಲ್ಲಿ  ಶುದ್ಧ ಕುಡಿ ಯುವ ನೀರು ಲಭ್ಯವಾಗುವು ದಿಲ್ಲ. ಆದ್ದರಿಂದ ನಿವಾಸಿಗಳು ನಳ್ಳಿ ನೀರು ಅವಲಂಬಿಸಿದ್ದಾರೆ.  

ಈ ಬಾರಿ ಸಮಸ್ಯೆ ಮತ್ತಷ್ಟು ಹೆಚ್ಚುವ ಆತಂಕ 
ಇಲ್ಲಿ ಪ್ರತಿ ವರ್ಷ ಮೇನಲ್ಲಿ ಸಮಸ್ಯೆ ವಿಪರೀತವಾಗುತ್ತಿತ್ತು. ಆಗ ಅಗತ್ಯ ಇದ್ದೆಡೆ ಎರಡು- ಮೂರು ದಿನಕ್ಕೊಮ್ಮೆ  ಟ್ಯಾಂಕರ್‌ ನೀರು ಸರಬರಾಜು ಮಾಡಲಾಗುತಿತ್ತು. ಈ ಬಾರಿ ಸಮಸ್ಯೆ ಹೆಚ್ಚಿದ್ದು, ಎಪ್ರಿಲ್‌ ಅಂತ್ಯದೊಳಗೆ ಟ್ಯಾಂಕರ್‌ ನೀರು ಬೇಕಾಗಬಹುದು. ಹೀಗಾಗಿ ಮುನ್ನಚ್ಚರಿಕೆ ಕ್ರಮವಾಗಿ ಪ.ಪಂ. ಈಗಾಗಲೇ 2 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದೆ ಮತ್ತು ಟ್ಯಾಂಕರ್‌ ನೀರಿಗಾಗಿ ಅನುದಾನಕ್ಕೆ ಮನವಿ ಮಾಡಲಾಗಿದೆ.

ಕಾಮಗಾರಿಗಳು ವ್ಯರ್ಥ  
ಪಾರಂಪಳ್ಳಿ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ಲಕ್ಷಾಂತರ ವೆಚ್ಚದಲ್ಲಿ ಬಾವಿ ಹಾಗೂ ನೀರಿನ ಟ್ಯಾಂಕ್‌, ಫಿಲ್ಟರ್‌, ಪೈಪ್‌ಲೈನ್‌ ಅಳವಡಿಸಿ ತೋಡ್ಕಟ್ಟು, ಪಾರಂಪಳ್ಳಿ ಭಾಗಕ್ಕೆ  ನೀರು ನೀಡುವ ಯೋಜನೆ ರೂಪಿಸಲಾಗಿತ್ತು. ಆದರೆ ನೀರು ಕಲುಷಿತವಾಗಿರುವುದರಿಂದ ಅದು ಸಾಧ್ಯವಾಗಿಲ್ಲ. ಬಾವಿ, ಶುದ್ಧೀಕರಣ ಘಟಕ, ಟ್ಯಾಂಕ್‌ ಪಾಳುಬಿದ್ದಿದೆ. ಜತೆಗೆ ಪಾರಂಪಳ್ಳಿ ವಾರ್ಡ್‌ನ ಬಾವಿಯೊಂದು ನಿರುಪಯುಕ್ತವಾಗಿದೆ. ಹೀಗೆ ಕೋಟಿ ರೂ.ಗಳಷ್ಟು ವೆಚ್ಚದ ಕಾಮಗಾರಿಗಳು ವ್ಯರ್ಥವಾಗಿವೆ.

 ನೀರು ಮಿತವಾಗಿ ಬಳಸಿ  
      ನೀರನ್ನು ಹಿತ-ಮಿತವಾಗಿ ಬಳಸಿದರೆ ಬೇಸಗೆಯ ಸಮಸ್ಯೆಗಳು ದೂರವಾಗಲಿವೆ. ನಳ್ಳಿ ನೀರಿಗೆ ಅನಧಿಕೃತ ಪಂಪ್‌, ಕೈತೋಟ, ಕೃಷಿಗೆ ನೀರು ಬಳಸುವುದು, ಅನಗತ್ಯ ನೀರು ಬಳಕೆ, ವಾಹನಗಳನ್ನು ತೊಳೆಯುವುದು ಇತ್ಯಾದಿಗಳಿಂದ ನೀರು ಪೋಲಾಗುತ್ತದೆ. ನಾಗರಿಕರು ಇಂತಹ ಚಟುವಟಿಕೆಗೆ ಬ್ರೇಕ್‌ ಹಾಕಿ ಅಗತ್ಯವಿದ್ದಷ್ಟು ನೀರು ಬಳಸಿದರೆ ಸಮಸ್ಯೆ ದೂರವಾಗುತ್ತದೆ.  ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವೂ ನಡೆದಿದೆ.

Advertisement

ಸುಮಾರು 35 ಲಕ್ಷ ರೂ. ಅನುದಾನ ಲಭ್ಯವಿದೆ
ನೀರಿನ ಸಮಸ್ಯೆ ಪರಿಹಾರಕ್ಕಾಗಿ ಕಳೆದ ಬಾರಿ 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು  ಉಳಿಕೆಯಾಗಿತ್ತು. ಹೀಗಾಗಿ ಅದರಲ್ಲಿ ವಿವಿಧ ಕಾಮಗಾರಿಗಳಿಗೆ ಯೋಜನೆ ಸಿದ್ಧಪಡಿಸಿ, ಅನುಮೋದನೆ ಪಡೆದು ಟೆಂಡರ್‌ ಮಾಡಲಾಗಿದೆ. ಈ ಬಾರಿ 15 ಲಕ್ಷ ರೂ. ಮತ್ತೂಮ್ಮೆ ಬಿಡುಗಡೆಯಾಗಿದ್ದು ಪೈಪ್‌ಲೈನ್‌, ಬಾವಿ ದುರಸ್ತಿ ಮುಂತಾದ ಕಮಗಾರಿಗಳಿಗೆ ಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಕಳುಹಿಕೊಡಲಾಗಿದೆ. ಎಪ್ರಿಲ್‌ನಲ್ಲೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಆರಂಭಿಸಬೇಕಾಗಬಹುದು.
-ಅರುಣ್‌ ಕುಮಾರ್‌, ಮುಖ್ಯಾಧಿಕಾರಿಗಳು ಪ.ಪಂ. ಸಾಲಿಗ್ರಾಮ

ಶಾಶ್ವತ ಯೋಜನೆ ಅನುಷ್ಠಾನವಾದರೆ ಸಮಸ್ಯೆ ದೂರ 
ಇಲ್ಲಿನ ಕಾರ್ಕಡ ಸಮೀಪ ದೊಡ್ಡ ಹೊಳೆಗೆ ಅಡ್ಡಲಾಗಿ 2 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಿ ಶುದ್ಧೀಕರಿಸಿ ಸರಬರಾಜು ಮಾಡುವ ಕುರಿತು 2015ರಲ್ಲಿ 29.32 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿತ್ತು. ಅನಂತರ ಎರಡು ಬಾರಿ ಯೋಜನೆ  ಪರಿಷ್ಕರಣೆಗೊಂಡು 2017ರಲ್ಲಿ 41 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧವಾಗಿತ್ತು ಹಾಗೂ ವಾಟರ್‌ ಟ್ಯಾಂಕ್‌, ಶುದ್ಧೀಕರಣ ಘಟಕದ ನಿರ್ಮಾಣಕ್ಕೆ ಸರಕಾರಿ ಭೂಮಿಯನ್ನು ಗುರುತಿಸಿ ವರದಿ ತಯಾರಿಸಿ  ಸರಕಾರದ ಅನುಮೋದನೆಗಾಗಿ ಕಳುಹಿಸಲಾಗಿತ್ತು.  ಆದರೆ ಯೋಜನೆ ಇದುವರೆಗೆ ಕಾರ್ಯಗತವಾಗಲಿಲ್ಲ. ಇದು ಅನುಷ್ಠಾನ ವಾದಲ್ಲಿ 12.39. ಎಂ.ಸಿ.ಎಫ್‌.ಟಿ. ಗಿಂತ ಹೆಚ್ಚು ನೀರು ಲಭ್ಯವಾಗಲಿದ್ದು , 4 ಎಂ.ಸಿ. ಎಫ್‌.ಟಿ. ನೀರು ಉಳಿತಾಯ ವಾಗುತ್ತದೆ. ಇದನ್ನು ಪಕ್ಕದ ಗ್ರಾಮಗಳಿಗೆ ನೀಡ ಬಹುದು. 

– ರಾಜೇಶ ಗಾಣಿಗ ಅಚಾÉಡಿ

Advertisement

Udayavani is now on Telegram. Click here to join our channel and stay updated with the latest news.

Next