ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದೆ ಅಂಜನಾದ್ರಿ ಬೆಟ್ಟದ ಭಕ್ತರ ಹುಂಡಿ ಹಾಗೂ ಇತರೆ ದೇಣಿಗೆ ಸೇರಿ ಕಳೆದೊಂದು ವರ್ಷದಲ್ಲಿ ಒಂದು ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.
ಕಳೆದ ಹಲವು ದಶಕಗಳಿಂದ ದೇವಾಲಯದ ಆಡಳಿತವನ್ನು ಆನೆಗೊಂದಿ ರಾಜಮನೆತನದವರು ನಿರ್ವಹಿಸುತ್ತಿದ್ದರು. ಹತ್ತು ವರ್ಷಗಳ ಹಿಂದೆ ದೇವಾಲಯದ ಧಾರ್ಮಿಕ ಕಾರ್ಯ ನಿರ್ವಹಿಸಲು ರಾಜವಂಶಸ್ಥರು ಮತ್ತು ಸ್ಥಳೀಯರು ಉತ್ತರ ಭಾರತದ ಮಹಾಂತ ವಿದ್ಯಾದಾಸ ಬಾಬಾ ಎನ್ನುವ ಅರ್ಚಕರನ್ನು ನೇಮಕ ಮಾಡಿದ ನಂತರ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಾಗಿವೆ. ಇಲ್ಲಿಯ ಧಾರ್ಮಿಕ ಕಾರ್ಯಗಳ ಕುರಿತು ವ್ಯಾಪಕ ಪ್ರಚಾರ ಆಗಿದ್ದರಿಂದ ಇಲ್ಲಿಗೆ ಆಗಮಿಸುವವರ ಸಂಖ್ಯೆ ದ್ವಿಗುಣಗೊಂಡಿದೆ. ಬಜರಂಗದಳ ಪ್ರತಿ ವರ್ಷ ಹನುಮಮಾಲೆ ಧಾರಣೆ ಕಾರ್ಯಕ್ರಮ ಆಯೋಜಿಸುವ ಮೂಲಕ ರಾಜ್ಯ, ಅಂತಾರಾಜ್ಯಗಳಿಂದ ಹನುಮಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ಅಂಜನಾದ್ರಿ ಬೆಟ್ಟದ ಕುರಿತು ಮಹಾಭಾರತ, ರಾಮಾಯಣದಲ್ಲಿ ವಿವರಿಸಲಾಗಿದೆ. ಶ್ರೀರಾಮ ಲಕ್ಷ್ಮಣರು ವನವಾಸಕ್ಕಾಗಿ ಕಿಷ್ಕಿಂದೆ ಪ್ರದೇಶಕ್ಕೆ ಆಗಮಿಸಿದ್ದ ವೇಳೆ ಹನುಮಂತ ಇವರನ್ನು ಸುಗ್ರೀವನಿಗೆ ಪರಿಚಯಿಸಿದ್ದ. ವಾಲಿ-ಸುಗ್ರೀವರ ಯುದ್ಧ, ಶಬರಿ ಗುಹೆ, ಚಿಂತಾಮಣಿ ಹೀಗೆ ರಾಮಾಯಣದಲ್ಲಿ ಉಲ್ಲೇಖೀಸಿದ ಅನೇಕ ಸ್ಥಳಗಳು ಇಲ್ಲಿ ಕಂಡು ಬರುತ್ತವೆ. ದೇಶ-ವಿದೇಶಿಗರು ಪ್ರತಿ ದಿನ ಇಲ್ಲಿಗೆ ಭೇಟಿ ನೀಡುತ್ತಾರೆ.
ಮಾಲೀಕತ್ವದ ವಿವಾದ: ಅಂಜನಾದ್ರಿ ಬೆಟ್ಟದ ಮಾಲೀಕತ್ವ ತಮಗೆ ಸೇರಿದ್ದು ಎಂದು ಆನೆಗೊಂದಿ ರಾಜಮನೆತನ ಹಾಗೂ ಸ್ಥಳೀಯರು ವಾದಿಸುತ್ತಾರೆ. ಅರ್ಚಕರಾಗಿ ನೇಮಕಗೊಂಡಿದ್ದ ಮಹಾಂತ ವಿದ್ಯಾದಾಸ ಬಾಬಾ ಅವರು ತಾವು ಆಗಮಿಸಿದ ನಂತರ ಅಂಜನಾದ್ರಿ ಬೆಟ್ಟ ಅಭಿವೃದ್ಧಿಯಾಗಿದ್ದು, ತಾವೇ ಎಲ್ಲ ಆಡಳಿತ ನಡೆಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ರಾಜಮನೆತನದವರು ಮತ್ತು ಬಾಬಾನ ಭಕ್ತರ ನಡುವೆ ಗೊಂದಲವುಂಟಾಗಿತ್ತು. ಭಾರಿ ವಾದ-ವಿವಾದಗಳು ನಡೆದು ಪರಿಸ್ಥಿತಿ ವಿಕೋಪಕ್ಕೂ ಹೋಗಿತ್ತು. ಪೊಲೀಸ್, ಕಂದಾಯ ಇಲಾಖೆ ವರದಿ ಆಧರಿಸಿ 2018, ಜು.23ರಂದು ಜಿಲ್ಲಾಡಳಿತ ದೇವಾಲಯವನ್ನು ತನ್ನ ಸುಪರ್ದಿಗೆ ಪಡೆದು ತಹಶೀಲ್ದಾರ್ ಅವರನ್ನು ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಮತ್ತು ಮುಜರಾಯಿ ಇಲಾಖೆಯ ಸಿ.ಎಸ್.ಚಂದ್ರಮೌಳಿ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಯಿತು.
Advertisement
ಸರ್ಕಾರದ ವ್ಯಾಪ್ತಿಗೆ ದೇವಾಲಯ ಒಳಪಟ್ಟ ನಂತರ ಪ್ರತಿಯೊಂದು ಕಾರ್ಯವನ್ನು ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಪ್ರತಿ ಎರಡ್ಮೂರು ತಿಂಗಳಿಗೊಮ್ಮೆ ಹುಂಡಿ ಎಣಿಕೆ ಮಾಡಿ ದೇವಾಲಯದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.
Related Articles
ಹುಂಡಿಯಲ್ಲಿ 6,31,418 ರೂ.ಕಾಣಿಕೆ ಸಂಗ್ರಹ:
ತಾಲೂಕಿನ ಅಂಜನಾದ್ರಿಬೆಟ್ಟದ ಹುಂಡಿಯನ್ನು ಮಂಗಳವಾರ ಎಣಿಕೆ ಮಾಡಲಾಗಿದ್ದು, ಎರಡು ತಿಂಗಳಲ್ಲಿ 6,31,418 ರೂ.ಸಂಗ್ರಹವಾಗಿದೆ. ಇದರ ಜತೆಗೆ ವಿದೇಶಿ ಭಕ್ತರು ಅಮೆರಿಕದ ಒಂದು ಡಾಲರ್ ನೋಟನ್ನು ಹುಂಡಿಯಲ್ಲಿ ಹಾಕಿದ್ದಾರೆ. ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಗ್ರಾಮಲೆಕ್ಕಾಕಾರಿ ಮಹೇಶ ದಲಾಲ್, ಮಂಜುನಾಥ ದಮ್ಮಾಡಿ, ಅಸ್ಲಾಂ ಪಾಷಾ ವ್ಯವಸ್ಥಾಪಕ ಎಂ. ವೆಂಕಟೇಶ ಸೇರಿ ದೇವಾಲಯಕ್ಕೆ ಆಗಮಿಸಿದ ಭಕ್ತರು ಇದ್ದರು.
ಅಂಜನಾದ್ರಿಬೆಟ್ಟ ಸರ್ಕಾರದ ವಶಕ್ಕೆ ಬಂದ ನಂತರ ಇಲ್ಲಿಯವರೆಗೆ ಭಕ್ತರ ದೇಣಿಗೆ ಹುಂಡಿ ಹಣ ಹಾಗೂ ವಾಹನ ಪಾರ್ಕಿಂಗ್ ಶುಲ್ಕ ಸೇರಿ ಒಟ್ಟು 1.3 ಕೋಟಿ ರೂ.ಗಳು ಸಂಗ್ರಹವಾಗಿದೆ. ಇದರಲ್ಲಿ ಸಿಬ್ಬಂದಿ ವೇತನ, ಕೆಲ ಮೂಲ ಸೌಕರ್ಯಕ್ಕಾಗಿ 47 ಲಕ್ಷ ರೂ.ಗಳನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಖರ್ಚು ಮಾಡಲಾಗಿದೆ. ಸದ್ಯ ದೇವಾಲಯದ ಬ್ಯಾಂಕ್ ಖಾತೆಯಲ್ಲಿ 56 ಲಕ್ಷ ರೂ.ಗಳು ಜಮಾ ಇದೆ. ವಾಹನ ನಿಲುಗಡೆಗಾಗಿ ಪಂಪಾ ಸರೋವರದ 4 ಎಕರೆ ಪೈಕಿ ಎರಡುವರೆ ಎಕರೆ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಇನ್ನುಳಿದ ಒಂದೂವರೆ ಎಕರೆ ಭೂಮಿಯನ್ನು ಶೀಘ್ರ ವಶಪಡಿಸಿಕೊಂಡು ವಾಹನ ನಿಲುಗಡೆ ಹಾಗೂ ಮೂಲಸೌಕರ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ದೇವಾಲಯದ ಅಭಿವೃದ್ಧಿ ಜತೆ ಪ್ರವಾಸಿಗರಿಗೆ ಸೂಕ್ತ ಸೌಕರ್ಯ ಕಲ್ಪಿಸಲು ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೆಲಸ ಮಾಡಲಾಗುತ್ತಿದೆ. •ವೀರೇಶ ಬಿರಾದಾರ, ತಹಶೀಲ್ದಾರ್ ಹಾಗೂ ದೇವಾಲಯದ ಇಒ.
ಟ್ರಸ್ಟ್ ರಚನೆ ಅಗತ್ಯ:
ಅಂಜನಾದ್ರಿಬೆಟ್ಟವನ್ನು ಸರ್ಕಾರ ಸುಪರ್ದಿಗೆ ಪಡೆದ ನಂತರ ದೇವಾಲಯದ ಆದಾಯ ಕೋಟಿಗೂ ಅಧಿಕವಾಗಿದೆ. ಕ್ಷೇತ್ರದಲ್ಲಿ ಭಕ್ತರಿಗೆ ಹಲವು ಸೌಕರ್ಯ ಕಲ್ಪಿಸಲು ಅನುಕೂಲವಾಗಿದ್ದು, ಈಗಾಗಲೇ ನೀಲನಕ್ಷೆ ಸಿದ್ಧಗೊಂಡಿದೆ. ಅಂಜನಾದ್ರಿ ಬೆಟ್ಟಕ್ಕೆ ಹೊಂದಿಕೊಂಡಿರುವ ಪಂಪಾ ಸರೋವರ, ಋಷಿಮುಖ ಪರ್ವತ, ಸುಗ್ರೀವ್ ಗುಹೆ, ವಾಲಿಕಿಲ್ಲಾ, ಆನೆಗೊಂದಿಯ ಶ್ರೀರಂಗನಾಥ ಗುಡಿ ಮತ್ತು ಗವಿರಂಗನಾಥ ದೇವಾಲಯಗಳನ್ನೊಳಗೊಂಡು ಸರ್ಕಾರ ಟ್ರಸ್ಟ್ ರಚನೆ ಮಾಡಿ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಸೋರಿ ಹೋಗುತ್ತಿರುವ ಹುಂಡಿಯ ಹಣ ಸರ್ಕಾರಕ್ಕೆ ಜಮಾ ಆಗುವಂತೆ ಮಾಡಬೇಕಿದೆ. ಇದರಿಂದ ಭಕ್ತರಿಗೆ ಸೌಕರ್ಯ ಕಲ್ಪಿಸಲು ನೆರವಾಗಲಿದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತಕ್ಕೆ ಈ ಕುರಿತು ಈಗಾಗಲೇ ಸ್ಥಳೀಯರು ಮನವಿ ಮಾಡಿದ್ದು, ಶೀಘ್ರವೇ ಎಲ್ಲ ದೇವಾಲಯಗಳನ್ನು ಒಂದೇ ಸೂರಿನಡಿ ತರುವ ಮೂಲಕ ಹಣದ ಸೋರಿಕೆ ಕಡಿಮೆ ಮಾಡಬೇಕಿದೆ ಎಂಬ ಮಾತುಗಳು ಕೇಳಿಬಂದಿವೆ.
•ಕೆ.ನಿಂಗಜ್ಜ
Advertisement