ವಿಜಯಪುರ: ಕಾಳಿಕಾ ನಗರದ ಅಭಿವೃದ್ಧಿಗಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸುವುದಾಗಿ ಎಂದು ನಾಗಠಾಣ ಶಾಸಕ ಡಾ| ದೇವಾನಂದ ಚವ್ಹಾಣ ಭರವಸೆ ನೀಡಿದರು.
ವಿಜಯಪುರ ಮಹಾನಗರ ಪಾಲಿಕೆ 2018-19ನೇ ಸಾಲಿನ 14ನೇ ಹಣಕಾಸು ಯೋಜನೆ ಅಡಿಯಲ್ಲಿ ವಿಜಯಪುರ ನಗರದ ವಾರ್ಡ್ ನಂ.12 ರಲ್ಲಿ ಬರುವ ಗಚ್ಚಿನಕಟ್ಟಿ ಕಾಲೋನಿಯ ಕಾಳಿಕಾ ನಗರದಲ್ಲಿ 15.20 ಲಕ್ಷ ರೂ.ಗಳ ಒಳಚರಂಡಿ ಕಾಮಗಾರಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿರುವ ನನಗೆ ಜನತೆಗೆ ಉತ್ತಮ ಸೇವೆ ನೀಡುವುದೊಂದೆ ಆದ್ಯತೆ ಎಂದರು.
ನಾನು ಶಾಸಕನಾಗಿರುವುದು ನಿಮ್ಮಿಂದ ನಿಮ್ಮ ಸೇವೆ ಮಾಡಲು, ಆದ್ದರಿಂದ ಕಾಳಿಕಾ ನಗರದ ನಿವಾಸಿಗಳು ಯಾರೇ ಇರಲಿ ತಮ್ಮ ಸಮಸ್ಯೆಗಳು ಯಾವುದೇ ಇರಲಿ ತಾವುಗಳು ನೇರವಾಗಿ ನನ್ನ ಹತ್ತಿರ ಬಂದರೆ ತಮ್ಮ ಸಮಸ್ಯೆ ಪರಿಹರಿಸುವಲ್ಲಿ ಶ್ರಮಿಸುವೆ ಎಂದರು. ಕಾರ್ಮಿಕ ಮುಖಂಡ ಬಸಲಿಂಗಪ್ಪ ಸಾರವಾಡ ಮಾತನಾಡಿ, ನಮ್ಮ ಬಡಾವಣೆಯಲ್ಲಿ ಸಾಕಷ್ಟು ಮೂಲ ಸೌಲಭ್ಯಗಳ ಕೊರೆತೆಯಿದೆ. ಅದನ್ನು ನಾಗಠಾಣ ಶಾಸಕರ ಗಮನಕ್ಕೆ ತಂದ ಮರುಕ್ಷಣವೇ ಅವುಗಳ ಕೊರತೆಯನ್ನು ನೀಗಿಸಲು ಸ್ವತಃ ತಾವೇ ನಮ್ಮ ಬಡಾವಣೆಗೆ ಆಗಮಿಸಿ ಭೂಮಿಪೂಜೆಗೆ ಚಾಲನೆ ನೀಡಿರುವುದು ನಮ್ಮಲ್ಲಿ ಶಾಸಕರ ಕುರಿತು ಅಭಿಮಾನ ಮೂಡಿದೆ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ನಾಗಠಾಣ ಶಾಸಕರು ಬಹಳ ಸೌಮ್ಯ ಸ್ವಭಾವದವರು. ಇಂತವರು ಸಿಗುವುದು ಬಹಳ ಅಪರೂಪ. ಕಾಳಿಕಾ ನಗರದ ಅಕ್ರಮ ಭೂಮಿಯನ್ನು ಸಕ್ರಮಗೊಳಿಸಬೇಕು. ಅದರಂತೆ ಮೂಲ ಸೌಲಭ್ಯಗಳನ್ನು ಈ ಬಡಾವಣೆಯ ನಿವಾಸಿಗಳಿಗೆ ತಲುಪಿಸುವಲ್ಲಿ ಶ್ರಮಿಸಬೇಕು ಎಂದು ಹೇಳಿದರು.
ಕಸಾಪ ಮಾಜಿ ಅಧ್ಯಕ್ಷ ಬಿ.ಎಂ. ಪಾಟೀಲ, ಪ್ರಕಾಶ ಚವ್ಹಾಣ, ಶಿವು ಕೋಳಿ, ಸುನೀತಾ ಬಿರಾದಾ, ರಾಜು ಶಿಂಧೆ, ಅನಿಲ ಚವ್ಹಾಣ, ತಾವರಕೇಡ ಮಾಸ್ತರ್, ಕವಿತಾ ಹಿರೇಮಠ, ಲಲಿತಾ ಮರಣೂರ, ಬಸನಗೌಡ ಪಾಟೀಲ ಇದ್ದರು.