Advertisement
ನಾಪತ್ತೆಗೂ ಮುನ್ನ ಮನ್ಸೂರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ “ಶಿವಾಜಿನಗರ ಶಾಸಕ 400 ಕೋಟಿ ರೂ. ಪಡೆದು ಹಣ ವಾಪಸ್ ನೀಡಲಿಲ್ಲ’ ಎಂದು ಆರೋಪಿಸಿದ್ದಾರೆ. ಜತೆಗೆ ರಾಜಕಾರಣಿಗಳು, ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರಿಗಳಿಗೆ ಲಂಚ ಕೊಟ್ಟು ಸಾಕಾಗಿದೆ. ಇದು ನನ್ನ ಕೊನೆಯ ಸಂದೇಶವಾಗಬಹುದು ಎಂದು ಹೇಳಲಾಗಿದೆ. ಇದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
Related Articles
ಸೋಮವಾರ ಬೆಳ್ಳಂಬೆಳಗ್ಗೆ ಮನ್ಸೂರ್ ಆಡಿಯೋ ವೈರಲ್ ಆಗುತ್ತಿದ್ದಂತೆ ಹೂಡಿಕೆದಾರರು ಶಿವಾಜಿನಗರದ ಐಎಂಎ ಕಚೇರಿ ಬಾಗಿಲು ಬಡಿಯಲಾರಂಭಿಸಿದರು. ಸಾವಿರಾರು ಜನ ಜಮಾಯಿಸಿ ಭಾರೀ ಪ್ರತಿಭಟನೆ ನಡೆಸಿದರು. ಮನ್ಸೂರ್ ವಿರುದ್ಧ ಘೋಷಣೆಗಳನ್ನು ಕೂಗಿ ನಮ್ಮ ಹಣ ನಮಗೆ ವಾಪಸ್ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಇದ್ದರೂ ಪ್ರತಿಭಟನಕಾರರನ್ನು ನಿಯಂತ್ರಣಕ್ಕೆ ತರಲು ಹರಸಾಹಸಪಟ್ಟರು. ಐಎಂಎ ಜುವೆಲರ್ ಹೆಸರಿನಲ್ಲಿ ಬೆಂಗಳೂರು ಸಹಿತ ರಾಜ್ಯದ ವಿವಿಧ ಭಾಗಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದು ವಂಚನೆಗೊಳಗಾಗಿದ್ದಾರೆ ಎಂದು ಹೇಳಲಾಗಿದೆ. ಈಗಷ್ಟೇ ಹಣ ಕಳೆದುಕೊಂಡವರು ದೂರು ದಾಖಲಿಸಿದ್ದು ಖಚಿತವಾಗಿ ಇಷ್ಟೇ ಪ್ರಮಾಣದ ವಂಚನೆ ನಡೆದಿದೆ ಎಂಬುದು ಸದ್ಯಕ್ಕೆ ಸ್ಪಷ್ಟಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಮನ್ಸೂರ್ ನಿಗೂಢ ನಾಪತ್ತೆ? ಆಡಿಯೋದಲ್ಲಿ ಇದು ನನ್ನ ಕೊನೆಯ ಸಂದೇಶ ಆಗಬಹುದು ಎಂದು ಮನ್ಸೂರ್ ಹೇಳಿಕೆಯೂ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ನಗರ ಪೊಲೀಸರು ಆತನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರೂ ಮನ್ಸೂರ್ ಮತ್ತು ಕುಟುಂಬಸ್ಥರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆತನ ಪತ್ತೆಗೆ ಪೂರ್ವ ವಿಭಾಗದ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸುತ್ತಿದ್ದರೂ ಆತನ ಸುಳಿವು ಪತ್ತೆಯಾಗಿಲ್ಲ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ವೈರಲ್ ಆದ ಆಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ಆಡಿಯೋದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರಿಗಳಿಗೆ ಲಂಚ ಕೊಟ್ಟು ಸಾಕಾಗಿದೆ. ಶಿವಾಜಿನಗರ ಎಂಎಲ್‌ಎ ಬಳಿ 400 ಕೋಟಿ ರೂ. ಇದೆ. ಕೇಳಿದರೆ ಕಚೇರಿಗೆ ರೌಡಿಗಳನ್ನು ಕಳುಹಿಸುತ್ತಾರೆ ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ.