ಗದಗ: ಬೆಳೆ ಸಮೀಕ್ಷೆ ಕಾರ್ಯದಿಂದ ಜಿಲ್ಲೆಯ ಯಾವೊಬ್ಬ ರೈತರು ವಂಚಿತರಾಗಬಾರದು. ನಿಗದಿತ ಅವಧಿಯೊಳಗೆ ಜಂಟಿ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಪಂ ವಿಡಿಯೋ ಕಾನ್ಫೆರೆನ್ಸ್ ಸಭಾಂಗಣದಲ್ಲಿ ಜರುಗಿದ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು, ಕೃಷಿ, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಕಾನ್ಫ ರೆನ್ಸ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಅತಿಯಾದ ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಮನೆ-ಜಾನುವಾರುಗಳ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ, ಪರಿಹಾರ ಒದಗಿಸಲು ಕ್ರಮ ಜರುಗಿಸಬೇಕು. ಪ್ರತಿವರ್ಷ ಪ್ರವಾಹಕ್ಕೆ ಹೆಚ್ಚು ಹಾನಿಯಾಗುವ ಗ್ರಾಮಗಳಾದ ಲಕಮಾಪುರ ಹಾಗೂ ಕೊಣ್ಣೂರು ಗ್ರಾಮಗಳ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ಸ್ಥಳ ಗುರುತಿಸಿ ಗ್ರಾಪಂ ಮಟ್ಟದಲ್ಲಿ ಸಾರ್ವಜನಿಕರ ಒಪ್ಪಿಗೆ ಪಡೆದು ಗ್ರಾಮ ಸಭೆಯಲ್ಲಿ ಠರಾವು ಅನುಮೋದಿ ಸಿ ಸೂಕ್ತ ಪ್ರಸ್ತಾವನೆ ಕಳುಹಿಸಿಕೊಡುವಂತೆ ಸೂಚನೆ ನೀಡಿದರು.
ಮನೆಯಲ್ಲಿಯೇ ಕ್ವಾರಂಟೈನ್ ಹಾಗೂ ಐಸೋಲೇಷನ್ ಇರುವವರ ಮೇಲೆ ನಿಗಾ ವಹಿಸಲು ತಾಲೂಕುಗಳಲ್ಲಿ ಪ್ರತ್ಯೇಕ ತಂಡ ಮಾಡಿಕೊಂಡು ನಿಗಾ ವಹಿಸಬೇಕು. ಮನೆ-ಮನೆಗೆ ಆರೋಗ್ಯ ಸಮೀಕ್ಷಾ ಕಾರ್ಯ ಕೈಗೊಂಡು ವೃದ್ಧರ ನಿಯಮಿತ ಆರೋಗ್ಯ ತಪಾಸಣೆ ಮಾಡಬೇಕು. ಅಗ್ಯವಿದ್ದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ಅಲ್ಲದೇ ಕೋವಿಡ್ ಕೇರ್ ಸೆಂಟರ್‌ಗಳಿಗೆ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ನಿಗಾವಹಿಸಬೇಕು ಎಂದರು.
ಕೋವಿಡ್ ತಪಾಸಣೆ ಪರೀಕ್ಷೆ, ಚಿಕಿತ್ಸೆ ಸೇವೆ ಸೌಲಭ್ಯ ಸರ್ಕಾರ ಉಚಿತವಾಗಿ ನೀಡುತ್ತಿದೆ. ರೋಗ ಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಿಗೆ ತೆರಳಿ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ದೃಢಪಟಲ್ಲಿ ಕೋವಿಡ್ ಕೇರ್ ಕೇಂದ್ರಗಳಲ್ಲಿ ಉಚಿತ ವಸತಿ, ಊಟೋಪಚಾರ ಸೇರಿದಂತೆ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ. ಕೋವಿಡ್ ಸೋಂಕಿನಿಂದ ಮೃತಪಟ್ಟಲ್ಲಿ ಅಂತ್ಯಕ್ರಿಯೆ ನೆರವೇರಿಸಲು ತಾಲೂಕು ಮಟ್ಟದಲ್ಲಿ ರಚಿಸಲಾದ ತಂಡಗಳು ಕೋವಿಡ್ ಮಾರ್ಗಸೂಚಿಗಳನ್ವಯ ಅಂತ್ಯಕ್ರಿಯೆ ಸರಿಯಾಗಿ ನಿರ್ವಹಿಸಬೇಕು ಎಂದರು.
ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ಕಳೆದ ವರ್ಷ ಮಂಜೂರು ಆಗಿರುವ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳ್ಳಬೇಕು. ಜಿಲ್ಲೆಯ ಪ್ರತಿ ಗ್ರಾಮಗಳಿಗೂ ಸ್ಮಶಾನ ಇರಬೇಕು, ಸ್ಮಶಾನ ಭೂಮಿ ಅಗತ್ಯವಿರುವ ಗ್ರಾಮಗಳಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳಿದ್ದಲ್ಲಿ ಮಂಜೂರಿಗೆ ಕ್ರಮ ಕೈಗೊಳ್ಳಬೇಕು. ಸರ್ಕಾರೇತರ ಭೂಮಿ ಇದ್ದಲ್ಲಿ ಖರೀದಿಸಿ ಗ್ರಾಮಗಳಿಗೆ ಸ್ಮಶಾನ ಮಾಡಿಕೊಡಬೇಕು ಎಂದು ತಿಳಿಸಿದರು.
ಜಿಪಂ ಸಿಇಒ ಡಾ| ಆನಂದ.ಕೆ, ಎಸಿ ರಾಯಪ್ಪ ಹುಣಸಗಿ, ಎಸ್.ಎನ್. ರುದ್ರೇಶ್, ಡಾ| ಸತೀಶ ಬಸರಿಗಿಡದ, ರುದ್ರೇಶಪ್ಪ ಟಿ.ಎಸ್ ಇತರರು ಸಭೆಯಲ್ಲಿದ್ದರು.