ಕಲಬುರಗಿ: ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಬೆಳೆಗಳ ಸಮೀಕ್ಷೆಯನ್ನು ಇನ್ನು ಮುಂದೆ ಸರ್ಕಾರದ ಮೊಬೈಲ್ ಆ್ಯಪ್ ಮೂಲಕ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ನಗರದ ಡಾ| ಎಸ್.ಎಂ. ಪಂಡಿತ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಕೆದಾರರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ 1068 ಜನರನ್ನು ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆಗಾಗಿ ಗುರುತಿಸಲಾಗಿದ್ದು, ಒಂದು ಪ್ಲಾಟಿನ ಸಮೀಕ್ಷೆ ಕೈಗೊಂಡರೆ ಸೂಕ್ತ ಗೌರವ ಧನ ನೀಡಲಾಗುವುದು ಎಂದರು.
ಬೆಳೆ ಸಮೀಕ್ಷೆ ಸೂಕ್ತ ಸಮಯದಲ್ಲಿ ಕೈಗೊಳ್ಳಬೇಕಾಗುತ್ತದೆ. ಕಂದಾಯ ಇಲಾಖೆ ಅಧಿಕಾರಿಗಳು ಮೊಬೈಲ್ ಹೊಂದಿರುವ ಖಾಸಗಿ ವ್ಯಕ್ತಿಗಳಿಗೆ ಸಮೀಕ್ಷೆಗಾಗಿ ಸಹಾಯ ಮಾಡಬೇಕು. ಗ್ರಾಮ ಲೆಕ್ಕಿಗರನ್ನು ಮೇಲ್ವಿಚಾರಕರೆಂದು ನೇಮಿಸಲಾಗುತ್ತಿದ್ದು, ಖಾಸಗಿ ವ್ಯಕ್ತಿಗಳು ಕೈಗೊಂಡಿರುವ 40 ಪ್ಲಾಟುಗಳ ಬೆಳೆ ಸಮೀಕ್ಷೆ ಪರಿಶೀಲಿಸಿ, ದೃಢೀಕರಿಸಿ ಸಲ್ಲಿಸಬೇಕು. ಪ್ರತಿ ವರ್ಷ ಮೂರು ಖುತುಮಾನಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲು ಅಧಿಕಾರಿಗಳಿಂದ ಸಾಧ್ಯವಿಲ್ಲ ಎನ್ನುವ ಭಾವನೆಯಿಂದ ಸಮೀಕ್ಷೆಗಾಗಿ ಖಾಸಗಿ ವ್ಯಕ್ತಿಗಳ ಸಹಾಯ ಪಡೆಯಲಾಗುತ್ತಿದೆ ಎಂದರು.
ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಕೃಷಿಗೆ ಸಂಬಂಧಿತ ಇನ್ನಿತರ ಇಲಾಖೆಗಳಿಂದ ಪ್ರತಿವರ್ಷ ಬೆಳೆ ಸಮೀಕ್ಷೆ ಮಾಡುವ ಪದ್ಧತಿ ಈ ಹಿಂದಿನಿಂದಲೂ ಇದೆ. ಈ ವರ್ಷದಿಂದ ಬೆಳೆ ಸಮೀಕ್ಷೆಯನ್ನು ಗಣಕೀಕೃತಗೊಳಿಸಲಾಗುತ್ತಿದ್ದು, ಮೊಬೈಲ್ ಆ್ಯಪ್ ಮೂಲಕ ಕೃಷಿ ಕ್ಷೇತ್ರದ ಹಾಗೂ ಇಳುವರಿ ಗಣಕೀಕರಣ ಮಾಡಲಾಗುತ್ತಿದೆ.
ಮೊಬೈಲ್ ಆ್ಯಪ್‌ನಿಂದ ಕೈಗೊಳ್ಳಲಾಗುವ ನಿಖರವಾದ ಬೆಳೆ ಸಮೀಕ್ಷೆಯಿಂದ ಬರಗಾಲ ಅಥವಾ ಅತಿವೃಷ್ಟಿ ಸಮಯದಲ್ಲಿ ರೈತರಿಗೆ ಪರಿಹಾರ ನಿಗದಿಪಡಿಸಲು ಅನುಕೂಲವಾಗುವುದು. ಬೆಳೆ ಸಮೀಕ್ಷೆಯಿಂದಾಗಿ ಎಷ್ಟು ಪ್ರದೇಶದಲ್ಲಿ ಯಾವ ಬೆಳೆ ಇದೆ ಹಾಗೂ ಎಷ್ಟು ಇಳುವರಿ ಬರುತ್ತದೆ ಎಂಬ ಅಂಕಿ-ಅಂಶಗಳನ್ನು ಸಂಗ್ರಹಿಸಲು ಸಾಧ್ಯವಾಗಿ ಆಹಾರ ಭದ್ರತೆ ಯೋಜನೆ ರೂಪಿಸಲು ಅನುಕೂಲವಾಗುವುದು ಎಂದರು.
ರೈತರು ಪ್ರತಿ ವರ್ಷ ತಮ್ಮ ಹೊಲಗಳಲ್ಲಿ ಬೆಳೆ ಪದ್ಧತಿಯನ್ನು ಬದಲಿಸುತ್ತಾರೆ. ಇದರ ಮಾಹಿತಿ ಸೂಕ್ತವಾಗಿ ಲಭ್ಯವಾಗುವುದಿಲ್ಲ. ಪ್ರಸಕ್ತ ವರ್ಷದಿಂದ ಕೈಗೊಳ್ಳಲಾಗುತ್ತಿರುವ ಮೊಬೈಲ್ ಆ್ಯಪ್ ಸಮೀಕ್ಷೆಯಿಂದ ನಿಖರವಾಗಿ ಯಾವ ಹೊಲದಲ್ಲಿ ಯಾವ ಬೆಳೆ ಇದೆ ಎಂಬುದನ್ನು ತಿಳಿಯಬಹುದಾಗಿದೆ ಎಂದರು. ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಲೋಖಂಡೆ ಸ್ನೇಹಲ್ ಸುಧಾಕರ, ಕಲಬುರಗಿ ಸಹಾಯಕ ಆಯುಕ್ತ ರಾಚಪ್ಪ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.