Advertisement

ಬೆಳೆ ಸಮೀಕ್ಷೆ ಶೇ. 70 ಸಂಭಾವನೆ ಬಿಡುಗಡೆ

01:30 AM Jan 21, 2019 | Harsha Rao |

ಸುಳ್ಯ: ಮುಂಗಾರು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಯುವಕರಿಗೆ ಬಾಕಿಯಾಗಿದ್ದ ಸಂಭಾವನೆಯನ್ನು ನೀಡಲು ಸರಕಾರ ಕೊನೆಗೂ ನಿರ್ಧರಿಸಿದೆ. ಆರಂಭದಲ್ಲಿ ಶೇ. 70ರಷ್ಟು ಹಣ ಖಾತೆಗೆ ಪಾವತಿಯಾಗಲಿದೆ, ಬಳಿಕ ಉಳಿದ ಹಣ ಕೈ ಸೇರಲಿದೆ.

Advertisement

ರಾಜ್ಯ ಸರಕಾರ ಎಲ್ಲ ಜಿಲ್ಲೆಗಳ ಬಹುತೇಕ ಹಳ್ಳಿಗಳಲ್ಲಿ ಮುಂಗಾರು ಪೂರ್ವ ಬೆಳೆ ಸಮೀಕ್ಷೆ ನಡೆಸಲು ನಿರ್ಧರಿಸಿತ್ತು. ಗ್ರಾಮ ಲೆಕ್ಕಿಗರ ಜತೆ ಸಮೀಕ್ಷೆ ವೇಳೆ ಸ್ಥಳೀಯ ನಿರುದ್ಯೋಗಿ ಯುವಕರನ್ನು ಬಳಸಿಕೊಂಡಿತ್ತು. ಈ ಯುವಕರಿಗೆ ತರಬೇತಿ ಕೂಡ ನೀಡಲಾಗಿತ್ತು.

ಬಹುತೇಕ ಹಳ್ಳಿಗಳಲ್ಲಿ ಯುವಕರು ಕೃಷಿಕರ ಮನೆಗಳಿಗೆ ತೆರಳಿ ಮೊಬೈಲ್‌ ಆ್ಯಪ್‌ ಬಳಸಿ ಸರ್ವೆ ನಡೆಸಿದ್ದರು. ಪ್ರತಿ ಸರ್ವೆ ನಂಬರಿನ ಸಮೀಕ್ಷೆಗೆ ತಲಾ 10 ರೂ.ನಂತೆ ಸಂಭಾವನೆ ನೀಡಲು ಸರಕಾರ ನಿಗದಿಪಡಿಸಿತ್ತು. ಆದರೆ ಸಮೀಕ್ಷ ಮುಗಿದು 3 ತಿಂಗಳು ಕಳೆದರೂ ಸಂಭಾವನೆ ಸಿಕ್ಕಿರಲಿಲ್ಲ.

“ಉದಯವಾಣಿ’ಯಲ್ಲಿ ವರದಿ ಪ್ರಕಟ
ಸಂಭಾವನೆ ಸಿಗದ ಕುರಿತು ಜ. 16ರ “ಉದಯವಾಣಿ’ಯಲ್ಲಿ ವಿಸ್ತೃತ ವರದಿ ಪ್ರಕಟಿಸಿ ಸರಕಾರ ಮತ್ತು ಅಧಿಕಾರಿಗಳ ಗಮನ ಸೆಳೆದಿತ್ತು. ಈಗ ಸರಕಾರ ಸಂಭಾವನೆ ನೀಡಲು ಒಪ್ಪಿದೆ. ಆದರೆ ಪೂರ್ಣ ಪ್ರಮಾಣಕ್ಕೆ ಬದಲಾಗಿ ಶೇ. 70ರಷ್ಟು ಮಾತ್ರ ಆರಂಭದಲ್ಲಿ ನೀಡಲಾಗುತ್ತಿದೆ. ಮುಂಗಾರು ಬೆಳೆ ಸಮೀಕ್ಷೆ ಮುಗಿದಿದ್ದರೂ ಕೆಲವು ಭಾಗಗಳಲ್ಲಿ ಪರಿಪೂರ್ಣವಾಗಿಲ್ಲ, ಈ ಕಾರಣಕ್ಕೆ ಸಮೀಕ್ಷೆ ಪೂರ್ಣವಾದ ಬಳಿಕ ಪೂರ್ತಿ ಸಂಭಾವನೆಯನ್ನು ನೀಡಲಾಗುವುದು. ಅಲ್ಲಿಯ ತನಕ ಶೇ. 30ರಷ್ಟು ಸಂಭಾವನೆಯನ್ನು ತಡೆಹಿಡಿಯಲಾಗುತ್ತದೆ ಎಂದು ಕಂದಾಯ ಇಲಾಖೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಕಾರಣ ಹುಡುಕುತ್ತಿದ್ದಾರೆ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಮೀಕ್ಷಕ ಯುವಕರು, ನಮಗೆ ವಹಿಸಿದ ಕಾರ್ಯವನ್ನು ಪೂರ್ಣಗೊಳಿಸಿ ಕೊಟ್ಟಿದ್ದೇವೆ. ಬಿಸಿಲಿಗೆ ಓಡಾಡಿಸಿ ದಿನಕ್ಕೆ ಇಂತಿಷ್ಟು ಮನೆಗಳ ಸಮೀಕ್ಷೆ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದ ಕಂದಾಯ ಅಧಿಕಾರಿಗಳು ಸಂಭಾವನೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ವಿಳಂಬಕ್ಕೆ ಸಬೂಬು ಹುಡುಕುತ್ತಿದ್ದಾರೆ. ಇದು ಸರಿಯಲ್ಲ. ಈ ತಾರತಮ್ಯದಿಂದ ಬೇಸರ ಆಗಿದೆ ಎಂದು ಅಳಲು ವ್ಯಕ್ತಪಡಿಸಿದ್ದಾರೆ. 

Advertisement

ವಾರದೊಳಗೆ  ಹಣ ಖಾತೆಗೆ
ಸರಕಾರ ಹಣ ಬಿಡುಗಡೆ ಗೊಳಿಸಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಯುವಕರ ಖಾತೆಗಳಿಗೆ ವಾರದೊಳಗೆ ಸಂಭಾವನೆ ಹಣ ಪಾವತಿಯಾಗಲಿದೆ.
– ಸಂತೋಷ್‌ ಕುಮಾರ್‌, ತಹಶೀಲ್ದಾರ್‌, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next