ಹಾಸನ: ಲಾಕ್‌ಡೌನ್ ಜಾರಿಯಾದ ಪರಿಣಾಮ ರೈತರು ಬೆಳೆದ ಹಣ್ಣು, ತರಕಾರಿ ಬೆಳೆ ನಷ್ಟದ ಬಗ್ಗೆ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ. ರೇವಣ್ಣ ಆಗ್ರಹಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 24 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ರೈತರ ತೋಟಗಾರಿಕೆ ಬೆಳೆಗಳ ಮಾರಾಟಕ್ಕೆ ಸಾಧ್ಯವಾಗದೆ ಜಮೀನಿನಲ್ಲಿಯೇ ಹಾಳಾಗಿ ಭಾರೀ ನಷ್ಟ ಅನುಭವಿಸಿದ್ದಾರೆ. ಬೆಳೆಗಳಿಗೆ ಮಾಡಿದ್ದ ಖರ್ಚನ್ನಾದರೂ ರೈತರಿಗೆ ಸರಕಾರ ಪರಿಹಾರವಾಗಿ ತುಂಬಿಕೊಡಬೇಕು. ಜಿಲ್ಲಾಧಿಕಾರಿ ಸರಕಾರದ ನಿರ್ದೇಶನಕ್ಕೆ ಕಾಯುವುದನ್ನು ನೋಡುತ್ತಾ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಲೂ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಬ್ಬು ಗದ್ದೆಯಲ್ಲಿಯೇ ಒಣಗುತ್ತಿದೆ. ಹೊಳೆನರಸೀಪುರ ತಾಲೂಕಿನಲ್ಲಿ ಜ್ಯೂಸ್ ತಳಿಯ ಕಬ್ಬು ಬೆಳೆದಿದ್ದು ಸುಮಾರು 3,600 ಎಕರೆಯಲ್ಲಿ 14 ಗ್ರಾಮಗಳಲ್ಲಿ ಈ ತಳಿಯ ಕಬ್ಬು ಬೆಳೆದಿದ್ದಾರೆ. ಅದರ ಮಾರಾಟಕ್ಕೂ ಸಾಧ್ಯವಾಗಿಲ್ಲ. ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೊಡಿಸಬೇಕು ಎಂದರು.
ಮುಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದು, ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಸಾಮಗ್ರಿಗಳ ದಾಸ್ತಾನಿನ ಬಗ್ಗೆ ಕೃಷಿ ಇಲಾಖೆ ಕಾರ್ಯೋನ್ಮುಖ ವಾಗಬೇಕು. ಆಲೂಗಡ್ಡೆ ಬೆಳೆಗೆ ಶೇ.50 ಸಹಾಯಧನ ನೀಡುವ ಸಂಬಂಧ ಒತ್ತಡ ತರಲಾಗಿದೆ. ಹೀಗಾಗಿ ಜಿಲ್ಲಾಡಳಿತ, ಈಗಿನಿಂದಲೇ ಆಲೂಗಡ್ಡೆ ಬೆಳೆಗಾರರ ಸಮೀಕ್ಷೆ ನಡೆಸಿ ಅಗತ್ಯದಷ್ಟು ಬಿತ್ತನೆ ಬೀಜ, ಔಷಧಗಳ ಖರೀದಿಗೆ ಸಿದ್ಧತೆ ಆರಂಭಿಸಬೇಕು ಎಂದು ಸಲಹೆ ನೀಡಿದರು.
ತಂಬಾಕು ಬೆಳೆಗಾರರಿಗೆ ನೆರವು ನೀಡಲೂ ಮುಂದಾಗಬೇಕು. ಮಾವು ಮಾರಾಟಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಹೇಮಾವತಿ ಜಲಾಶಯದಿಂದ ನಾಲೆಗಳ ಮೂಲಕ ನೀರು ಹರಿಸಿ ಕೆರೆಕಟ್ಟೆ ತುಂಬಿಸಿ ನೀರಿನ ಅಭಾವ ನೀಗಿಸಬೇಕು. ಈ ಎಲ್ಲ ಬೇಡಿಕೆ ಬಗ್ಗೆ ಈಗಾಗಲೇ ಸರಕಾರಕ್ಕೆ ಜೆಡಿಎಸ್ ವತಿಯಿಂದ ಮನವಿ ಸಲ್ಲಿಸಿದ್ದು, ಜಿಲ್ಲಾಡಳಿತವೂ ವರದಿ ನೀಡಬೇಕೆಂದರು. ಅಲ್ಲದೆ ಕೋವಿಡ್-19 ನಿಯಂತ್ರಣ ಕ್ರಮಗಳಿಗಾಗಿ ಸರಕಾರ ಜಿಲ್ಲಾಡಳಿತಕ್ಕೆ 1.20 ಕೋಟಿ ರೂ. ನೀಡಿದೆ. ಆ ಮೊತ್ತ ಖರ್ಚು ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ವಿವರ ನೀಡಬೇಕು ಎಂದು ಆಗ್ರಹಿಸಿದರು.