ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ರೈತರು ಬೆಳೆದ ತರಕಾರಿ, ಹೂವು ನಷ್ಟವಾಗಿದೆ. ಜಿಲ್ಲಾಡಳಿತ ವತಿಯಿಂದ ಹಾನಿಯಾದ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ವಿತರಿಸಿದ್ದು, ಮತ್ತೂಂದು ಸುತ್ತಿನ ಪರಿಹಾರಕ್ಕೆ ಸರ್ವೆ ಕಾರ್ಯ ನಡೆಯುತ್ತಿದೆ.
ಕಳೆದ ವರ್ಷದಿಂದ ಮಳೆ ಪ್ರಮಾಣ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಇತ್ತೀಚೆಗೆ ಸುರಿವ ಮಳೆಯಿಂದಾಗಿ ರೈತರು ತಾವು ಬೆಳೆದ ತೋಟಗಾರಿಕೆ ಬೆಳೆಗಳು ನೀರು ಪಾಲಾಗಿ ನಷ್ಟಕ್ಕೀಡಾಗಿದ್ದಾರೆ. ಉತ್ತಮ ಮಳೆಯಿಂದಾಗಿ ಕೆರೆಕುಂಟೆಗಳು ತುಂಬಿವೆ. ಸಾಲು ಸಾಲು ಹಬ್ಬಗಳಿಂದ ಹೂ ಬೆಳೆದ ರೈತರು, ಹೆಚ್ಚು ಬೆಲೆ ಬರುತ್ತದೆ ಎಂಬ ಅಪೇಕ್ಷೆಯಲ್ಲಿದ್ದ ರೈತರಿಗೆ ನಿರಾಶೆ ಉಂಟುಮಾಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತರಕಾರಿ ಮತ್ತು ಹೂ ಬೆಳೆಗಳಿಗೆ ಸಾಲ ಮಾಡಿ ಬೆಳೆಯಲಾಗಿತ್ತು. ಮಳೆರಾಯನ ಆರ್ಭಟದಿಂದ ಫಸಲು ಬಂದರೂ ಸಹ ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.
ಪರಿಹಾರಕ್ಕೆ ಸರ್ವೆ ಆರಂಭ: ಪ್ರಸಕ್ತ ಸಾಲಿನ ಜುಲೈ ಹಾಗೂ ಆಗಸ್ಟ್‌ನಲ್ಲಿ ಸುರಿದ ಮಳೆಗೆ ಹಾನಿಗೊಳಗಾದ ತೋಟಗಾರಿಕೆ ಬೆಳೆಗೆ ಜಿಲ್ಲಾಡಳಿತ ಪರಿಹಾರ ವಿತರಿ ಸಿದೆ. ಮತ್ತೂಂದು ಸುತ್ತಿನ ಪರಿಹಾರಕ್ಕೆ ಸರ್ವೆ ಆರಂಭಿಸಲಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಸುರಿದ ಮಳೆಗೆ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ, ಬೆಳೆ ಹಾನಿಯ ಬಗ್ಗೆ ಆಯಾ ತಾಲೂಕು ತಹಶೀಲ್ದಾರ್ ಅವರಿಗೆ ವರದಿ ನೀಡಿತ್ತು. ಇದನ್ನು ಪರಿಶೀಲನೆ ನಡೆಸಿದ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದರ ಆಧಾರದ ಮೇಲೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 298 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ರೈತರಿಗೆ ಪರಿಹಾರ ತಲುಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತರಕಾರಿ, ಹೂ ನಷ್ಟ: ಪಾಲಿಹೌಸ್‌ಗಳಲ್ಲಿ ಬೆಳೆದ ಹೂ ಹೊರತಾಗಿ ಜಿಲ್ಲೆಯಲ್ಲಿ ಹೂ ಬೆಳೆಗಾರರು ಹೆಚ್ಚು ನಷ್ಟ ಅನುಭವಿಸಿದ್ದಾರೆ. ಜತೆಗೆ ತರಕಾರಿ ಬೆಳೆದ ರೈತರು ಧಾರಾಕಾರ ಮಳೆಯಿಂದ ಸಾಕಷ್ಟು ಆರ್ಥಿಕ ಹೊಡೆತ ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ. ನಷ್ಟ ದಾಖಲಾಗಿಲ್ಲ: ಪ್ರಸ್ತುತ ಕಳೆದೊಂದು ವಾರ ದಿಂದ ಮತ್ತೆ ಮಳೆ ಚುರುಕುಗೊಂಡಿದ್ದು, ತೋಟ ಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿದೆ. ಆದರೆ, ಇದುವರೆಗೆ ನಿಖರವಾಗಿ ತೋಟಗಾರಿಕೆ ಬೆಳೆ ನಷ್ಟ ವಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ. ಆದರೆ, ಮಳೆ ಹೀಗೆ ಮುಂದುವರಿದರೆ ಟೊಮೆಟೋ, ಮೆಣಸಿನ ಕಾಯಿ, ಕ್ಯಾರೆಟ್, ಸೊಪ್ಪು ಮತ್ತಿತರ ಬೆಳೆಗೆ ಹೊಡೆತ ಬೀಳಲಿದೆ. ಕೆಲವು ಕಡೆಗಳಲ್ಲಿ ಕೆರೆ ತುಂಬಿ ಹರಿಯು ತ್ತಿರುವ ಕೋಡಿ ನೀರು ಅಕ್ಕಪಕ್ಕದ ಜಮೀನುಗಳಿಗೆ ಹರಿದು, ತೋಟಗಳು ಜಲಾವೃತಗೊಂಡಿವೆ. ಇದ ರಿಂದ ತರಕಾರಿ ಮತ್ತಿತರ ಬೆಳೆಗಳು ನೀರಿನಲ್ಲಿ ಕೊಳೆಯುತ್ತಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಮಳೆಯಿಂದ ಹಾನಿಯಾದ ತೋಟಗಾರಿಕೆ ಬೆಳೆ ಬಗ್ಗೆ ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ವರದಿ ನೀಡಿದೆ. ಇದರ ಆಧಾರದ ಮೇಲೆ ಈಗಾಗಲೇ ಸಂಬಂಧಪಟ್ಟ ರೈತರ ಖಾತೆಗೆ ಪರಿಹಾರ ಧನ ಸಂದಾಯವಾಗಿದೆ ಎಂಬ ಮಾಹಿತಿಯಿದೆ. ಕಳೆದ 4-5 ದಿನದಿಂದ ಮಳೆ ಸುರಿಯುತ್ತಿದ್ದು, ತೋಟಗಾರಿಕೆ ಬೆಳೆ ಹಾನಿಯಾದ ಮಾಹಿತಿಯಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.
– ಗುಣವಂತ, ತೋಟಗಾರಿಕೆ ಉಪನಿರ್ದೇಶಕ, ಬೆಂ.ಗ್ರಾಮಾಂತರ
ಮಳೆ ಪ್ರಮಾಣ ಹೆಚ್ಚಾಗಿರು ವುದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ತಾವು ಬೆಳೆದ ತರಕಾರಿ ಇತರೆ ಬೆಳೆಗಳು ರೋಗರುಜಿನಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಲ ಮಾಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಅಧಿಕಾರಿಗಳು ಪರಿಹಾರವಾಗಿ ಹತ್ತು, ಇಪ್ಪತ್ತು ಸಾವಿರ ರೂ. ನೀಡಿದರೆ ಯಾವುದಕ್ಕೂ ಪ್ರಯೋಜನವಾಗುವುದಿಲ್ಲ. ಕನಿಷ್ಟ 1ಲಕ್ಷದಿಂದ 2ಲಕ್ಷ ರೂ.,ವರೆಗೆ ಸರ್ಕಾರ ಘೋಷಿಸಬೇಕು.
– ವಿಜಯಕುಮಾರ್, ರೈತ
– ಎಸ್.ಮಹೇಶ್