Advertisement

ಮೂರು ವರ್ಷಗಳಿಂದ ನೀಡಿಲ್ಲ ಬೆಳೆ ಸಾಲ

11:02 AM Jul 23, 2019 | Suhan S |

ಕುಮಟಾ: ಹಿಂದಿನ ಸಿಎಂ ಸಿದ್ದರಾಮಯ್ಯ ಸರ್ಕಾರದ ಸಾಲಮನ್ನಾ ಪ್ರಯೋಜನ ಇನ್ನೂ ಬಂದಿಲ್ಲ. ಕಳೆದ ಮೂರು ವರ್ಷದಿಂದ ರೈತರಿಗೆ ಬೆಳೆ ಸಾಲ ಸಿಗಲಿಲ್ಲ. ಸೇವಾ ಸಹಕಾರಿ ಸಂಘ ರೈತರಿಗೆ ಸೌಲಭ್ಯದಿಂದ ವಂಚಿಸುತ್ತಿದೆ. ಅದಲ್ಲದೇ, ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಕೆಲವು ಸಂಶಯಾಸ್ಪದ ನಡೆತೆ ಕುರಿತು ಆರೋಪಿಸಿ ಬರಗದ್ದೆ ಸೇವಾ ಸಹಕಾರಿ ಸಂಘದಲ್ಲಿ ನಡೆದ ಸಭೆಯಲ್ಲಿ ರೈತರು, ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘ ಕಳೆದ 3 ವರ್ಷಗಳಿಂದ ಬೆಳೆಸಾಲ ನೀಡದೆ ರೈತರಿಗೆ ವಂಚಿಸಿದೆ. 2017ರಲ್ಲಿ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ 50,000 ರೂ. ಸಾಲಮನ್ನಾವನ್ನು ಸರ್ಕಾರ ಸಂಪೂರ್ಣವಾಗಿ ನೀಡಿದೆ. ಆದರೆ ಈ ಸಂಘ ಈವರೆಗೂ ಸದಸ್ಯರ ಖಾತೆಗೆ ಹಾಕಿಲ್ಲ. ಅಲ್ಲದೆ ರೈತರಿಗೆ ಸಾಲ ಚುಕ್ತಾ ಪ್ರಮಾಣ ಪತ್ರ ನೀಡಿಲ್ಲ ಎಂದು ಸಹಕಾರಿ ಸಂಘದ ಕಾರ್ಯದರ್ಶಿ ವಿರುದ್ಧ ಜನ ತೀವ್ರ ವಾಗ್ಧಾಳಿ ನಡೆಸಿದರು.

ಕೆಡಿಸಿಸಿ ಬ್ಯಾಂಕ್‌ ಕುಮಟಾ ಶಾಖೆ ಸಿಬ್ಬಂದಿ ಹಾಗೂ ಬರಗದ್ದೆ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಇಲ್ಲಿನ 200ಕ್ಕೂ ಅಧಿಕ ರೈತರಿಗೆ ವಿತ್‌ಡ್ರಾವಲ್ ಚೆಕ್ಕಿಗೆ ಮೊತ್ತ ನಮೂದಿಸಿದೇ ಸಹಿ ಪಡೆದುಕೊಂಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಕೆಲವರ ಮನೆಮನೆಗೆ ತೆರಳಿ ಸಹಿ ಪಡೆದುಕೊಂಡಿದ್ದಾರೆ ಎಂಬ ಮಾತೂ ಕೇಳಿಬಂದಿದೆ. ನಿಯಮ ಉಲ್ಲಂಘಿಸಿ ಬ್ಯಾಂಕ್‌ ಸಹಕಾರಿ ಸಂಘದ ಕಾರ್ಯದರ್ಶಿ ಮೂಲಕ ಸಹಿ ಪಡೆದಿರುವುದು ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಸೇವಾ ಸಹಕಾರಿ ಸಂಘದ ಕಾರ್ಯವೈಖರಿ ಬಗ್ಗೆ ರೈತರು ಸಂಶಯ ವ್ಯಕ್ತಪಡಿಸಿದರಲ್ಲದೇ, ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ.

ಸಿಎಂ ಕುಮಾರಸ್ವಾಮಿ ರೈತರ 1 ಲಕ್ಷದ ವರೆಗಿನ ಸಾಲಮನ್ನಾ ಮಾಡಿದ್ದರು. ಆದರೆ 35 ರಿಂದ 41 ಸಾವಿರ ರೂ. ಸಾಲ ಪಡೆದ ರೈತರ ಖಾತೆಗೂ 1 ಲಕ್ಷ ರೂ. ಸಾಲಮನ್ನಾ ಮಾಡಿಸಿ ಕಾರ್ಯದರ್ಶಿ ಅಕ್ರಮ ಎಸಗಿದ್ದಾರೆ. ಅದಲ್ಲದೇ, ಕೆಲವರ ವಿತ್‌ಡ್ರಾವಲ್ ಚೆಕ್ಕಿನ ಮೊತ್ತವನ್ನು ಡ್ರಾ ಮಾಡಲಾಗಿದೆ. ಆದರೆ ರೈತರಿಗೆ ಯಾವ ಮೊತ್ತವನ್ನೂ ನಿಡಿಲ್ಲ ಎಂದು ಹಲವು ರೈತರು ದೂರಿದ್ದಾರೆ.

ಸೇವಾ ಸಹಕಾರಿ ಸಂಘದಲ್ಲಿ ವ್ಯವಹಾರ ನಡೆಸುತ್ತಿರುವ ಗೀತಾ ಶಾಸ್ತ್ರಿ, ಗಣಪತಿ, ಎನ್‌.ಎಸ್‌ ಹೆಗಡೆ ಮೊದಲಾದವರು ಮಾತನಾಡಿ, ರೈತರು ಪಡೆದ ಸಾಲಕ್ಕಿಂತ ಹೆಚ್ಚಿನ ಮೊತ್ತ ಅವರ ಖಾತೆಗೆ ಜಮಾ ಆಗಿದೆ. ಆದರೆ ಆ ಹಣ ಯಾರಿಗೆ ಸೇರಿತು. ಅದರ ಪ್ರಯೋಜನ ಯಾರು ಪಡೆದರು ಎಂದು ಪ್ರಶ್ನಿಸಿದರು. ಬ್ಯಾಂಕಿಗೆ ಅಥವಾ ಸೇವಾ ಸಹಕಾರಿ ಸಂಘಗಳಿಗೆ ಪ್ರತಿಯೊಬ್ಬ ರೈತನ ಮನೆ ಮನೆಗೆ ತೆರಳಿ ವಿತ್‌ಡ್ರಾವಲ್ ಚೆಕ್‌ ಒಯ್ಯಲು ನಿಯಮದಲ್ಲಿ ಅವಕಾಶ ಇರುವ ಬಗ್ಗೆ ಪ್ರಶ್ನಿಸಿದರು.

Advertisement

ಕುಮಟಾ ಕೆಡಿಸಿಸಿ ಬ್ಯಾಂಕ್‌ ಮ್ಯಾನೇಜರ್‌ ಮತ್ತು ಸುಪರ್ವೈಸರ್‌ ಸಮರ್ಪಕವಾಗಿ ಉತ್ತರಿಸಿಲ್ಲ. ಅಲ್ಲದೆ ಬ್ಯಾಂಕ್‌ ಸಿಬ್ಬಂದಿ ಸಹ ಈ ಕೆಲಸಕ್ಕೆ ಅಣಿಯಾಗಿರುವ ಬಗ್ಗೆ ಸಹ ಅವರು ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಕೆಡಿಸಿಸಿ ಬ್ಯಾಂಕ್‌ ಅಧೀನದಲ್ಲಿ ನಡೆಯುವ ಸೇವಾ ಸಹಕಾರಿ ಸಂಘಗಳ ಸಂಪೂರ್ಣ ವ್ಯವಹಾರ ಮೇಲುಸ್ತುವಾರಿಯಲ್ಲಿ ನಡೆಯುತ್ತದೆ. ಹೀಗಿರುವಾಗ ಸೇವಾ ಸಹಕಾರಿ ಸಂಘದಲ್ಲಿ ಇಷ್ಟೊಂದು ಪ್ರಮಾದಗಳು ನಡೆಯುತ್ತಿದ್ದರೂ ಕೆಡಿಸಿಸಿ ಬ್ಯಾಂಕ್‌ ಮೌನ ತಾಳಿರುವುದು ಸಂಶಯಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next