Advertisement

ಬೆಳೆ ಸಾಲ ಮನ್ನಾ ಪ್ರಕ್ರಿಯೆ ಆರಂಭ

02:54 PM Dec 15, 2018 | Team Udayavani |

ಯಾದಗಿರಿ: ಕರ್ನಾಟಕ ಸರ್ಕಾರ ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ 2 ಲಕ್ಷ ರೂ. ವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡಿದ್ದು, ಜಿಲ್ಲೆಯ ವಾಣಿಜ್ಯ ಬ್ಯಾಂಕ್‌ಗಳ 98 ಶಾಖೆಗಳಲ್ಲಿ ಡಿಸೆಂಬರ್‌ 15ರಿಂದ 2019ರ ಜನವರಿ 10ರವರೆಗೆ ಬೆಳೆ ಸಾಲ ಮನ್ನಾ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು
ವಾಣಿಜ್ಯ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಲು ಒಂದು ತಂತ್ರಾಂಶವನ್ನು ತಂದಿದೆ. ಜಿಲ್ಲೆಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದಿರುವ 94,698 ರೈತರು ಸಾಲಮನ್ನಾ ಯೋಜನೆಗೆ ಅರ್ಹರಿದ್ದಾರೆ. ಈ ಯೋಜನೆಯಡಿ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿ ಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ಹಾಗಾಗಿ, ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೇ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಕಾರ್ಯ ವೇಳೆಯಲ್ಲಿ ತೆರಳಿ
ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.

ಪ್ರತಿಯೊಬ್ಬ ಬೆಳೆ ಸಾಲ ಪಡೆದ ರೈತರು ಕಡ್ಡಾಯವಾಗಿ ತಮ್ಮ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ನಕಲು ಪ್ರತಿಗಳನ್ನು ಸಲ್ಲಿಸಬೇಕು. ಪಹಣಿ ಅವಶ್ಯಕತೆ ಇಲ್ಲ. ಆದರೆ, ತಾವು ಸಾಲ ಪಡೆದ ಜಮೀನಿನ ಸರ್ವೇ ನಂಬರ್‌ ಮಾಹಿತಿ ನೀಡಿದರೆ ಸಾಕು. ಒಂದು ಬ್ಯಾಂಕ್‌ ಶಾಖೆಯಲ್ಲಿ ಪ್ರತಿದಿನ ಕನಿಷ್ಠ 40 ರೈತರ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ತದನಂತರದ ರೈತರಿಗೆ ಕ್ರಮ ಬದ್ಧವಾಗಿ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿ, ಟೋಕನ್‌ಗಳನ್ನು ನೀಡಲಾಗುವುದು. ತಮಗೆ ನೀಡಿದ ದಿನಾಂಕಗಳಂದು ಬ್ಯಾಂಕ್‌ ಶಾಖೆಗೆ ತೆರಳಿ ರೈತರ ಸ್ವಯಂ ದೃಢೀಕರಣ
ಪತ್ರದೊಂದಿಗೆ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ನಕಲು ಮತ್ತು ಭೂಮಿಯ ಸರ್ವೇ ನಂಬರ್‌ ಮಾಹಿತಿ ನೀಡಬೇಕು ಎಂದು ವಿವರಿಸಿದರು.

2009ರ ಏಪ್ರಿಲ್‌ 1ರಿಂದ ಮಂಜೂರಾದ ಬೆಳೆ ಸಾಲಗಳು ಮತ್ತು 2017ರ ಡಿಸೆಂಬರ್‌ 31ರ ವರೆಗೆ ಬಾಕಿ ಇರುವ ಬೆಳೆ ಸಾಲ (ಸುಸ್ತಿಸಾಲ, ಪುನರಾವಸ್ತಿ ಸಾಲ, ಎನ್‌.ಪಿ.ಎ ಸಾಲ)ಗಳು ಅರ್ಹವಾಗಿರುತ್ತವೆ. ಕೇವಲ ವೈಯಕ್ತಿಕ ಬೆಳೆಸಾಲ
ಪಡೆದ ರೈತರು ಮಾತ್ರ ಅರ್ಹರಿರುತ್ತಾರೆ. ಒಂದು ಕುಟುಂಬವು (ಅಂದರೆ ಗಂಡ+ಹೆಂಡತಿ+ಅವಲಂಬಿತ ಮಕ್ಕಳು) ಗರಿಷ್ಠ 2 ಲಕ್ಷದ ವರೆಗೆ ಮಾತ್ರ ಬೆಳೆಸಾಲ ಮನ್ನಾ ಪಡೆಯಲು ಅರ್ಹರಿರುತ್ತಾರೆ. ಇದಕ್ಕಾಗಿ 2018ರ ಜುಲೈ 5ಕ್ಕಿಂತ ಮುಂಚಿತವಾಗಿ ಪಡೆದ ರೇಷನ್‌ ಕಾರ್ಡ್‌ನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದರು.

ಸಾಲ ಮನ್ನಾಕ್ಕೆ ಅವಶ್ಯ ಇರುವ ದಾಖಲೆಗಳ ಮಾಹಿತಿಯನ್ನು ಬ್ಯಾಂಕ್‌ ಶಾಖೆಯಲ್ಲಿ ಪ್ರದರ್ಶಿಸಲು ಮತ್ತು ರೈತರಿಗೆ ಸರಿಯಾದ ಮಾಹಿತಿ ನೀಡಲು ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ಬ್ಯಾಂಕ್‌ ಶಾಖೆಯಲ್ಲಿ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್‌ ಬಂದೋಬಸ್ತ್ನ್ನು ಕೂಡ ನೀಡಲಾಗಿದೆ. ರೈತರಿಗೆ ಯಾವುದಾದರೂ ಗೊಂದಲ, ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ 08473-253703 ಸಂಖ್ಯೆಗೆ ಕರೆ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಕೋರಿದರು.

Advertisement

ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಆರ್‌. ಗೋಪಾಲ, ಸಹಕಾರ ಸಂಘಗಳ
ಉಪ ನಿಬಂಧಕ ವಿಶ್ವನಾಥ ಮಲಕೂಡ ಹಾಜರಿದ್ದರು.

ಮೇವು ಸುಡದಂತೆ ರೈತರಲ್ಲಿ ಮನವಿ  2018-19ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 8 ಲಕ್ಷ ಕ್ವಿಂಟಲ್‌ ತೊಗರಿ ಖರೀದಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭಾರತೀಯ ಹತ್ತಿ ನಿಗಮದ ವತಿಯಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ ಹತ್ತಿಗೆ 5,450 ರೂ. ನಂತೆ ಶಹಾಪುರ ನಗರದ ಶ್ರೀ ಮಂಜುನಾಥ ಹತ್ತಿ ಜಿನ್ನಿಂಗ್‌ ಮಿಲ್‌ನಲ್ಲಿ ಹತ್ತಿ ಖರೀದಿ ಕೇಂದ್ರವನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದಂತೆ ರೈತರಿಂದ ಭತ್ತ ಖರೀದಿಸಲು ರಾಜ್ಯ ಸರ್ಕಾರ ಆದೇಶಿಸಿದೆ.

ಆದರೆ, ಜಿಲ್ಲೆಯ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಹೆಚ್ಚಿನ ದರ ಇರುವುದರಿಂದ ಖರೀದಿ ಕೇಂದ್ರ ಸ್ಥಾಪಿಸಿಲ್ಲ. ಜಿಲ್ಲೆಯಲ್ಲಿ ಮಳೆ ಕೊರತೆ ಇರುವುದರಿಂದ ಭತ್ತ ಬೆಳೆದ ರೈತರು ಗದ್ದೆಗಳಲ್ಲಿ ಮೇವು ಸುಡದಂತೆ ಮನವಿ ಮಾಡಲಾಗಿದೆ. ರೈತರು ಕೂಡ ಜಿಲ್ಲಾಡಳಿತದ ಮನವಿಗೆ ಸ್ಪಂದಿಸುತ್ತಿದ್ದು, ಮೇವು ಸಂಗ್ರಹಕ್ಕೆ ನೆರವಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ರೈತರನ್ನು ಅಭಿನಂದಿಸಿದರು.

ಸಹಕಾರ ಸಂಘ, ಸಹಕಾರ ಬ್ಯಾಂಕ್‌ ಗಳಿಂದ ರೈತರು ಪಡೆದಿರುವ ಅಲ್ಪಾವಧಿ ಬೆಳೆಸಾಲ ದಿನಾಂಕ 10-7-2018ಕ್ಕೆ
ಹೊಂದಿರುವ ಹೊರಬಾಕಿಯಲ್ಲಿ ಗರಿಷ್ಠ 1 ಲಕ್ಷ ರೂಪಾಯಿವರೆಗಿನ ಸಾಲಮನ್ನಾ ಯೋಜನೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಈ ಸಾಲಮನ್ನಾ ಯೋಜನೆಯಡಿ ಜಿಲ್ಲೆಯಲ್ಲಿ 13,719 ರೈತ ಫಲಾನುಭವಿಗಳಿದ್ದಾರೆ.  ಇವರು ಈಗಾಗಲೇ ಸ್ವಯಂ ದೃಢೀಕರಣ ಅರ್ಜಿ ಸಲ್ಲಿಸಿದ್ದಾರೆ.
 ಎಂ. ಕೂರ್ಮಾರಾವ್‌, ಜಿಲ್ಲಾಧಿಕಾರಿ

ರೈತರು ಸಹಕಾರ ನೀಡಲಿ ರೈತರು ಗೊಂದಲಗಳಿಗೆ ಒಳಗಾಗದೇ ಶಾಂತ ರೀತಿಯಿಂದ ಸರತಿ ಸಾಲಿನಲ್ಲಿ ನಿಂತು ತಮ್ಮ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಹಕರಿಸಿ, ಸಾಲಮನ್ನಾ ಯೋಜನೆ ಲಾಭವನ್ನು ಪಡೆಯಬೇಕು. ಸಾಲ ಮನ್ನಾಕ್ಕಾಗಿ ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಹಣ ಕೊಡಬಾರದು. ಅಗತ್ಯ ದಾಖಲೆಗಳೊಂದಿಗೆ ಬ್ಯಾಂಕ್‌ ಶಾಖೆಯನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next