ಹುಬ್ಬಳ್ಳಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ 2019-20ನೇ ಸಾಲಿನ ಬೆಳೆ ವಿಮೆಗೆ ಮುಂಗಾರು ಕಂತು ತುಂಬುವ ಕೊನೆಯ ದಿನಾಂಕವನ್ನು ಜು. 31ರಂದು ನಿಗದಿಪಡಿಸಲಾಗಿದ್ದು, ಬ್ಯಾಂಕ್‌ಗಳು ರೈತರಿಗೆ ಪೂರಕ ಮಾಹಿತಿ ನೀಡಬೇಕು ಎಂದು ಜಿಲ್ಲಾ ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಈಶ್ವರನಾಥ ಹೇಳಿದರು.
2018-19ನೇ ಸಾಲಿನ ಬೆಳೆ ವಿಮೆ ಹಣ ಇನ್ನೂ ಬಂದಿಲ್ಲ. ಲೋಕಸಭೆ ಚುನಾವಣೆ ಸೇರಿದಂತೆ ಹಲವು ಕಾರಣಗಳಿಂದ ಅದು ವಿಳಂಬವಾಗಿರಬಹುದು. ಬ್ಯಾಂಕ್ ಅಧಿಕಾರಿಗಳು ರೈತರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಬಾರದು. ಬೆಳೆ ವಿಮೆ ಹಣವನ್ನು ಸಾಲದ ಮೊತ್ತಕ್ಕೆ ಕಡಿತ ಮಾಡಿಕೊಳ್ಳುವುದಾಗಿ ಕೆಲ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಹೇಳುತ್ತಿರುವುದು ಗಮನಕ್ಕೆ ಬಂದಿದೆ. ಆಲ್ಲದೇ ಸಾಲ ಹೊಂದಿರುವ ರೈತರ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗುತ್ತದೆ ಎಂದು ಗೊಂದಲ ಮೂಡಿಸಲಾಗಿದೆ. ಈ ಕುರಿತು ಕೆಲವರು ಜಿಲ್ಲಾಧಿಕಾರಿಗೂ ದೂರು ನೀಡಿದ್ದಾರೆ. ಸರಕಾರಕ್ಕೆ ಕೆಟ್ಟ ಹೆಸರು ತರುವುದು ಸರಿಯಲ್ಲ ಎಂದು ಹೇಳಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕವಾಗಿ 6000 ರೂ. ನೀಡಲಾಗುತ್ತದೆ. 4 ತಿಂಗಳಿಗೆ 2000ರೂ.ಗಳಂತೆ ಫಲಾನುಭವಿ ರೈತರ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತದೆ. ಇದು ಕೇಂದ್ರ ಸರಕಾರದ ಯೋಜನೆಯಾಗಿದ್ದು, ಸಂಪೂರ್ಣ ಹಣವನ್ನು ಕೇಂದ್ರ ಸರಕಾರವೇ ನೀಡುತ್ತದೆ ಎಂದರು.
ಗ್ರಾಹಕ ಸೇವಾ ಕೇಂದ್ರ: ಭಾರತಿ ಅಕ್ಸಾ ಜನರಲ್ ಇನ್ಶೂರೆನ್ಸ್ ಕಂಪನಿ ಜಿಲ್ಲಾ ವ್ಯವಸ್ಥಾಪಕ ವಿಜಯಾನಂದ ಬೆಲ್ಲದ ಮಾತನಾಡಿ, ಭಾರತಿ ಅಕ್ಸಾ ಬ್ಯಾಂಕ್ 2019-20ನೇ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆ ವಿಮೆ ಕಂತು ಭರಿಸಿಕೊಳ್ಳಲಿದೆ. ನಮ್ಮ ಸಂಸ್ಥೆಯ ವತಿಯಿಂದ ಇಲ್ಲಿನ ವಿದ್ಯಾನಗರ, ಬ್ಯಾಹಟ್ಟಿ, ತಾರಿಹಾಳ, ಛಬ್ಬಿಯಲ್ಲಿ ಗ್ರಾಹಕರ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ರೈತರು ಬ್ಯಾಂಕ್‌ಗಳಲ್ಲಿ ಅಲ್ಲದೇ ಸೇವಾ ಕೇಂದ್ರಗಳಲ್ಲಿಯೂ ಕಂತು ತುಂಬಬಹುದು ಎಂದು ತಿಳಿಸಿದರು.
Advertisement
ತಾಪಂ ಸಭಾಭವನದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆ ವಿಮೆ ಕಂತು ತುಂಬಲು ಭಾರತಿ ಅಕ್ಸಾ ಜನರಲ್ ಇನ್ಶೂರೆನ್ಸ್ ಕಂಪನಿಗೆ ವಹಿಸಲಾಗಿದೆ. ಬ್ಯಾಂಕ್‌ಗಳ ಅಧಿಕಾರಿಗಳು ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದರು.
Related Articles
Advertisement
ಅರ್ಜಿ, ಆರ್‌ಟಿಸಿ ಉತಾರ, ಬ್ಯಾಂಕ್ ಪಾಸ್‌ಬುಕ್ ಹಾಗೂ ಆಧಾರ್ ಕಾರ್ಡ್ ಪ್ರತಿ ನೀಡಬೇಕಾಗುತ್ತದೆ. ಕೆಂಪು ಮೆಣಸಿನಕಾಯಿ ಹಾಗೂ ಹತ್ತಿಯನ್ನು ವಾಣಿಜ್ಯ ಬೆಳೆಯಾಗಿ ಗುರುತಿಸಲಾಗಿದ್ದು, ವಾಣಿಜ್ಯ ಬೆಳೆಗಳಿಗೆ ವಿಮಾ ಮೊತ್ತದ ಶೇ.5 ಹಾಗೂ ಉಳಿದ ಬೆಳೆಗಳಿಗೆ ಶೇ.2 ಹಣವನ್ನು ಕಂತು ರೂಪದಲ್ಲಿ ಭರಿಸಿಕೊಳ್ಳಲಾಗುತ್ತದೆ ಎಂದರು.
ರೈತರು ಹೆಚ್ಚಿನ ವಿಮಾ ಮೊತ್ತದ ಆಸೆಗಾಗಿ ಮಳೆಯಾಶ್ರಿತ ಬೇಸಾಯವಿದ್ದರೂ ನೀರಾವರಿ ಬೇಸಾಯ ಎಂದು ಅರ್ಜಿಯಲ್ಲಿ ಬರೆಯುತ್ತಾರೆ. ಉತಾರದಲ್ಲಿ ಒಣ ಬೇಸಾಯ ಎಂದು ನಮೂದಾಗಿರುವುದರಿಂದ ವಿಮಾ ಮೊತ್ತ ನೀಡಲು ತೊಂದರೆಯಾಗುತ್ತದೆ. ಆದ್ದರಿಂದ ರೈತರು ನಿಜ ಸ್ಥಿತಿ ಬರೆಯಬೇಕು ಎಂದು ಹೇಳಿದರು.
10 ರೂಪಾಯಿ ನಾಣ್ಯ ಸಂಗ್ರಹ ವರದಿ ನೀಡಲು ಸೂಚನೆ:
10 ರೂ. ನಾಣ್ಯಗಳು ಚಲಾವಣೆಯಲ್ಲಿಲ್ಲ ಎಂಬ ವದಂತಿ ಹರಡಿರುವುದರಿಂದ ಹಲವು ಬ್ಯಾಂಕ್ ಶಾಖೆಗಳಲ್ಲಿ 10 ರೂ. ನಾಣ್ಯಗಳು 5 ಲಕ್ಷ ರೂ.ಗಳಿಗಿಂತ ಹೆಚ್ಚು ಸಂಗ್ರಹಗೊಂಡಿವೆ. ಅವುಗಳ ಬಗ್ಗೆ ಮಾಹಿತಿ ನೀಡಬೇಕು. ತಾಲೂಕಿನ ಬ್ಯಾಂಕ್‌ಗಳಲ್ಲಿನ ಸಂಗ್ರಹಗೊಂಡಿರುವ ನಾಣ್ಯಗಳ ಮಾಹಿತಿ ಪಡೆದು ಅವುಗಳನ್ನು ಪಡೆದುಕೊಳ್ಳುವಂತೆ ಭಾರತೀಯ ರಿಜರ್ವ್ ಬ್ಯಾಂಕ್‌ಗೆ ಮನವಿ ಮಾಡಲಾಗುವುದು. ಅವುಗಳನ್ನು ನೆರೆ ರಾಜ್ಯಗಳ ಬ್ಯಾಂಕ್‌ಗಳಿಗೆ ನೀಡುವಂತೆ ಕೋರಲಾಗುವುದು ಎಂದು ಈಶ್ವರನಾಥ ತಿಳಿಸಿದರು.
ಎಲ್ಲ ಆ್ಯಪ್‌ಗ್ಳಿಗೂ ಎಟಿಎಂ ಕಾರ್ಡ್ ಲಿಂಕ್ ಬೇಡ:
ಜನರು ವಿವಿಧ ಆ್ಯಪ್‌ಗ್ಳಿಗೆ ಎಟಿಎಂ ಕಾರ್ಡ್ ಲಿಂಕ್ ಮಾಡುವುದರಿಂದ ತೊಂದರೆ ಅನುಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ಆ್ಯಪ್‌ಗ್ೂ ಎಟಿಎಂ ಕಾರ್ಡ್ ಲಿಂಕ್ ಮಾಡಬಾರದು. ಇದರಿಂದ ಖಾತೆಯಲ್ಲಿನ ಹಣವನ್ನು ಲಪಟಾಯಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಯಾವುದೇ ಕಾರಣಕ್ಕೂ ಒಟಿಪಿ ಸಂಖ್ಯೆಯನ್ನು ಬಹಿರಂಗಪಡಿಸಬಾರದು. ಮಕ್ಕಳ ಎಜುಕೇಶನ್ ಅಪ್ಲಿಕೇಶನ್‌ಗಳಲ್ಲಿಯೂ ಖಾತೆಯಿಂದ ಮೋಸದಿಂದ ಹಣ ಪಡೆಯುವ ಸಾಧ್ಯತೆಯಿದ್ದು, ಜನರು ಜಾಗರೂಕರಾಗಿರಬೇಕು ಎಂದು ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಈಶ್ವರನಾಥ ಹೇಳಿದರು.