ದೊಡ್ಡಬಳ್ಳಾಪುರ: ತೋಟಗಾರಿಕೆ ಇಲಾಖೆಯಿಂದ ಮಾವಿನ ಸವರುವಿಕೆ, ಮೇಲಾವರಣ ನಿರ್ವಹಣೆ, ಪೋಷಕಾಂಶದ ನಿರ್ವಹಣೆ ಕುರಿತಾದ ತರಬೇತಿ ಹಾಗೂ ಬೆಳೆ ವಿಮೆ ಕುರಿತಂತೆ ಅರಿವು ಕಾರ್ಯಾಗಾರ ತಾಲೂಕಿನ ದೊಡ್ಡ ಬೆಳವಂಗಲ ಹೋಬಳಿ ಅಕ್ಕತಮ್ಮನಹಳ್ಳಿ ಗ್ರಾಮದ ರೈತ ಹನುಮಂತರಾಜು ಅವರ ಮಾವಿನ ತೋಟದಲ್ಲಿ ನಡೆಯಿತು.
ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಡಾ.ಹಿತ್ತಲಮುನಿ ಅವರು, ಮಾವಿನ ಹಣ್ಣಿನ ಕೊಯ್ಲು ನಂತರದ ಹಂಗಾಮಿನಲ್ಲಿ ಬೆಳಗಾರರು ಕೈಗೊಳ್ಳಬೇಕಾದ ಕ್ರಮ ವಿವರಿಸಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಎಂ.ಎಸ್.ದೀಪಾ ಮಾತನಾಡಿ, ತಾಲೂಕಿನಲ್ಲಿ ಪ್ರಸ್ತುತ ಮಾವು ಬೆಳೆಯ ವಿಸ್ತೀರ್ಣದ ಕುರಿತು ವಿವರಿಸಿದರು. ಮಾವು ಬೆಲೆಯಲ್ಲಿ ಸವರುವಿಕೆ ವಿಧಾನವನ್ನು ಅನುಸರಿಸುವುದರಿಂದ ಹೆಚ್ಚಿನ ಗಾಳಿ, ಸೂರ್ಯನ ಬೆಳಕು ಗಿಡಗಳಿಗೆ ಲಭ್ಯವಾಗುವಂತೆ ಮಾಡಬೇಕಾಗಿದ್ದು, ಇದರಿಂದ ರೋಗ ಕೀಟಗಳ ಬಾಧೆಯನ್ನು ಕಡಿಮೆಗೊಳಿಸಿ ಉತ್ಪಾದನೆಯನ್ನು ಹೆಚ್ಚಿಸಬಹುದೆಂದರು.
ವಿಮೆ ಸೌಲಭ್ಯ ಪಡೆಯಿರಿ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ತಾಲೂಕಿನ ಮಾವು ಬೆಳೆಗಾರರು ವಿಮೆಯ ಸೌಲಭ್ಯ ಪಡೆಯಬಹುದಾಗಿದ್ದು, ಜು.31ರೊಳಗಾಗಿ ಸಮೀಪದ ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರ ಹಾಗೂ ಬ್ಯಾಂಕ್‌ಗಳಲ್ಲಿ ವಿಮೆ ಮಾಡಿಸಬಹುದಾಗಿದೆ.ವಿಮೆ ಮಾಡಿಸುವುದರಿಂದ ಮಳೆ ಕೊರತೆ, ಬೂದು ರೋಗ, ಮಾವಿನ ಫಸಲಿನ ಸಮಯದಲ್ಲಿ ಬರುವ ಅಕಾಲಿಕ ಮಳೆ ಹಾಗೂ ಗಾಳಿಯು ವಿಮೆ ಷರತ್ತುಗಳಾಗಿದ್ದು, ಅಂತಹ ಸಂದರ್ಭ ಎದುರಾದಾಗ ವಿಮೆಯು ರೈತರಿಗೆ ಪಾವತಿಯಾಗುತ್ತದೆ ಎಂದರು.
ಕಾರ್ಯಾಗಾರದಲ್ಲಿ ಸಕ್ಕರೆಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ಕೆ.ದೀಪಿಕಾ, ಉಪಾಧ್ಯಕ್ಷ ಟಿ.ಎನ್ .ನವೀನ್ ಕುಮಾರ್, ರೈತ ಮುಖಂಡ ತಿಮ್ಮೆಗೌಡ, ರಾಮಕೃಷ್ಣಪ್ಪ ಹಾಗೂ ಹೋಬಳಿ ರೈತರು ಇದ್ದರು. ಖಾಸಗಿ ಸಂಸ್ಥೆ ಸಿಬ್ಬಂದಿ ಡ್ರೋನ್ ಬಳಸಿ ಮಾವಿನ ಗಿಡಗಳಿಗೆ ಔಷಧ ಸಿಂಪಡಣೆ ಕುರಿತಂತೆ ಮಾಹಿತಿ ನೀಡಿದರು.