Advertisement

ರಾಜ್ಯದಲ್ಲೇ 3ನೇ ಸ್ಥಾನ; ಕಲಬುರಗಿಯಲ್ಲಿ 2.14 ಲಕ್ಷ ರೈತರಿಂದ ಬೆಳೆ ವಿಮೆ

03:42 PM Aug 24, 2022 | Team Udayavani |

ಕಲಬುರಗಿ: ಜಿಲ್ಲೆಯ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 2.14 ಲಕ್ಷ ರೈತರು ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದು, ಇಲ್ಲಿಯವರೆಗೆ 1.20 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದೇ ದಾಖಲೆಯಾಗಿತ್ತು.

Advertisement

ಈ ಹಿಂದೆ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರ ಪ್ರಿಮಿಯಂ ಕಡಿತಗೊಳಿಸಿ ಬೆಳೆ ವಿಮೆ ಮಾಡಿಸಲಾಗುತ್ತಿತ್ತು. ಆದರೆ ಪ್ರಸಕ್ತವಾಗಿ ರಾಷ್ಟ್ರೀಕೃತ ಹಾಗೂ ಡಿಸಿಸಿ ಬ್ಯಾಂಕ್‌ನಿಂದ ಬೆಳೆ ಸಾಲ ಪಡೆಯದಿದ್ದರೂ ಪ್ರಸಕ್ತವಾಗಿ ರೈತರು ಸ್ವಯಂ ಪ್ರೇರಿತವಾಗಿ ಬೆಳೆ ವಿಮೆ ಪ್ರಿಮಿಯಂ ತುಂಬಿದ್ದಾರೆ. ಇದನ್ನು ನೋಡಿದರೆ ರೈತರಲ್ಲಿ ಬೆಳೆ ವಿಮೆ ಮಾಡಿಸುವ ಕುರಿತಾಗಿ ಜಾಗೃತಿ ಹೊಂದಿರುವುದು ನಿರೂಪಿಸುತ್ತದೆ. ಪ್ರಸಕ್ತ ಮುಂಗಾರು ಹಂಗಾಮಿಗೆ ಜು.31 ಬೆಳೆ ವಿಮೆಗೆ ಪ್ರಿಮಿಯಂ ತುಂಬುವ ಕೊನೆ ದಿನವಾಗಿತ್ತು. ರೈತರು ಉತ್ಸಾಹದಿಂದ ಕಳೆದ ತಿಂಗಳ ಕೊನೆ ದಿನದವರೆಗೂ ಬೆಳೆ ವಿಮೆ ಮಾಡಿಸಿದ್ದು, ಈಗ ಅಂತಿಮ ಪಟ್ಟಿ ಹೊರ ಬಿದ್ದಿದ್ದು, ಜಿಲ್ಲೆಯಲ್ಲಿ ಅತ್ಯಧಿಕ 2.14 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದಾರೆ.

120 ಕೋಟಿ ರೂ. ಪ್ರಿಮಿಯಂ:.ಜಿಲ್ಲೆಯಲ್ಲಿ 2.14 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದು, ರೈತರು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲು ಸೇರಿ ಬೆಳೆ ವಿಮೆ ಕಂಪನಿಗೆ 120 ಕೋಟಿ ರೂ. ಪ್ರಿಮಿಯಂ ಜಮೆಯಾಗಿದೆ. ಈ ಮೂಲಕವೂ ದಾಖಲೆ ಎನ್ನುವಂತೆ ಕಲಬುರಗಿ ಜಿಲ್ಲೆ ಇತಿಹಾಸದಲ್ಲಿ ವಿಮಾ ಕಂಪನಿಗೆ ನೂರು ಕೋಟಿ ರೂ.ಗೂ ಅಧಿಕ ಹಣ ವಿಮೆ ಕಂಪನಿಗೆ ಜಮೆಯಾಗಿದೆ. ಒಟ್ಟಾರೆ ರೈತರ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಸೇರಿ ಪ್ರಿಮಿಯಂ ಸೇರಿ ಯುನಿರ್ವಸಲ್‌ ಸೊಂಪೋ ಜನರಲ್‌ (ಇನ್ಸುರೆನ್ಸ್‌) ವಿಮಾ ಕಂಪನಿಗೆ ಇಷ್ಟೊಂದು ಮೊತ್ತ ಜಮೆಯಾಗಿದೆ.

ರಾಜ್ಯಾದ್ಯಂತ ಪ್ರಸಕ್ತವಾಗಿ 2 ಸಾವಿರ ಕೋಟಿ ರೂ. ಸಮೀಪ ರೈತರ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲು ಸೇರಿ ಹಣ ವಿಮಾ ಕಂಪನಿಗೆ ಜಮೆಯಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಹಣ ವಿಮಾ ಕಂಪನಿಗೆ ಜಮೆಯಾಗಿರುವುದು ದಾಖಲೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 79 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದರು. ಹೀಗಾಗಿ 55 ಕೋಟಿ ರೂ. ಬೆಳೆ ವಿಮೆ ಕಂಪನಿಗೆ ಪ್ರಿಮಿಯಂ ಮೊತ್ತ ಜಮೆಯಾಗಿತ್ತು. ಸ್ಥಳೀಯ ನೈಸರ್ಗಿಕ ವಿಕೋಪ ಪರಿಹಾರ ಅಡಿ ಜಿಲ್ಲೆಗೆ ಮೊದಲ ಹಂತದ 22.52 ಕೋಟಿ ರೂ. ಹಾಗೂ ತದನಂತರ ಬಿಟ್ಟು ಹೋದ ರೈತರಿಗೆ 8.49 ಕೋಟಿ ರೂ. ಸೇರಿ ಒಟ್ಟಾರೆ 31 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ವಿಮಾ ಕಂಪನಿ 14 ಕೋಟಿ ರೂ. ಲಾಭ ಮಾಡಿಕೊಂಡಂತಾಗಿದೆ.

ರಾಜ್ಯದಲ್ಲೇ ಮೂರನೇ ಸ್ಥಾನ
ಪ್ರಸಕ್ತ 2022-23ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಕಲಬುರಗಿ ಜಿಲ್ಲೆಯಲ್ಲಿ 2.14 ಲಕ್ಷ ರೈತರು ಬೆಳೆ ವಿಮೆ ಮಾಡಿಸಿರುವುದು ರಾಜ್ಯದಲ್ಲೇ ಮೂರನೇ ಸ್ಥಾನವಾಗಿದೆ. ಬೀದರ್‌ ಜಿಲ್ಲೆಯಲ್ಲಿ ಮಾಡಿಸಿದ್ದು 3.62 ಲಕ್ಷ ಹಾಗೂ ಹಾವೇರಿ ಜಿಲ್ಲೆಯಲ್ಲಿ 2.16 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ತುಮಕೂರು ಜಿಲ್ಲೆಯಲ್ಲಿ 1.49 ಲಕ್ಷ ರೈತರು ಬೆಳೆ ವಿಮೆಗೆಂದು ಪ್ರಿಮಿಯಂ ಹಣ ತುಂಬಿದ್ದಾರೆ. ಅತಿ ಕಡಿಮೆ ಕೊಡಗು ಜಿಲ್ಲೆಯಲ್ಲಿ 1459 ಎಕರೆ ಹಾಗೂ ಕಲಬುರಗಿ ವಿಭಾಗದ ಬಳ್ಳಾರಿ ಜಿಲ್ಲೆಯಲ್ಲಿ ಕೇವಲ 3385 ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ.

Advertisement

ಡಿಸಿಸಿ ಬ್ಯಾಂಕ್‌ನಿಂದ ಕಳಪೆ ಸಾಧನೆ
ಪ್ರತಿವರ್ಷ ಬೆಳೆ ಮಾಡಿಸಿದ ರೈತರಲ್ಲಿ ಅರ್ಧದಷ್ಟು ರೈತರು ಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದ ರೈತರೇ ಬೆಳೆ ವಿಮೆ ಮಾಡಿಸುತ್ತಿದ್ದರು. ಆದರೆ ವಿಪರ್ಯಾಸವೆಂದರೆ ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತವಾಗಿ ಬೆಳೆ ವಿಮೆ ಮಾಡಿಸಿರುವ 2.14 ಲಕ್ಷ ರೈತರಲ್ಲಿ ಕೇವಲ ಎರಡು ಸಾವಿರ ರೈತರು ಮಾತ್ರ ಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದ ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ. ಇದು ಡಿಸಿಸಿ ಬ್ಯಾಂಕ್‌ನ ಕಳಪೆ ಸಾಧನೆಯಾಗಿದೆ.

ಜಂಟಿ ಸಮೀಕ್ಷೆ ಶುರು
ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತವಾಗಿ ಸುರಿದ ಭಾರಿ ಮಳೆಗೆ ವ್ಯಾಪಕ ಬೆಳೆಗಳು ಹಾನಿಯಾಗಿದ್ದು, ಈ ಕುರಿತು ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗಿದೆ. ಈಗಾಗಲೇ 1.14 ಲಕ್ಷ ಎಕರೆ ಬೆಳೆ ಹಾನಿಯಾಗಿರುವುದನ್ನು ಸಮೀಕ್ಷಾ ತಂಡ ಪತ್ತೆ ಮಾಡಿದೆ. ಒಟ್ಟಾರೆ ಸದ್ಯದ ಬೆಳೆ ಹಾನಿ ಅವಲೋಕಿಸಿದರೆ ಶೇ.25ರಷ್ಟು ಬೆಳೆ ವಿಮೆ ಪರಿಹಾರವಾಗಿ 52 ಕೋಟಿ ರೂ. ಬೆಳೆ ವಿಮೆ ಪರಿಹಾರ ಮೊತ್ತ ರೈತರ ಖಾತೆಗಳಿಗೆ ಜಮೆಯಾಗಬೇಕು.

35 ಸಾವಿರ ರೈತರಿಂದ ದೂರು ದಾಖಲು
ಸ್ಥಳೀಯ ನೈಸರ್ಗಿಕ ವಿಕೋಪ ಪರಿಹಾರ ಅಡಿ ಪ್ರಸಕ್ತವಾಗಿ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 35 ಸಾವಿರ ರೈತರಿಂದ ಬೆಳೆ ಹಾನಿಯಾಗಿರುವ ಕುರಿತಾಗಿ ವಿಮಾ ಕಂಪನಿಗೆ ದೂರು ಸಲ್ಲಿಸಿದ್ದಾರೆ. 18002005142 ಟೋಲ್‌ ನಂಬರ್‌ಗೂ ದೂರು ದಾಖಲಿಸಿದ್ದಾರೆ.

ಡಿಸಿ ಪಾತ್ರ ಪ್ರಮುಖ
ಕಲಬುರಗಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ 2.14 ಲಕ್ಷ ರೈತರು ಬೆಳೆ ವಿಮೆ ಮಾಡುವಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್‌ ಪಾತ್ರ ಪ್ರಮುಖವಾಗಿದೆ. ಡಿಸಿಯವರು ಕೃಷಿ ಅಧಿಕಾರಿಗಳ ಸಭೆ ನಡೆಸಿ ತಮ್ಮ ವ್ಯಾಪ್ತಿಯಲ್ಲಿ ಕನಿಷ್ಟ ಅರ್ಧದಷ್ಟು ರೈತರಾದರೂ ಬೆಳೆ ವಿಮೆ ಮಾಡಿಸುವಂತಾಗಬೇಕೆಂದು ತಾಕೀತು ಮಾಡಿದ್ದರು. ಅದರ ಪರಿಣಾಮ 2.14 ರೈತರು ಬೆಳೆ ವಿಮೆ ಮಾಡಿಸಲು ಕಾರಣವಾಗಿದೆ ಎನ್ನಲಾಗುತ್ತಿದೆ.

*ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next