Advertisement

ಬೆಳೆ ವಿಮೆ ಪರಿಹಾರಕ್ಕೂ ಕೋವಿಡ್! ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಕೋವಿಡ್‌-19 ಕರ್ತವ್ಯ

11:43 PM Oct 11, 2020 | sudhir |

ಕುಂದಾಪುರ: ತಾಪಮಾನ‌, ಮಳೆ ಆಧರಿಸಿ ತೋಟಗಾರಿಕೆ ಬೆಳೆಗಳಿಗೆ ನೀಡಲಾಗುವ ಬೆಳೆ ವಿಮೆ ಯೋಜನೆಯ ಅವಧಿ ಮುಗಿದರೂ ರೈತರ ಖಾತೆಗಳಿಗೆ ಪರಿಹಾರ ಮೊತ್ತ ಇನ್ನೂ ಜಮೆಯಾಗಿಲ್ಲ. ಜು. 1ರಿಂದ ಮುಂದಿನ ಜೂನ್‌ ಕೊನೆಯ ವರೆಗೆ ಈ ವಿಮೆಯ ಅವಧಿಯಿದ್ದು, ಈ ಹಿಂದೆ ಸೆಪ್ಟಂಬರ್‌ ವೇಳೆಗೆ ರೈತರ ಖಾತೆಗೆ ವಿಮೆ ಮೊತ್ತ ಜಮೆ ಯಾಗುತ್ತಿತ್ತು.

Advertisement

ಈ ಬಾರಿ ತೋಟಗಾರಿಕೆ ಇಲಾಖಾ ಅಧಿಕಾರಿಗಳನ್ನೂ ಕೊರೊನಾ ಕರ್ತವ್ಯಗಳಿಗೆ ನಿಯೋಜನೆ ಮಾಡಿದ್ದರಿಂದ ವಿಮೆ ಸಂಬಂಧಿ ಕೆಲಸ ಇನ್ನೂ ಆಗಿಲ್ಲ. ಈಗಷ್ಟೇ ಬೆಳೆ ವಿಮೆಗೆ ಅರ್ಹರಾದವರ ಪಟ್ಟಿಯನ್ನು ಅಂತಿಮಗೊಳಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ವಿಮೆ ಕೈಸೇರುವುದು ಮತ್ತಷ್ಟು ತಡವಾಗಲಿದೆ.

ಏನಿದು ಯೋಜನೆ?
ಒಂದು ಹೆಕ್ಟೇರ್‌ ಭತ್ತ, ಅಡಿಕೆ, ಕಾಳುಮೆಣಸು ಕೃಷಿ ಇದ್ದರೆ 1.28 ಲಕ್ಷ ರೂ. ಬೆಳೆ ಸಾಲ ಮಾನದಂಡವಿದ್ದು, ಗರಿಷ್ಠ ಆ ಮೊತ್ತದ ತನಕ ವಿಮೆ ನೀಡಲು ಸಾಧ್ಯವಿದೆ. ಒಬ್ಬ ರೈತ ಶೇ.5ರಷ್ಟು ವಿಮೆ ಮೊತ್ತ ಪಾವತಿಸಿದರೆ, ಟೆಂಡರ್‌ ಆದ ವಿಮೆ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಗಳು ಭರಿಸುತ್ತಿದ್ದವು. ಪ್ರತೀ ವರ್ಷ ರೈತರು ಬೆಳೆಗಳ ಮೇಲೆ ಬೆಳೆ ಸಾಲ ಪಡೆಯುವಾಗ ವಿಮೆ ಕಂತನ್ನೂ ಕಟ್ಟುತ್ತಾರೆ. ರಾಷ್ಟ್ರೀಯ ಹವಾಮಾನ ಮತ್ತು ವಿಪತ್ತು ನಿರ್ವಹಣೆ ಸಂಸ್ಥೆಯು ಎಲ್ಲೆಲ್ಲಿ ಎಷ್ಟೆಷ್ಟು ಮಳೆ ಆಗಿದೆ ಎಂದು ಲೆಕ್ಕ ಹಾಕುತ್ತದೆ. ವಾರ್ಷಿಕ ವರದಿಯನ್ನು ಕ್ರೋಡೀಕರಿಸಿದ ತೋಟಗಾರಿಕೆ ಇಲಾಖೆಯು ವಿಮೆ ಮೊತ್ತವನ್ನು ವೈಯಕ್ತಿಕವಾಗಿ ಗುರುತಿಸಿ, ವಿಮಾ ಕಂಪೆನಿಗೆ ವರ್ಗಾಯಿಸುತ್ತದೆ. ಕಂಪೆನಿ ಬೆಳೆ ದರ್ಶಕದ ಮಾಹಿತಿ ಆಧರಿಸಿ ತಾಳೆ ನೋಡುತ್ತದೆ. ಬಳಿಕ ರೈತರ ಖಾತೆಗಳಿಗೆ ವಿಮೆ ಪರಿಹಾರ ಜಮೆಯಾಗುತ್ತದೆ.

ಬೆಳೆ ವಿಮೆ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಸರಕಾರಕ್ಕೆ ಸಲ್ಲಿಸಲಾಗಿದೆ. ಸರಕಾರ ಮತ್ತು ವಿಮೆ ಕಂಪೆನಿಗಳು ಮುಂದಿನ ಪ್ರಕ್ರಿಯೆ ನಡೆಸಲಿವೆ. ಸೆಪ್ಟಂಬರ್‌ನೊಳಗೆ ಪರಿಹಾರ ಮೊತ್ತ ರೈತರಿಗೆ ಪಾವತಿಯಾಗಬೇಕಿದ್ದರೂ ಕೋವಿಡ್‌ ಕಾರಣ ವಿಳಂಬವಾಗಿದೆ.
– ಎಚ್‌.ಆರ್‌. ನಾಯ್ಕ, ಭುವನೇಶ್ವರಿ, ದ.ಕ. ಮತ್ತು ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು

ಕಂತು ಕಟ್ಟಿಸಿಕೊಳ್ಳುವಾಗ ಸಮಯದ ಮಿತಿ ನಿಗದಿಪಡಿಸುವ ವಿಮೆ ಕಂಪೆನಿಗಳು ಇಂತಿಷ್ಟು ಸಮಯದೊಳಗೆ ವಿಮೆ ಪಾವತಿ ಮಾಡುತ್ತೇವೆ ಎಂದು ಹೇಳುವುದಿಲ್ಲ. ಸಬೂಬುಗಳನ್ನು ಹೇಳಿ ಕಾಲಹರಣ ಮಾಡುವುದು ಸರಿಯಲ್ಲ. ಶೀಘ್ರದಲ್ಲಿ ರೈತರಿಗೆ ವಿಮೆ ಪರಿಹಾರ ಮೊತ್ತ ಸಿಗುವಂತಾಗಲಿ.
– ವಿಕಾಸ್‌ ಹೆಗ್ಡೆ ಕುಂದಾಪುರ, ವಕ್ತಾರರು, ಉಡುಪಿ ಜಿಲ್ಲಾ ರೈತ ಸಂಘ

Advertisement

- ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next