ಶಹಾಪುರ: ಕಳೆದ ಒಂದೂವರೆ ತಿಂಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನಾದ್ಯಂತ ಹತ್ತಿ, ತೊಗರಿ ಬೆಳೆಗಳು ತೇವಾಂಶ ಹೆಚ್ಚಾಗಿ ಒಣಗುತ್ತಿವೆ. ಕೆಲ ಹೊಲಗಳಲ್ಲಿ ನೀರು ನಿಂತ ಪರಿಣಾಮ ಹತ್ತಿ,ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳಿಗೂ ಕುತ್ತು ಬಂದಿದ್ದು, ರೈತರು ಮತ್ತೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಒಂದುವರೆ ತಿಂಗಳಿಂದ ನಿರಂತರ ಮಳೆಯಾಗುತ್ತಿದ್ದು, ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಮೋಡ ಕವಿದ ವಾತಾವರಣ, ಇನ್ನೇನು ಬಿಸಿಲು ಬಿದ್ದಿದೆ ಎಂದು ಹೊಲದಲ್ಲಿನ ಕಳೆ ಕೀಳಬೇಕೆನ್ನುವಷ್ಟರಲ್ಲಿ ಮತ್ತೆ ಧೋ ಎಂದು ಎರಡು ಮೂರು ದಿನ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ಯಾವ ಬೆಳೆಯೂ ಕೈಗೆಟುಕುವ ಸಾಧ್ಯತೆಕಡಿಮೆ ಆಗಿದೆ. ನದಿ ಪಾತ್ರ ಜಮೀನುಗಳಂತೂ ಪ್ರವಾಹಕ್ಕೆ ಸಿಲುಕಿ ಬೆಳೆ ಸಂಪೂರ್ಣ ಹಾಳಾಗಿವೆ.
ಉಳಿದಂತೆ ಒಣಬೇಸಾಯಗಾರರಿಗಾದರೂ ಒಂದಷ್ಟು ಬೆಳೆ ಉತ್ತಮವಾಗಿದೆ ಎನ್ನುವಷ್ಟರಲ್ಲಿ ನಿತ್ಯ ಮಳೆಯಾಗುತ್ತಿರುವ ಪರಿಣಾಮ ಅಧಿಕ ತೇವಾಂಶದಿಂದ ಹತ್ತಿ, ಮೆಣಸಿನಕಾಯಿ ಒಣಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಜೂನ್ ಮೊದಲ ವಾರ ಉತ್ತಮ ಮಳೆಯಾಗಿದ್ದು, ಆಗ ತಾಲೂಕಿನಲ್ಲಿ ಅಂದಾಜು 43,900 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿಟಿ ಹತ್ತಿ ವಿವಿಧ ತಳಿಯ ಹತ್ತಿ ಬಿತ್ತಿದ್ದರು. ನಂತರದ ದಿನದಲ್ಲಿ ನಿತ್ಯ ಮಳೆಯಾಗಿ ಹಲವೆಡೆ ತಗ್ಗು ಪ್ರದೇಶದ ಜಮೀನುಗಳು ಜಲಾವೃತಗೊಂಡು ಬೆಳೆಯಲ್ಲಿ ಮುಳುಗಿ ಹೋಗಿತ್ತು. ಕೆಲವೆಡೆ ಒಣ ಬೇಸಾಯಗಾರರ ಭೂಮಿಯಲ್ಲಿ ಹತ್ತಿ ಬೆಳೆ ಚನ್ನಾಗಿಯೇ ಇತ್ತು. ಆಗಸ್ಟ್ ಕಳೆದಂತೆ ಹೂ ಕಾಯಿ ಬಿಟ್ಟು ಇನ್ನೇನು ಕೈಗೆ ಬರಲಿದೆ ಎನ್ನುವಷ್ಟರಲ್ಲಿ ಮತ್ತೆ ಸೆಪ್ಟೆಂಬರ್, ಅಕ್ಟೋಬರ್ ನಿರಂತರ ಮಳೆ ಬೀಳುತ್ತಿದ್ದು, ಹತ್ತಿ ಹೊಲಗಳು ಅಧಿಕ ತೇವಾಂಶದಿಂದ ಬೆಳೆಗಳೆಲ್ಲ ಸುಡುತ್ತಿವೆ.
ನಿರಂತರ ಮಳೆಯಿಂದಾಗಿ ಬೆಳೆಯಡಿ ಎಲ್ಲೆಡೆ ಬಾಚಿಕೊಂಡ ಕಳೆ ತೆಗೆಯಲು ಆಗುತ್ತಿಲ್ಲ. ಅಲ್ಲದೆ ಕೆ ಲದಿನ ಮೋಡ ಕವಿದು ರೋಗ ಬಾಧೆ ಆವರಿಸಿತು. ಇದೀಗ ಮತ್ತೆ ಮಳೆಯಾಗಿದ್ದು, ಹೊಲಗಳು ಆರುತ್ತಿಲ್ಲ. ತಿಂಗಳಿಂದ ಹಸಿಯಾಗಿದೆ. ಹೀಗಾಗಿ ಬೆಳೆಯೆಲ್ಲ ಬಾಡುತ್ತಿವೆ ಎನ್ನುತ್ತಾರೆ ರೈತ ಬಸವರಾಜ ಚೌದ್ರಿ. ಒಂದಷ್ಟು ಮಳೆ ನಿಂತರೆ ಸಾಕು ಹತ್ತಿಹೊಲದಲ್ಲಿನ ಕಳೆ ತೆಗೆದು ಹಾಕಲು ಅನುಕೂಲವಾಗಲಿದೆ ಎಂದು ಕೊಂಡಿದ್ದೇವು. ಆದರೆ ಮತ್ತೆ ನಿರಂತರ ಮಳೆ ಬರುತ್ತಿದೆ. ಹೀಗಾಗಿ ಕಳೆ ಕೀಳಲು ಆಗುತ್ತಿಲ್ಲ. ತೇವಾಂಶ ಅತಿಯಾಗಿದ್ದು, ಹತ್ತಿ ಎಲೆಗಳು ಕೊಳೆಯುತ್ತಿವೆ. ಫಲ ಬರುವದಿಲ್ಲ ಎಂದು ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ.
ಕಳೆದ ತಿಂಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಸಾಕಷ್ಟು ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಈ ಕುರಿತು ಸಮೀಕ್ಷೆ ನಡೆಸಲು ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಮತ್ತೆ ಕಳೆದ ನಾಲ್ಕು ದಿನದಿಂದ ನಿರಂತರ ಮಳೆಯಾಗಿದ್ದು, ಹಲವೆಡೆ ಮತ್ತೂಮ್ಮೆ ಸಮೀಕ್ಷೆ ಮಾಡುವ ಅನಿವಾರ್ಯತೆ ಎದುರಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಸಮೀಕ್ಷಾ ವರದಿ ಬರಲಿದೆ. –
ಗನ್ನಾಥರಡ್ಡಿ, ತಹಶೀಲ್ದಾರ್, ಶಹಾಪುರ
ಮಳೆಯಿಂದಾಗಿ ಅಧಿಕ ತೇವಾಂಶದಿಂದ ಹತ್ತಿ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದೆ. ಮಳೆಯಿಂದಾದ ನಷ್ಟ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ವರದಿ ನೀಡಲಾಗುವುದು.
– ಗೌತಮ ವಾಗ್ಮೋರೆ, ಸಹಾಯಕ ಕೃಷಿ ನಿರ್ದೇಶಕ.
-ಮಲ್ಲಿಕಾರ್ಜುನ ಮುದ್ನೂರ