ನಿಡಗುಂದಿ: ಗುರುವಾರ ರಾತ್ರಿ ಸುರಿದ ಆಕಾಲಿಕ ಮಳೆಗೆ ಪಟ್ಟಣದ ಗೌತಮ್ ಬಸವರಾಜ ಕಲ್ಯಾಣಶೆಟ್ಟಿಯವರು 2 ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಸಂಪೂರ್ಣ ಹಾಳಾಗಿದ್ದು ರೈತ ಕಂಗಾಲಾಗುವಂತೆ ಮಾಡಿದೆ. ಇನ್ನೊಂದು ವಾರದಲ್ಲಿ ಮಾರುಕಟ್ಟೆಗೆ ಸಾಗಿಸಬೇಕಾಗಿದ್ದ ಕಲ್ಲಂಗಡಿ ಮಳೆಯಿಂದ ತಿಪ್ಪೆಗೆ ಸುರಿಯುವಂತಾಗಿದೆ.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬರುವ ಗೌತಮ್ ಕಲ್ಯಾಣಶೆಟ್ಟಿಯವರ 6 ಎಕರೆ ಜಮೀನಿನಲ್ಲಿ 2 ಎಕರೆ ಕಲ್ಲಂಗಡಿ ಬೆಳೆದಿದ್ದರು. ಫಸಲು ಕೈಗೆ ಬಂದಿದ್ದು, ಇನ್ನೇನು ಕೆಲವು ದಿನದಲ್ಲಿ ಮಾರಾಟಕ್ಕೆ ಸಿದ್ಧವಾದ ಕಲ್ಲಂಗಡಿ ಗುರುವಾರ ಸುರಿದ ಆಕಾಲಿಕ ಮಳೆಗೆ ನಷ್ಟವಾಗಿದೆ.
ನಿಡಗುಂದಿಯಲ್ಲಿನ ಚರಂಡಿ ನೀರು ಗೌತಮ್ ಅವರ ಜಮೀನಿನ ಪಕ್ಕದಲ್ಲೆ ಹರಿಯುತ್ತಿದ್ದು, ಚರಂಡಿಯಲ್ಲಿ ಕಸದ ಗಿಡಗಳು ಬೆಳೆದು ನೀರು ಸಾಗಲು ದಾರಿ ಇಲ್ಲದ ಕಾರಣ ಮಳೆ ನೀರಿನ ಜತೆಗೆ ಚರಂಡಿ ನೀರು ಪಕ್ಕದ ಹೊಲಕ್ಕೆ ನುಗ್ಗಿದೆ. ಅಂದಾಜು 3 ಲಕ್ಷ ನಷ್ಟವಾಗಿದೆ ಎಂದು ರೈತ ಗೌತಮ್ ಕಲ್ಯಾಣಶೆಟ್ಟಿ ತಹಶೀಲ್ದಾರ್ ರಿಗೆ ಮನವಿ ಮಾಡಿದ್ದಾರೆ.
ಏಪ್ರಿಲ್ ಕೊನೆ ವಾರ ಹಾಗೂ ಮೇ ತಿಂಗಳಲ್ಲಿ ಕಲ್ಲಂಗಡಿಗೆ ಬೆಲೆ ಬರುತ್ತದೆ. ಖರ್ಚು ಸರಿದೂಗಿಸುವ ಜತೆಗೆ ಒಂದಿಷ್ಟು ಕೈಗೆ ಕಾಸು ಮಾಡಿಕೊಳ್ಳಬಹುದು ಎಂದು ಲೆಕ್ಕ ಇಟ್ಟಿದ್ದ ಗೌತಮ್‌ನ ಲೆಕ್ಕಾಚಾರ ಕೆಳಗಾಗುವಂತಾಗಿದೆ. ಸದ್ಯ ಕಟಾವಿಗೆ ಬಂದಿದ್ದ ಕಲ್ಲಂಗಡಿ ನೀರಿನಲ್ಲಿ ನಿಂತಿದ್ದು, ರೈತನನ್ನು ಹೈರಾಣಾಗಿಸಿದೆ. ರೈತನ ಈ ಸ್ಥಿತಿಗೆ ಯಾರನ್ನು ದೂರುವುದು ಎಂದು ತಿಳಿಯದಂತಾಗಿದೆ ಎನ್ನುತ್ತಾರೆ ಗೌತಮ್.
ತಹಶೀಲ್ದಾರ್ ಭೇಟಿ: ಆಕಾಲಿಕ ಮಳೆಯಿಂದ ಕಲ್ಲಂಗಡಿ ಬೆಳೆ ನಷ್ಟವಾದ ಗೌತಮ್ ಕಲ್ಯಾಣಶೆಟ್ಟಿ ಅವರ ಜಮೀನಿಗೆ ಶುಕ್ರವಾರ ಸ್ಥಳೀಯ ತಹಶೀಲ್ದಾರ್ ಸತೀಶ ಕೂಡಲಗಿ ಹಾಗೂ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ರಮೇಶ ಮಾಡಬಾಳ ಭೇಟಿ ನೀಡಿ ಬೆಳೆ ನಷ್ಟ ಪರಿಶೀಲನೆ ನಡೆಸಿದರು. ಆಕಾಲಿಕ ಮಳೆಗೆ ಕೈಗೆ ಬಂದ ಕಲ್ಲಂಗಡಿ ಬಾಯಿಗೆ ಬರದಂತಾಗಿದೆ. ನಷ್ಟವಾದ ಬೆಳೆಗೆ ಪರಿಹಾರ ನೀಡುವಂತೆ ರೈತ ಗೌತಮ್ ತಹಸೀಲ್ದಾರ ಬಳಿ ಮನವಿ ಮಾಡಿದರು.
ಬೆಳೆ ನಷ್ಟ ಪರಿಶೀಲಿಸಿದ ತಹಸೀಲ್ದಾರ್, ಕಳೆದೆರಡು ದಿನಗಳಿಂದ ತಾಲೂಕಿನಲ್ಲಿ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಕೆಲ ತೋಟಗಾರಿಕೆ ಬೆಳೆ ನಷ್ಟಕ್ಕೆ ಸಿಲುಕಿದೆ. ಸದ್ಯ ಗೌತಮ್ ಅವರ ಜಮೀನಿನಲ್ಲಿ ಬೆಳೆದ ಕಲ್ಲಂಗಡಿ ಇನ್ನೊಂದು ವಾರದಲ್ಲಿ ಮಾರುಕಟ್ಟೆಗೆ ಹೋಗುವಂತಾಗಿತ್ತು. ಆದರೆ, ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಬೆಳೆ ನಷ್ಟವಾಗಿದೆ. ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಬೆಳೆ ನಷ್ಟ ಪರಿಶೀಲನೆ ನಡೆಸಿ ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸಲಾಗುವುದು ಎಂದರು.