Advertisement

ಶೀಘ್ರ ಕೇಂದ್ರಕ್ಕೆ ಬೆಳೆ ಹಾನಿ ವರದಿ: ಗೌತಮ್‌

02:54 PM Nov 19, 2018 | Team Udayavani |

ಬಳ್ಳಾರಿ: ಕೇಂದ್ರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಮಿತಾಬ್‌ ಗೌತಮ್‌ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಭಾನುವಾರ ಪರಿಶೀಲನೆ ನಡೆಸಿತು.

Advertisement

ಬೆಳಗ್ಗೆ ಬಳ್ಳಾರಿಯ ಸರಕಾರಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಡಾ| ವಿ.ರಾಮ್‌ ಪ್ರಸಾತ್‌ ಮನೋಹರ್‌ ಅವರು ಜಿಲ್ಲೆಯಲ್ಲಿ ಮಳೆ ಬರದ ಪರಿಣಾಮ 2.30 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. 153 ಕೋಟಿ ರೂ. ಹಾನಿಯಾಗಿದೆ. ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಬರ ಸಂಬಂಧಿತ ಕಾಮಗಾರಿಗಳನ್ಮು ಆದ್ಯತೆ ಮೇಲೆ ಜಿಲ್ಲಾಡಳಿತ ಕೈಗೊಳ್ಳುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಲಾಗಿದೆ. ಬಳ್ಳಾರಿ ಜಿಲ್ಲೆಗೆ ತಮ್ಮ ತಂಡದ ವತಿಯಿಂದ 153 ಕೋಟಿ ರೂ. ಒದಗಿಸುವ ನಿಟ್ಟಿನ ಶಿಫಾರಸು ಮಾಡುವಂತೆ ಅವರು ಕೋರಿದರು.

ಇದಾದ ನಂತರ ಅವರು ಮೊದಲು ಕೂಡ್ಲಿಗಿ ತಾಲೂಕಿನ ಮಹಾದೇವಪುರದ ಅಪ್ಪೇನಹಳ್ಳಿ ಗ್ರಾಪಂ ವ್ಯಾಪ್ತಿಯ ಮಹಾದೇವಪುರದ ಚಂದ್ರೇಗೌಡ ಎನ್ನುವವರ ಹೊಲಕ್ಕೆ ಅಮಿತಾಬ್‌ ಗೌತಮ್‌ ನೇತೃತ್ವದ ಮೂರು ಜನ ಅಧಿಕಾರಿಗಳ ತಂಡ ಭೇಟಿ ನೀಡಿ, ಮಳೆ ಬರದೇ ಬಾಡಿದ ಶೇಂಗಾ ಬೆಳೆ ಮತ್ತು ಸಂಪೂರ್ಣ ಒಣಗಿದ ಸಜ್ಜೆ ಬೆಳೆಯನ್ನು ಪರಿಶೀಲಿಸಿತು.

ಇದೇ ಸಂದರ್ಭದಲ್ಲಿ ರೈತರೊಂದಿಗೆ ಅಧಿಕಾರಿಗಳು ಚರ್ಚಿಸಿದರು. ರೈತರು ಸಹ ಮಳೆ ಬರದೇ ಕಂಗಾಲಾಗಿರುವುದನ್ನು ಹಾಗೂ ಪದೇ-ಪದೇ ತಾವು ಅನುಭವಿಸುತ್ತಿರುವ ಬರದ ಸಮಸ್ಯೆ ಹಾಗೂ ಬೆಳೆಹಾನಿ, ಬಿತ್ತನೆಗೆ ಮಾಡಿದ ಖರ್ಚು ಕೂಡ ಬಾರದಿರುವುದು ಸೇರಿದಂತೆ ತಾವು ಅನುಭವಿಸುತ್ತಿರುವ ಸಮಸ್ಯೆಗಳ ಸರಮಾಲೆಯನ್ನು ಅಧಿಕಾರಿಗಳ ಮುಂದಿಟ್ಟರು.

ತಮ್ಮ ಬೆಳೆಗೆ ವಿಮೆ ಮಾಡದಿರುವುದು ಹಾಗೂ ಈ ಕುರಿತು ನಮಗೆ ಅರಿವಿಲ್ಲ ಎಂದು ಹೊಲದ ಒಡೆಯ ರೈತ ಚಂದ್ರೇಗೌಡ ಹಾಗೂ ಅಲ್ಲಿದ್ದ ರೈತರು ವಿವರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿಗಳ ತಂಡದ ಮುಖ್ಯಸ್ಥ ಕೇಂದ್ರ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಮಿತಾಬ್‌ ಗೌತಮ್‌, 2017-18ಕ್ಕೆ ಕೇಂದ್ರ ಪ್ರಕೃತಿ ವಿಕೋಪ ನಿಧಿಯಿಂದ 245 ಕೋಟಿ ರೂ. ಮಂಜೂರು ಮಾಡಲಾಗಿದೆ. ಪ್ರಸಕ್ತ ಮೊದಲ ಕಂತಿನ ರೂಪದಲ್ಲಿ 115 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಫಸಲ್‌ ಭಿಮಾ ಯೋಜನೆ ಬೆಳೆ ವಿಮೆ ಪರಿಹಾರದ ಕುರಿತು ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದ್ದು, ಈ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದರು.

Advertisement

ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮಾತನಾಡಿ, 2.30 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದ್ದು, 153 ಕೋಟಿ ರೂ. ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
 
ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ದಿವಾಕರ್‌, ಉಪನಿರ್ದೇಶಕ ಶಿವನಗೌಡ ಪಾಟೀಲ್‌, ತಹಶೀಲ್ದಾರ್‌ ಕೃಷ್ಣಮೂರ್ತಿ, ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಬಿ. ದೇವನಾಳ ಸೇರಿದಂತೆ ಅಧಿಕಾರಿಗಳು ಮತ್ತು ರೈತರು ಇದ್ದರು.

ನಂತರ ಅಮಿತಾಬ್‌ ಗೌತಮ್‌ ನೇತೃತ್ವದ ಅಧಿಕಾರಿಗಳ ತಂಡವು ಕೂಡ್ಲಿಗಿಗೆ ತೆರಳಿ, ಅಲ್ಲಿಂದ ಭಟ್ಟನಹಳ್ಳಿಗೆ ತೆರಳಿ ಹಾನಿಗೀಡಾದ ಬೆಳೆಗಳ ವೀಕ್ಷಣೆ ಮತ್ತು ರೈತರೊಂದಿಗೆ ಚರ್ಚೆ ನಡೆಸಿತು. ನಂತರ ಅಲಬೂರಗೆ ತೆರಳಿ ಅಲ್ಲಿಯೂ ಹಾನಿಗೀಡಾದ ಬೆಳೆಗಳ ಪರಿಶೀಲಿಸಿ ನಂತರ ದಾವಣಗೆರೆ ಜಿಲ್ಲೆಯ ಹರಪನಳ್ಳಿಗೆ ತಾಲೂಕಿನ ಹಳ್ಳಿಗಳಿಗೆ ತೆರಳಿತು.

ಕೇಂದ್ರ ಬರ ಅಧ್ಯಯನ ತಂಡ ಬಾರದಕ್ಕೆ ರೈತರ ಆಕ್ರೋಶ
ಹಗರಿಬೊಮ್ಮನಹಳ್ಳಿ: ಸಂಪೂರ್ಣ ಬೆಳೆಹಾನಿಯಿಂದ ತತ್ತರಿಸಿದ್ದ ತಾಲೂಕಿನ ರೈತರ ಬೆಳೆಗಳನ್ನು ವೀಕ್ಷಿಸದೇ ತೆರಳಿದ ಬರ ಅಧ್ಯಯನ ತಂಡದ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಬರ ಅಧ್ಯಯನದ ಕೇಂದ್ರ ತಂಡ ತಾಲೂಕಿನ ಅಲಬೂರು ಗ್ರಾಮಕ್ಕೆ ಭೇಟಿ ನೀಡಲು ಸಮಯ ನಿಗದಿಪಡಿಸಲಾಗಿತ್ತು. ತಾಲೂಕು ಆಡಳಿತ ಅಲಬೂರು ಗ್ರಾಮದಲ್ಲಿ ಬೆಳಗಿನಿಂದಲೇ ಕೇಂದ್ರ ತಂಡದ ಬರುವಿಕೆಗೆ ತಯಾರಿ ನಡೆಸಿತ್ತು.

ಅಲಬೂರು ಗ್ರಾಮದ ರೈತ ನಾಗಪ್ಪ ಅವರ 6 ಎಕರೆ ಸೂರ್ಯಕಾಂತಿ ಬೆಳೆ, ದೊಡ್ಡಬಸಪ್ಪ ಅವರ 11 ಎಕರೆ ಮುಸುಕಿನ ಜೋಳ ಮತ್ತು ಹನುಮಂತಪ್ಪರ 2 ಎಕರೆ ಮುಸುಕಿನಜೋಳದ ವೀಕ್ಷಣೆಗೆ ಸಿದ್ಧತೆ ನಡೆಸಲಾಗಿತ್ತು. ತಂಡಕ್ಕೆ ಸ್ವಾಗತ ಕೋರಿ ಫ್ಲೆಕ್ಸ್‌ ಹಾಕಲಾಗಿತ್ತು. ಅಲ್ಲದೇ ಬರಪೀಡಿತ ಬೆಳೆಗಳ ಸ್ಥಿತಿಗತಿ ಕುರಿತಾದ ಅಂಕಿ-ಅಂಶಗಳನ್ನು ಮತ್ತೂಂದು ಫ್ಲೆಕ್ಸ್‌ನಲ್ಲಿ ದಾಖಲಿಸಲಾಗಿತ್ತು.
 
ಆದರೆ, ಅಧ್ಯಯನ ತಂಡ ಗ್ರಾಮಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಬರ ಸಮೀಕ್ಷೆ ಕಾರ್ಯಕ್ಕೆ ಹಿನ್ನಡೆಯಾದಂತಾಗಿದೆ. ಬಿರುಬಿಸಿಲಿನಲ್ಲಿ ಕಾಯುತ್ತಿದ್ದ ರೈತರು ಕೇಂದ್ರ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ರಾಜ್ಯದ ವಿವಿಧೆಡೆ ಬರ ತಾಂಡವಾಡುತ್ತಿದ್ದು, ಕೂಡಲೇ ಪರಿಹಾರ ಒದಗಿಸುವಂತೆ ಮತ್ತು ಪರಿಶೀಲನೆ ನಡೆಸುವಂತೆ ಕೋರಿದ ಹಿನ್ನೆಲೆ ಮೂರು ತಂಡಗಳನ್ನಾಗಿ ವಿಂಗಡಿಸಿ ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಬರಸ್ಥಿತಿ ಅಧ್ಯಯನ ಮಾಡಲಾಗಿದೆ. ನ.19ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಕೇಂದ್ರ ಸರಕಾರಕ್ಕೆ ಅಂತಿಮ ವರದಿ ಶೀಘ್ರ ಸಲ್ಲಿಸಲಾಗುವುದು. ತಮ್ಮ ಜಿಲ್ಲೆಯಲ್ಲಿಯೂ ಭೀಕರ ಬರವಿರುವುದು ಗಮನಕ್ಕೆ ಬಂದಿದ್ದು, ಸೂಕ್ತ ಮತ್ತು ಬಳ್ಳಾರಿ ಜಿಲ್ಲೆಗೆ ಅನುಕೂಲವಾಗುವ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು. 
 ಅಮಿತಾಬ್‌ ಗೌತಮ್‌, ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next