Advertisement
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆ ಕುರಿತು ಅವರು ಮಾಹಿತಿ ನೀಡಿದರು. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಲಿದ್ದೇವೆ ಎಂದರು.
ಬೆಳೆಗಳ ಸ್ಪಷ್ಟ ಚಿತ್ರಣ ನೀಡುವಂತೆ ಸೂಚಿಸಲಾಗಿದೆ. ಸಮೀಕ್ಷೆಗೂ ಮುನ್ನ ಗ್ರಾಮ ಮಟ್ಟದ ಅಧಿಕಾರಿಗಳಿಗೆ
ತರಬೇತಿ ನೀಡಲಾಗುತ್ತಿದೆ ಎಂದರು. ಸಮೀಕ್ಷೆ ಸಂದರ್ಭದಲ್ಲಿ ಯಾವ ಬೆಳೆಯೂ ಕೈ ತಪ್ಪದಂತೆ ನೋಡಿಕೊಳ್ಳಲು ಜಾಗ್ರತೆ ವಹಿಸಲಾಗಿದೆ. ಆಯಾ ಗ್ರಾಮಗಳ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರು ತಂಡದೊಂದಿಗೆ ಇದ್ದರೆ ಉತ್ತಮ. ಸಮೀಕ್ಷೆ ಅವಧಿಯಲ್ಲೇ ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ದಾಖಲು ಮಾಡಲಾಗುವುದು
ಎಂದು ಹೇಳಿದರು.
Related Articles
Advertisement
ಬೆಸ್ಕಾಂ ಗ್ರಾಮಾಂತರ ಉಪವಿಭಾಗದ ಅಧಿಕಾರಿ ಮಾತನಾಡಿ, ತಾಲೂಕಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ 3,384 ಕುಟುಂಬಗಳಿಗೆ ಕೇಂದ್ರ ಸರ್ಕಾರದ ದೀನ್‌ದಯಾಳ್ ಗ್ರಾಮ ವಿದ್ಯುತ್ ಯೋಜನೆಯಡಿ ವಿದ್ಯುತ್ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ.
ಇದುವರೆಗೂ 1,854 ಪೂರ್ಣಗೊಂಡಿದೆ. 1,530 ಬಾಕಿ ಇದ್ದು, ಎರಡೂಮೂರು ತಿಂಗಳಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ. ಗ್ರಾಮ ಸ್ವರಾಜ್ ಹಾಗೂ ಸೌಭಾಗ್ಯ ಯೋಜನೆಯಡಿ ಎಪಿಎಲ್ ಕುಟುಂಬದವರು 500 ರೂ. ರಂತೆ ಎರಡು ಕಂತುಗಳಲ್ಲಿ ಬೆಸ್ಕಾಂಗೆ ಪಾವತಿ ಮಾಡಿದರೆ ಅವರು ಸಹ ಸವಲತ್ತು ಪಡೆಯಬಹುದು ಎಂದರು.
ನೂತನ ವಿದ್ಯುತ್ ಸಂಪರ್ಕ, ದುರಸ್ತಿ ವೇಳೆ ವಿದ್ಯುತ್ ಕಲ್ಪಿಸುವ ಸಂದರ್ಭದಲ್ಲಿ 200, 300 ರೂ. ಗಳನ್ನು ಲಂಚ ಪಡೆಯುತ್ತಿರುವ ದೂರುಗಳು ಕೇಳಿ ಬಂದಿವೆ ಎಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು. ಆದರೆ ಬೆಸ್ಕಾಂನವರು ಇದನ್ನು ಪಡೆಯುತ್ತಿಲ್ಲ. ಗುತ್ತಿಗೆ ಪಡೆದವರು ಉಪ ಗುತ್ತಿಗೆ ನೀಡಿದ್ದು, ಅದರಲ್ಲಿ ಕೆಲವರು ಪಡೆದಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬೆಸ್ಕಾಂನ ಸೆಕ್ಷನ್ ಅಧಿಕಾರಿ ಸೇರಿ ಯಾರಾದರೂ ಹಣ ಕೇಳಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಗ್ಯಾಸ್ ರಹಿತ ಫಲಾನುಭವಿಗಳು ಉಜ್ವಲ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಹಾಕದಿದ್ದರೂ ಗ್ರಾಮಗಳಿಗೆ ತೆರಳಿ ನಾವೇ ಪತ್ತೆ ಮಾಡಿ ಗ್ಯಾಸ್ ಸಂಪರ್ಕ ಕಲ್ಪಿಸುತ್ತೇವೆ ಎಂದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಶೋಭಾ, ಗ್ರಾಮೀಣ ಉಪವಿಭಾಗದ ಸಹಾಯಕ ನಿರ್ದೇಶಕ ಎಚ್. ಹನುಮಂತಪ್ಪ, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ತಾಲೂಕು ಪಂಚಾಯತ್ ಕೆಡಿಪಿ, ಸಾಮಾನ್ಯ ಸಭೆಗಳಿಗೆ ಹಾಜರಾಗದ ಲೋಕೋಪಯೋಗಿ, ಸಣ್ಣ ನೀರಾವರಿ, ಅರಣ್ಯ(ರೆಗ್ಯುಲರ್ ಫಾರೆಸ್ಟ್) ಇಲಾಖೆ ಅಧಿಕಾರಿಗಳಿಗೆ ಕೂಡಲೇ ಕಾರಣ ಕೇಳಿ ನೋಟಿಸ್ ನೀಡಿ ಶಿಸ್ತುಕ್ರಮ ಕೈಗೊಳ್ಳಬೇಕು. ಜಿಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇನೆ.
ವೇಣುಗೋಪಾಲ್, ತಾಪಂ ಅಧ್ಯಕ್ಷರು. ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೀಡುವ ಸಂದರ್ಭದಲ್ಲಿ ಆಯಾ ಭಾಗದ ಸದಸ್ಯರಿಗೆ ಮಾಹಿತಿ ನೀಡಬೇಕು. ಎಲ್ಲ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ತಲುಪುವಂತಾಗಬೇಕು.
ಬೋರಯ್ಯ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರು.