Advertisement

ಸರ್ಕಾರಕ್ಕೆ ಬೆಳೆ ಹಾನಿ ವರದಿ

12:09 PM Aug 14, 2018 | Team Udayavani |

ಲಿಂಗಸುಗೂರು: ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಸೋಮವಾರ ತಾಲೂಕಿನ ಯಲಗಲದಿನ್ನಿ ಸೇರಿ ವಿವಿಧ
ಗ್ರಾಮಗಳಲ್ಲಿನ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.

Advertisement

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಮುಂಗಾರು ಮಳೆ ವೈಫಲ್ಯದಿಂದಾಗಿ ಅಪಾರ
ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪ್ರವಾಸ ಕೈಗೊಂಡು ಹೊಲಗಳಿಗೆ ಭೇಟಿ ನೀಡಿ
ಬೆಳೆ ಹಾನಿ ವೀಕ್ಷಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂಧ ಅಲ್ಪಸ್ವಲ್ಪ ಬೆಳೆದ ಬೆಳೆಗಳು ಕೂಡ ಒಣಗುತ್ತಿವೆ. ಈ ಬಗ್ಗೆ ಪರಿಶೀಲನೆ ನಡೆಸಲು ಖುದ್ದು ನಾನೇ ಜಮೀನಿಗೆ ಭೇಟಿ ನೀಡುತ್ತಿದ್ದೇನೆ. ಈಗಾಗಲೇ ಕಳೆದ ವಾರ ದೇವದುರ್ಗ ಹಾಗೂ ರಾಯಚೂರು ತಾಲೂಕಿನಲ್ಲಿ ಪ್ರವಾಸ ಮಾಡಿದ್ದು, ಈಗ ಮಾನ್ವಿ, ಮಸ್ಕಿ, ಸಿರವಾರ, ಲಿಂಗಸುಗೂರು, ತಾಲೂಕುಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಮಳೆಯಾಶ್ರಿತ ಪ್ರದೇಶದಲ್ಲಿ ತೊಗರಿ, ಸಜ್ಜೆ, ಹತ್ತಿ ಬೆಳೆ ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ರೈತರ ಆಕ್ರೋಶ: ಜಿಲ್ಲಾ ಮಟ್ಟದ ಅಧಿಕಾರಿಗಳು ಬೆಳೆ ಹಾನಿ ಪರಿಶೀಲನೆಗೆ ತಾಲೂಕಿಗೆ ಆಗಮಿಸಿದ್ದರೂ ಈ ಬಗ್ಗೆ ತಾಲೂಕಿನ ತಹಶೀಲ್ದಾರ್‌, ಕೃಷಿ, ಕಂದಾಯ ಅಧಿಕಾರಿಗಳು ರೈತರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದರಿಂದ ರೈತರ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಾಗಲಿವೆ ಎಂದು ರೈತ ಸಂಘದ ಮುಖಂಡ ಅಮರಣ್ಣ ಗುಡಿಹಾಳ
ಆಕ್ರೋಶ ವ್ಯಕ್ತಪಡಿಸಿದರು. ಜಿಪಂ ಸಿಇಒ ನಳಿನ್‌ ಅತುಲ್‌, ಕೃಷಿ ಜಂಟಿ ನಿರ್ದೇಶಕಿ ಡಾ| ಚೇತನಾ ಪಾಟೀಲ, ತಹಶೀಲ್ದಾರ ಚಾಮರಾಜ ಪಾಟೀಲ, ಉಪ ಕೃಷಿ ನಿರ್ದೇಶಕ ಅಬೀದ್‌, ಕೃಷಿ ಸಹಾಯಕ ನಿರ್ದೇಶಕ ಎಚ್‌.ಎಸ್‌.ರಕ್ಕಸಗಿ ಇತರರು ಇದ್ದರು.

ನೂರು ದಿನ ಕೆಲಸ ನೀಡಲು ಸೂಚನೆ: ಡಿಸಿ ಹಟ್ಟಿ ಚಿನ್ನದ ಗಣಿ: ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ
ಮಳೆಯಾಗಿದೆ. ಬೆಳೆಗಳು ಒಣಗುತ್ತಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಹೇಳಿದರು.

Advertisement

ಸೋಮವಾರ ಹಟ್ಟಿ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿ
ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಬೆಳೆ ಹಾನಿ
ವೀಕ್ಷಿಸಿದ್ದು, ಮುಂಗಾರು ಬೆಳೆ ಬಹುತೇಕ ನಷ್ಟವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳ ಜತೆ
ಚರ್ಚಿಸಿ ಬೆಳೆ ವಸ್ತುಸ್ಥಿತಿ ವರದಿ ಸಿದ್ಧಪಡಿಸಕ ಸಮಗ್ರ ಮಾಹಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು
ಎಂದರು.

ಪ್ರತಿ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಕಾರ್ಡ್‌ ಹೊಂದಿದ ಪ್ರತಿ ಕುಟುಂಬಕ್ಕೆ 100 ದಿನ ಕೆಲಸ ನೀಡಲು
ಆದೇಶಿಸಲಾಗಿದೆ. ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 40 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ.
ಈ ಹಿಂದಿನ ವರ್ಷದ ಬೆಳೆ ವಿಮೆ ನೀಡಲು 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2016-17 ನೇ ಸಾಲಿನ ವಿಮಾ
ಹಣ 10 ಕೋಟಿ ರೂ.ಗಳನ್ನು ಮುಂದಿನ ವಾರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ ಅವರು, ಮುಂದಿನ
ವಾರ ಕೃಷಿ ಸಚಿವರು ಬೆಳೆ ಹಾನಿ ವಸ್ತುಸ್ಥಿತಿ ವೀಕ್ಷಣೆಗೆ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಹೇಳಿದರು.

ಪಟ್ಟಣದಲ್ಲಿ ಕುಡಿಯುವ ನೀರಿನ ಬಗ್ಗೆ ಸಾರ್ವಜನಿಕರು ಮನವಿ ಮಾಡಿದಾಗ, ಸಮಸ್ಯೆ ನಿವಾರಣೆಗೆ ಅಧಿಕಾರಿಗಳಿಗೆ
ಸೂಚಿಸಿದ್ದಾಗಿ ಹೇಳಿದರು. ಜಿಪಂ ಕಾ.ನಿ. ಅಧಿಕಾರಿ ನಳಿನ್‌ ಅತುಲ್‌, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತಹಶೀಲ್ದಾರ್‌ ಚಾಮರಾಜ ಪಾಟೀಲ, ತಾಲೂಕು ಕೃಷಿ ಅಧಿಕಾರಿ ರಕ್ಕಸಗಿ, ವಿವಿಧ ಇಲಾಖೆ
ಅಧಿಕಾರಿಗಳು, ರೈತ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next