ಮುದ್ದೇಬಿಹಾಳ: ತಾಲೂಕಿನಲ್ಲಿ ಅಕಾಲಿಕ ಮಳೆ ಮತ್ತು ತೇವಾಂಶ ಪರಿಣಾಮ ಹಾನಿಗೀಡಾಗುತ್ತಿರುವ ವಿವಿಧ ಬೆಳೆಗಳ ವಸ್ತುನಿಷ್ಠ ಸಮೀಕ್ಷೆ ನಡೆಸುವ ಕುರಿತು ಇಲ್ಲಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಅಧ್ಯಕ್ಷತೆಯಲ್ಲಿ ಕಂದಾಯ, ಪಂಚಾಯತ್ ರಾಜ್, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಪಿಡಿಒ, ಗ್ರಾಮ ಲೆಕ್ಕಿಗ, ಕೃಷಿ ಸಹಾಯಕರ ಸಭೆ ನಡೆಯಿತು.
ಸಭೆಯಲ್ಲಿ ಬೆಳೆ ಹಾನಿ ಕುರಿತು ನಡೆಸಬೇಕಾದ ಸಮೀಕ್ಷೆ ಹೇಗಿರಬೇಕು ಮತ್ತು ಯಾವ ಅಂಶಗಳನ್ನು ಒಳಗೊಂಡು ಸಮೀಕ್ಷೆಯನ್ನು ನಿಖರವಾಗಿ, ವಸ್ತುನಿಷ್ಠವಾಗಿ ನಡೆಸಬೇಕು ಎನ್ನುವ ಕುರಿತು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಕುರಿತು ಚರ್ಚಿಸಲಾಯಿತು.
ಶಾಸಕ ಎ.ಎಸ್. ಪಾಟೀಲ ನಡಹಳ್ಳಿಯವರು ಬೆಳೆ ಹಾನಿಯ ನಿಖರ ಸಮೀಕ್ಷೆ ಮತ್ತು ವರದಿ ಸಲ್ಲಿಕೆಗೆ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಯಾವುದೇ ಒಬ್ಬ ರೈತ ತಪ್ಪು ಸಮೀಕ್ಷೆಯಿಂದ ಹೊರಗುಳಿಯಬಾರದು ಎನ್ನುವ ಕಳಕಳಿ ಅವರಲ್ಲಿದೆ. ಅವರ ಕಳಕಳಿಯನ್ನು ಎಲ್ಲರೂ ಅರಿತುಕೊಂಡು ವಾಸ್ತವ ವರದಿ ಸಂಗ್ರಹಿಸಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಲಾಯಿತು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್, ಅತಿವೃಷ್ಟಿ ಹಾಗೂ ತೇವಾಂಶದಿಂದ ಹಾನಿಯಾಗಿರುವ ಬೆಳೆಯ ನಷ್ಟದ ಅಂದಾಜಿ ಕುರಿತು ಸರ್ಕಾರದ ಮಾನದಂಡಗಳ ಅನುಸಾರವೇ ಸಮೀಕ್ಷೆ ಮಾಡಿ ವರದಿಯನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಎರಡು ದಿನಗಳಲ್ಲಿ ಹಾನಿಯ ಅಂದಾಜು ವರದಿಯನ್ನು ತರಿಸಿಕೊಳ್ಳಲಾಗುತ್ತದೆ. ಈಗಾಗಲೇ ವೈಜ್ಞಾನಿಕ ಸಮೀಕ್ಷೆಗೆ ವಿಜ್ಞಾನಿಗಳು ಬರುವ ಸಂಭವ ಇದೆ. ಸರ್ಕಾರ ನಿರ್ದೇಶನ ನೀಡಿದ ಕೂಡಲೇ ತಂಡಗಳನ್ನು ರಚಿಸಿ ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ತಾಪಂ ಇಓ ಶಿವಾನಂದ ಹೊಕ್ರಾಣಿ, ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ, ಪಿಡಿಒಗಳು, ಗ್ರಾಮಲೆಕ್ಕಿಗರು ಸಭೆಯಲ್ಲಿ ಇದ್ದರು.
ನೀತಿ ಸಂಹಿತೆ-ಪಾಲ್ಗೊಳ್ಳದ ಶಾಸಕರು
ಎರಡು ದಿನಗಳ ಹಿಂದೆ ಬೆಳೆ ಹಾನಿ ಕುರಿತು ಖುದ್ದು ತಾವೇ ಕೆಲ ಹೊಲಗಳಿಗೆ ಹೋಗಿ ಪರಿಶೀಲನೆ ನಡೆಸಿದ್ದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಮರು ದಿನವೇ ಸಂಬಂಧಿಸಿದ ಅಧಿಕಾರಿಗಳ ತುರ್ತು ಸಭೆಯನ್ನು ತಹಶೀಲ್ದಾರ್ ಕಚೇರಿಯಲ್ಲಿ ನಡೆಸುವುದಾಗಿ ತಿಳಿಸಿದ್ದರು. ಆದರೆ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸುವಂತಿಲ್ಲ ಎನ್ನುವ ಮಾಹಿತಿ ಅರಿತು ತಾವು ಸಭೆಗೆ ಗೈರಾದರೂ ಬೆಳೆ ಹಾನಿ ಸಮೀಕ್ಷೆ ಕುರಿತು ಏನೇನು ಕ್ರಮ ಕೈಗೊಳ್ಳಬೇಕು ಎನ್ನುವ ನಿರ್ದೇಶನವನ್ನು ತಹಶೀಲ್ದಾರ್‌ಗೆ ನೀಡಿ ಅವುಗಳ ಕುರಿತು ಎಲ್ಲರ ಗಮನ ಸೆಳೆಯುವಂತೆ ತಿಳಿಸಿದ್ದರು.