Advertisement

ಡಿಸಿ-ಶಾಸಕರಿಂದ ಬೆಳೆ ಹಾನಿ ವೀಕ್ಷಣೆ

02:07 PM Jul 02, 2019 | Suhan S |

ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ವಾಡಿಕೆಗಿಂತ 40 ಮಿ.ಮೀ. ಮಳೆ ಕಡಿಮೆಯಾಗಿದೆ. ಬೆಳೆ ಹಾನಿಯಿಂದ ಯಾವುದೇ ರೈತರು ಧೃತಿಗೆಡಬಾರದು ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ನುಡಿದರು.

Advertisement

ಸೋಮವಾರ ತಾಲೂಕಿನ ನೇರಲಗುಂಡಿ, ತರಗನಹಳ್ಳಿ ಹಾಗೂ ನ್ಯಾಮತಿ ತಾಲೂಕಿನ ವಿವಿಧ ಗ್ರಾಮಗಳ ಅಡಕೆ ತೋಟಗಳಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಸವರಾಜೇಂದ್ರ ಹಾಗೂ ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಹಾನಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.

ಅಡಕೆ ತೋಟ ಬೆಳೆಸಲು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆಯಾ ಗ್ರಾಪಂ ಕಚೇರಿಗಳನ್ನು ಸಂಪರ್ಕಿಸಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು. ಸರಕಾರದ ವಿವಿಧ ಯೋಜನೆಗಳ ಬಗ್ಗೆ ಪ್ರಚಾರ ನಡೆಸಿ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಅಧಿಕಾರಿಗಳು ಪ್ರತಿದಿನ ಐದಾರು ಗ್ರಾಮಗಳಿಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಈಗಾಗಲೇ ಹೊನ್ನಾಳಿ ತಾಲೂಕಿನಲ್ಲಿ ಹಾನಿಗೀಡಾಗಿರುವ ಬೆಳೆ ವಿವರವನ್ನು ಪರಿಶೀಲಿಸಲಾಗಿದೆ. ತಾಲೂಕಿನ ನೇರಲಗುಂಡಿ, ಸಿಂಗಟಗೆರೆ, ತರಗನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಇದರ ವಿವರವನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ನಂತರ ನ್ಯಾಮತಿ ತಾಲೂಕಿನಲ್ಲಿಯೂ ಬೆಳೆ ಹಾನಿ ಪರಿಶೀಲನೆ ನಡೆಸಲಾಗುವುದು. ಅದರ ವರದಿಯನ್ನೂ ಸರಕಾರಕ್ಕೆ ಸಲ್ಲಿಸಿ ಮುಂದಿನ ಆದೇಶದನ್ವಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ರಾಜ್ಯ ಸರಕಾರ ರೈತರ ಪಾಲಿಗೆ ಸತ್ತುಹೋಗಿದೆ ಎಂದು ಕಿಡಿಕಾರಿದರು.

Advertisement

ಬೆಳೆ ಹಾನಿ ಅನುಭವಿಸಿ ಕಂಗಾಲಾಗಿರುವ ರೈತರಿಗೆ ವಿಧಾನಸಭಾ ಅಧಿವೇಶನಕ್ಕೂ ಮುನ್ನ ಪರಿಹಾರ ಒದಗಿಸದಿದ್ದರೆ ಸರಕಾರದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ 800 ಹೆಕ್ಟೇರ್‌ ಅಡಕೆ, 139 ಹೆಕ್ಟೇರ್‌ ತೆಂಗು ಮತ್ತು 18 ಹೆಕ್ಟೇರ್‌ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ. ಅನೇಕ ರೈತರು ಸಾವಿರಾರು ರೂ. ಖರ್ಚು ಮಾಡಿ ತುಂಗಭದ್ರಾ ನದಿಯಿಂದ ಹಾಗೂ ಹತ್ತಿರದ ನೀರಿನ ಮೂಲಗಳಿಂದ ಟ್ಯಾಂಕರ್‌ ಮೂಲಕ ನೀರು ಹರಿಸುವ ಮೂಲಕ ಅಡಕೆ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸಪಟ್ಟರು. ಆದರೆ, ಜೂನ್‌ ತಿಂಗಳು ಮುಗಿದರೂ ಮಳೆ ಬಾರದ ಕಾರಣ ಹಾಗೂ ನಾಲೆಗಳಲ್ಲಿ ನೀರು ಲಭಿಸದ ಕಾರಣ ಬೆಳೆಗಳು ಒಣಗಿ ಹೋಗಿವೆ. ಮುಂಗಾರು ವೈಫಲ್ಯದಿಂದಾಗಿ ತೋಟಗಾರಿಕಾ ಬೆಳೆಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಸರಕಾರ ಪರಿಹಾರ ನೀಡುವ ಮೂಲಕ ಅವರ ಜೀವನಕ್ಕೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಸರಕಾರದ ವಿವಿಧ ಯೋಜನೆಗಳು ಜನತೆಯನ್ನು ತಲುಪುತ್ತಿಲ್ಲ. ಇಲಾಖಾಧಿಕಾರಿಗಳ ಅಸಡ್ಡೆ ಇದಕ್ಕೆ ಕಾರಣ. ಆದ್ದರಿಂದ ಯೋಜನೆಗಳ ಪ್ರಚಾರಕ್ಕೆ ಸೂಕ್ತ ಕ್ರಮ ಕೈಗೊಂಡು, ನಿರ್ಲಕ್ಷಿಸುವ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಬೇಕು ಎಂದು ಆಗ್ರಹಿಸಿದರು.

ಜಿಪಂ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ಜಿಪಂ ಸದಸ್ಯರಾದ ದೀಪಾ ಜಗದೀಶ್‌, ಎಂ.ಆರ್‌. ಮಹೇಶ್‌, ಜಿಪಂ ಸಿಇಒ ಬಸವರಾಜೇಂದ್ರ, ತಹಶೀಲ್ದಾರ್‌ ತುಷಾರ್‌ ಬಿ.ಹೊಸುರು, ಕೃಷಿ ಇಲಾಖೆ ಉಪ ನಿರ್ದೇಶಕಿ ಹಂಸವೇಣಿ, ನೀರು ಸರಬರಾಜು ಇಲಾಖೆಯ ಜಿಪಂ ಇಇ ರಾಜು, ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥ್‌, ಕೃಷಿ ಅಧಿಕಾರಿ ಶಂಷೀರ್‌ ಅಹಮ್ಮದ್‌, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಜೆ.ಶಂಕರ್‌, ನೇರಲಗುಂಡಿ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next