ಚನ್ನರಾಯಪಟ್ಟಣ: ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ತಾಲೂಕಿನಲ್ಲಿ ಶೇ.70 ರಷ್ಟು ರಾಗಿ ಬೆಳೆ ಹಾನಿಯಾಗಿದ್ದು ಪ್ರತಿ ಎಕರೆಗೆ ಸರ್ಕಾರ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಶಾಸಕ ಸಿ. ಎನ್.ಬಾಲಕೃಷ್ಣ ಒತ್ತಾಯಿಸಿದರು. ತಾಲೂಕಿನಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಈಗಾಗಲೆ ಪ್ರಸಕ್ತ ವರ್ಷ ತಾಲೂಕಿನಲ್ಲಿ ಹೆಚ್ಚು ಮಂದಿ ರಾಗಿ ಬೆಳೆ ಮಾಡಿದ್ದರು ಎಕರೆಗೆ 20 ರಿಂದ 25 ಸಾವಿರ ವೆಚ್ಚ ಮಾಡಿದ್ದಾರೆ ಹಾಗಾಗಿ ಸರ್ಕಾರ ಕೂಡಲೆ ನಷ್ಟ ಭರಿಸಲು ಮುಂದಾಗಬೇಕು. ಇದಲ್ಲದೆ ಮೆಕ್ಕೆಜೋಳ, ಶುಂಠಿ ಸೇರಿದಂತೆ ಇತರ ಬೆಳೆಯೂ ಮಳೆಗೆ ಹಾನಿಯಾಗಿದೆ ಈ ಬಗ್ಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವರದಿ ತಯಾರಿಸಿದರೆ ಕೃಷಿ ಮಂತ್ರಿ ಭೇಟಿ ಮಾಡಿ ಪರಿಹಾರಕ್ಕೆ ಒತ್ತಾಯಿಸುತ್ತೇನೆ ಎಂದರು.
ಮಾಹಿತಿ ಸಂಗ್ರಹಕ್ಕೆ ಸೂಚನೆ: ನೀರಾವರಿ ಇಲಾಖೆ ಅಭಿಯಂತರರು ಕೂಡಲೆ ಸಭೆ ಸೇರಿ ಯಾವ ಕೆರೆಗಳು ಮಳೆಗೆ ಹಾನಿಯಾಗಿವೆ, ನಾಲೆಗಳು ಹಾನಿಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದೇನೆ. ಹಾನಿ ಆಗಿರುವುದನ್ನು ಮಳೆ ನಿಂತ ತಕ್ಷಣ ರಿಪೇರಿ ಮಾಡಿಸಲು ಮುಂದಾಗಬೇಕು. ಅನುದಾನದ ಕೊರತೆ ಇದ್ದರೆ ಸರ್ಕಾರದ ಜೊತೆ ಮಾತನಾಡಿ ಹೆಚ್ಚು ಅನುದಾನ ತರಲಾಗುವುದು ಎಂದು ಭರವಸೆ ನೀಡಿದರು.
ಜವಾಬ್ದಾರಿ: ಗ್ರಾಮೀಣ ಭಾಗದ ರಸ್ತೆಗಳಲ್ಲಿ ನೀರು ನಿಂತಿರುವ ಪರಿಣಾಮ ರಸ್ತೆಗಳು ಹಾಳಾಗುತ್ತಿವೆ ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸಭೆ ಮಾಡಿ ಅಂತಹ ರಸ್ತೆಯನ್ನು ಗುರುತಿಸಿ ಇಂದು ನಾಳೆಯೊಳಗೆ ನೀರು ರಸ್ತೆಯಿಂದ ಹೊರ ಹೋಗುವಂತೆ ಮಾಡುವುದು ಅವರ ಜವಾಬ್ದಾರಿಯಾಗಿದೆ.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ತಮ್ಮ ವ್ಯಾಪ್ತಿ ಗ್ರಾಮದ ರಸ್ತೆಗಳ ಬಗ್ಗೆ ಗಮನ ಹರಿಸಬೇಕು ಇಲ್ಲದೆ ಹೋದರೆ ರಸ್ತೆ ಸಂಪೂರ್ಣ ಹಾಳಾಗುತ್ತದೆ ಎಂದು ಎಚ್ಚರಿಸಿದರು. ಗ್ರಾಮದ ಒಳಗೆ ಚರಂಡಿ ಕಟ್ಟಿಕೊಂಡಿದ್ದರೆ ಅವುಗಳನ್ನು ಸ್ವತ್ಛತೆ ಮಾಡುವುದು ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ ಇಲ್ಲದೆ ಹೋದರೆ ಚರಂಡಿಯಲ್ಲಿ ನೀರು ನಿಂತು ಸೊಳ್ಳೆ ನೊಣದ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡಲಿದೆ.
ಈಗಾಗಲೇ ಕೊರೊನಾದಿಂದ ನಿಧಾನವಾಗಿ ಹೊರಬರುತ್ತಿದ್ದೇವೆ ಈ ವೇಳೆ ಇತರ ರೋಗಕ್ಕೆ ತಾಲೂಕಿನ ಗ್ರಾಮೀಣ ಭಾಗದ ಜನತೆ ತುತ್ತಾಗುವುದು ಬೇಡ ಎಂದು ತಿಳಿಸಿದರು. ಶಾಲೆ ಕಟ್ಟಡ ಕುಸಿತ: ಶಿಥಿಲಾವಸ್ಥೆಯಲ್ಲಿನ ಹಲವು ಸರ್ಕಾರಿ ಶಾಲೆ ಗೋಡೆಗಳು ಕುಸಿದಿವೆ ಅವುಗಳ ರಿಪೇರಿ ಆಗಬೇಕಿದೆ, ಇನ್ನು ಸಾಕಷ್ಟು ಶಾಲೆಯ ಕೊಠಡಿಗಳ ರಿಪೇರಿ ಮಾಡಬೇಕು .ಸುಣ್ಣ ಬಣ್ಣದ ಕೆಲಸ ಮಾಡಿಸಬೇಕಾಗಿದೆ.
ಇದಕ್ಕೆ ಎರಡು ಕೋಟಿ ರೂ.ಅನುದಾನ ಅಗತ್ಯವಿದೆ. ಸರ್ಕಾರ ಆದಷ್ಟು ಬೇಗ ಹಣ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು. ಎಪಿಎಂಸಿ ನಿರ್ದೇಶಕ ಶಿವಣ್ಣ, ತಹಸೀಲ್ದಾರ್ ಮಾರುತಿ, ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.