ವಾಡಿ: ಕಳೆದ ವರ್ಷ ನೆರೆ ಬಂದು ಊರುಗಳನ್ನೇ ಮುಳುಗಿಸಿತ್ತು. ಈ ವರ್ಷದ ವಿಪರೀತ ಮಳೆ ಮುಂಗಾರು ಬೆಳೆಯನ್ನೆ ನೀರುಪಾಲು ಮಾಡಿತು. ಬೆಳೆ ಎದ್ದು ಕಾಳು ಕಟ್ಟುವ ಮೊದಲೇ ಬೇರುಗಳು ಕೊಳೆತು ಫಸಲು ಹಾಳಾಯ್ತು. ರೈತರ ಬದುಕು ಅಕ್ಷರಶಃ ಬೀದಿಪಾಲಾಯ್ತು. ಕೋವಿಡ್ ಹೊಡೆತದಿಂದ ಗರಬಡಿದಂತಾಗಿದ್ದ ರೈತರ ಬದುಕಿಗೆ ಈ ಬಾರಿಯ ಅತಿವೃಷ್ಟಿ ಮತ್ತೂಮ್ಮೆ ಬರೆ ಎಳೆದಿದೆ.
ಭೀಮಾ ಮತ್ತು ಕಾಗಿಣಾ ನದಿಗಳ ಹರಿವು ಇರುವ ಚಿತ್ತಾಪುರ ತಾಲೂಕಿನಲ್ಲಿ ನಿರೀಕ್ಷೆ ಮೀರಿ ಮಳೆಯಾಗಿದ್ದು, ಧಾರಾಕಾರವಾಗಿ ಸುರಿದ ವರ್ಷಧಾರೆಗೆ ರೈತರ ಮೊಗದ ಹರ್ಷ ಹಳಸಿದೆ. ಮುಂಗಾರು ಬೆಳೆಯಾದ ಹೆಸರು ಮೊಳಕೆ ಯೊಡೆಯುವ ಮುನ್ನವೇ ತನ್ನ ಉಸಿರು ನಿಲ್ಲಿಸಿತು. ಮಳೆ ಹೊಡೆತಕ್ಕೆ ಸಿಕ್ಕು ಶೇ.75ರಷ್ಟು ಬೆಳೆ ಹಾಳಾಗಿದೆ ಎಂಬುದು ರೈತ ನಾಯಕರ ಆರೋಪವಾಗಿದೆ. ಹೆಸರು, ತೊಗರಿ, ಉದ್ದು, ಶೇಂಗಾ ಬೆಳೆಗಳು ಮುಗ್ಗರಿಸಿದ್ದರಿಂದ ರೈತರು ಪುನಃ ಆರ್ಥಿಕ ಸಂಕಷ್ಟದ ಪ್ರಪಾತಕ್ಕೆ ಬೀಳುವಂತಾಗಿದೆ.
ನಾಲವಾರ ಹೋಬಳಿ ವಲಯದ ಲಾಡ್ಲಾಪುರ ಗ್ರಾಮದ ಮಸಾರಿ ಜಮೀನುಗಳ ರೈತರೊಬ್ಬರ ಒಂಭತ್ತು ಎಕರೆ ಭೂಮಿಯಲ್ಲಿ ಕೇವಲ ಏಳು ಚೀಲ ಹೆಸರು ಬೆಳೆದಿದ್ದಾರೆ. ಎಕರೆಗೆ ಕನಿಷ್ಟ ಒಂದು ಚೀಲ ಕಾಳು ಕಟ್ಟದ ಬೇಸಾಯ ವೃತ್ತಿಗೆ ಬೇಸತ್ತಿದ್ದಾರೆ. ಈ ವರ್ಷ ತಾಲೂಕಿನಲ್ಲಿ ಒಟ್ಟು 11123 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಈಗಾಗಲೇ ಪ್ರಾಥಮಿಕ ವರದಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ರೈತರು ಪರಿಹಾರ ಮೊತ್ತದತ್ತ ದೃಷ್ಟಿ ನೆಟ್ಟಿದ್ದಾರೆ. ನೀರಿನಲ್ಲಿ ನಿಂತು ತೊಗರಿ ಬೆಳೆ ಕೊಳೆತ ಪರಿಣಾಮ ಬಹುತೇಕ ರೈತರು ಮತ್ತೂಮ್ಮೆ ಬಿತ್ತನೆ ಮಾಡಿದ್ದಾರೆ. ಹೆಸರು ಬಿತ್ತನೆ ಮಾಡಿದ್ದ ಕೃಷಿಕರು ಸಿಕ್ಕಷ್ಟು ಸಿಗಲಿ ಎಂದು ರಾಶಿಗೆ ಮುಂದಾಗಿ ಗೋಳಾಡುತ್ತಿದ್ದಾರೆ.
ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಗಳಿಂದ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಯುತ್ತಿದೆ. ಚಿತ್ತಾಪುರ ತಾಲೂಕಿನಲ್ಲಿ ಒಟ್ಟು 11,112ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವುದನ್ನು ಗುರುತಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಐದು ಎಕರೆ ವರೆಗೆ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದ್ದು, ಒಂದು ಹೆಕ್ಟೇರ್ ಪ್ರದೇಶಕ್ಕೆ 6800ರೂ. ಪರಿಹಾರ ಶೀಘ್ರದಲ್ಲೇ ರೈತರಿಗೆ ಸಂದಾಯವಾಗಲಿದೆ.
-ಸಂಜೀವಕುಮಾರ ಮಾನಕರ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಚಿತ್ತಾಪುರ
-ಮಡಿವಾಳಪ್ಪ ಹೇರೂರ