Advertisement
ಕುಂದಾಪುರ, ಬೈಂದೂರು, ಶಂಕರನಾರಾಯಣ ಕಾರ್ಕಳ ಹಾಗೂ ಹೆಬ್ರಿ ವಲಯದಲ್ಲಿಯೇ ಒಟ್ಟು 218 ಮಂದಿಗೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪರಿಹಾರ ಸಿಗಲು ಬಾಕಿಯಿದ್ದು, ಅಂದಾಜು 10 ಲಕ್ಷ ರೂ. ನಷ್ಟು ಪರಿಹಾರಧನ ಮಂಜೂರಾಗಬೇಕಿದೆ.
ಕಾಡು ಪ್ರಾಣಿಗಳಿಂದ ಕೃಷಿಗೆ ಹಾನಿ ಸಂಭವಿಸಿದರೆ ಅರಣ್ಯ ಇಲಾಖೆಯಿಂದ ಭತ್ತ, ತರಕಾರಿ ಸಹಿತ ಒಟ್ಟು 57 ಬೆಳೆಗಳಿಗೆ ನಷ್ಟ ಪರಿಹಾರ ಸಿಗುತ್ತದೆ. ಒಂದು ಕ್ವಿಂಟಾಲ್‌ಗೆ ಭತ್ತ- 1,320 ರೂ., ಉದ್ದು -3,400 ರೂ., ನೆಲಗಡಲೆ – 3,100 ರೂ., ಶುಂಠಿ – 3,870 ರೂ., ತೊಂಡೆಕಾಯಿ- 1,200 ರೂ., ಹಾಗಲಕಾಯಿ – 1,800 ರೂ., ಬೆಂಡೆಕಾಯಿ – 1,200 ರೂ., ಬದನೆ- 800 ರೂ., ನುಗ್ಗೆಕಾಯಿ- 3,200 ರೂ., ಕಲ್ಲಂಗಡಿ – 1,400 ರೂ., ಸೇವಂತಿಗೆ -24 ರೂ. (ಪ್ರತೀ ಮಾರು) ಪರಿಹಾರ ಸಿಗುತ್ತದೆ. ಕಾಡು ಪ್ರಾಣಿಗಳಿಂದ ಪ್ರಾಣ ಹಾನಿ, ಶಾಶ್ವತ ಅಂಗವಿಕಲತೆಯಾದರೆ 5 ಲಕ್ಷ ರೂ., ಭಾಗಶಃ ಅಂಗವಿಕಲತೆ- 2.50 ಲಕ್ಷ ರೂ., ಗಾಯಗೊಂಡರೆ – 30 ಸಾವಿರ ರೂ., ಕಾಡಾನೆ ದಾಳಿಯಿಂದ ಆಸ್ತಿ ಪಾಸ್ತಿ ನಷ್ಟವಾದರೆ 10 ಸಾವಿರ ರೂ. ಪರಿಹಾರ ಸಿಗುತ್ತದೆ. ಬೆಳೆ ಹಾನಿಯಾದವರು ಜಾಗದ ಆರ್‌ಟಿಸಿ ಆಧಾರದಲ್ಲಿ ಸ್ಥಳೀಯ ವಲಯ ಅರಣ್ಯಾ ಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಅಲ್ಲಿನ ವಲಯ ಅರಣ್ಯಾಧಿಕಾರಿಗಳ ನಿಯೋಗವೊಂದು ನಷ್ಟ ಪರಿಹಾರದ ಕುರಿತಂತೆ ಪರಿಶೀಲನೆ ನಡೆಸಿ, ಅಂದಾಜು ನಷ್ಟ ಲೆಕ್ಕ ಹಾಕಿ ಸರಕಾರಕ್ಕೆ ಮಂಜೂರಾತಿಗೆ ವರದಿ ಸಲ್ಲಿಸುತ್ತಾರೆ. ಸರಕಾರ ಪರಿಹಾರ ಮಂಜೂರು ಮಾಡುತ್ತಿದ್ದು, ಅದನ್ನು ಸಂತ್ರಸ್ತ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಇಲಾಖೆಯಿಂದ ಪಾವತಿಸಲಾಗುತ್ತದೆ.
Related Articles
ಕುಂದಾಪುರ ವಿಭಾಗದಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಯಲ್ಲಿ ಗರಿಷ್ಠ ಮಂದಿ ರೈತರಿಗೆ ಪರಿಹಾರ ಸಿಗಲು ಬಾಕಿಯಿದೆ. 73 ಮಂದಿ ರೈತರಿಗೆ, ಅಂದಾಜು 8 ಲಕ್ಷ ರೂ. ನಷ್ಟ ಪರಿಹಾರ ಸಿಗಬೇಕಿದೆ. ಅದರಲ್ಲೂ ಕೆಲವರಿಗೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ, ಇನ್ನೂ ಪರಿಹಾರ ಸಿಕ್ಕಿಲ್ಲ. ಇನ್ನು ಕುಂದಾಪುರ ವಲಯದಲ್ಲಿ 70 ಮಂದಿ ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, ಅಂದಾಜು 2 ಲಕ್ಷ ರೂ. ಬಾಕಿಯಿದೆ. ಬೈಂದೂರು ವಲಯದಲ್ಲಿ 2020 ರಲ್ಲಿ 6 ಮಂದಿ, ಈ ವರ್ಷ 30 ಸೇರಿದಂತೆ ಒಟ್ಟು 36 ಮಂದಿಗೆ ಪರಿಹಾರ ಸಿಗಬೇಕಿದೆ. ಇನ್ನು ಹೆಬ್ರಿ ವಲಯದಲ್ಲಿ 28 ಮಂದಿ ಹಾಗೂ ಕಾರ್ಕಳ ವಲಯದಲ್ಲಿ 11 ಮಂದಿಗೆ ಬೆಳೆಹಾನಿ ನಷ್ಟ ಪರಿಹಾರ ಸಿಗಲು ಬಾಕಿಯಿದೆ.
Advertisement
ತ್ವರಿತಗತಿಯ ಪ್ರಕ್ರಿಯೆಕೆಲವು ವರ್ಷಗಳ ಹಿಂದೆ ಈ ಪ್ರಕ್ರಿಯೆ ಸ್ವಲ್ಪಮಟ್ಟಿಗೆ ನಿಧಾನಗತಿಯಾಗುತ್ತಿತ್ತು. ಆದರೆ ಈಗ ನಾವು ಆದ್ಯತೆ ನೆಲೆಯಲ್ಲಿ ರೈತರಿಗೆ ತ್ವರಿತಗತಿಯಲ್ಲಿ ಪರಿಹಾರ ಸಿಗುವಂತೆ ಆಗಾಗ ಅರ್ಜಿ ಪರಿಶೀಲನೆ ನಡೆಸಿ, ನಮ್ಮ ಪ್ರಧಾನ ಕಚೇರಿಗೆ ವರದಿ ಸಲ್ಲಿಸುತ್ತಿದ್ದೇವೆ. ಒಟ್ಟಾರೆ 8 ರಿಂದ 9 ಲಕ್ಷ ರೂ. ನಷ್ಟ ಬಾಕಿ ಇರಬಹುದು. ಆದರೆ ನಮ್ಮಲ್ಲಿ ಯಾವುದೇ ಅನುದಾನ ಬಾಕಿ ಇಲ್ಲ. ಮಂಜೂ ರಾದ ತತ್‌ಕ್ಷಣ ರೈತರ ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗುತ್ತಿದೆ.
– ಆಶೀಶ್ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ -ಪ್ರಶಾಂತ್ ಪಾದೆ