ಆಳಂದ: ಮುಂಗಾರು ಮಳೆ ಅವಾಂತರದಿಂದಾಗಿ ತಾಲೂಕಿನ ಖಜೂರಿ, ಆಳಂದ ಸೇರಿದಂತೆ ಹಲವೆಡೆ ಅಲ್ಪಾವಧಿ ಬೆಳೆಯೊಂದಿಗೆ ದೀರ್ಘಾವಧಿ ಬೆಳೆಯೂ ಕೈಗೆಬಾರದೇ ಹಾನಿಗೀಡಾದರೂ ಸರ್ಕಾರದಿಂದ ಬೆಳೆ ಹಾನಿ ಪರಿಹಾರದ ಡಾಟಾ ಎಂಟ್ರಿ ಲಾಗಿನ್‌ಗೆ ನೋಂದಣಿ ಕಾರ್ಯ ಇನ್ನು ಆರಂಭವಾಗಿಲ್ಲ.
ಮಳೆ ಅವಾಂತರದಿಂದಾಗಿ ತಾಲೂಕಿನ ಖಜೂರಿ, ಆಳಂದ ವಲಯದ ತೋಟಗಾರಿಕೆ ಸೇರಿದಂತೆ ಮುಂಗಾರು ಬೆಳೆಗಳು ಹಾನಿಗೀಡಾಗಿವೆ. ರಸ್ತೆ, ಸೇತುವೆಗಳಿಗೆ ಹಾನಿ ಸಂಭವಿಸಿದೆ. ಅಲ್ಲದೇ 158 ಮನೆಗಳು ಭಾಗಶಃ ಕುಸಿದಿವೆ. ತೊಗರಿ, ಹೆಸರು, ಸೋಯಾಬಿನ್ ಬೆಳೆಗಳು ಶೇ. 70ರಷ್ಟು ಹಾನಿಯಾಗಿವೆ. ಆದರೆ ಜಂಟಿ ಸಮೀಕ್ಷೆ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೆಲವು ಭಾಗದಲ್ಲಿ ಬೆಳೆಯಿದ್ದರೂ ಇಳುವರಿ ಬರದಂತಾಗಿದೆ.
ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯಿಂದ ನಡೆಯುವ ಹಾನಿಯ ಜಂಟಿ ಸಮೀಕ್ಷೆ ವರದಿ ಪಡೆಯಲು ಸರ್ಕಾರದ ಬೆಳೆ ಹಾನಿ ಡಾಟಾ ಎಂಟ್ರಿಗೆ ಲಾಗಿನ್ ಆಗಬೇಕು. ಆದರೂ ಇನ್ನೂ ಈ ಕಾರ್ಯ ಆರಂಭವಾಗಿಲ್ಲ. ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶಂಕರಗೌಡ ಪಾಟೀಲ ಅವರು, ಕಲ್ಲಂಗಡಿ, ಮೆಣಸಿನಕಾಯಿ, ಟೋಮ್ಯಾಟೋ, ಸವತೆ, ಪಪ್ಪಾಯಿ ಹೀಗೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು ಸರ್ವೇ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಸ್ತೆ ಸೇತುವೆ ಹಾನಿ: ಸತತ ಮಳೆಯಿಂದ ಲಾಡಚಿಂಚೋಳಿ ಮಾರ್ಗದ ಭೂಸನೂರ- ಮಾದನಹಿಪ್ಪರಗಾ ರಸ್ತೆ, ರಾಜ್ಯ ಹೆದ್ದಾರಿ 32ರ ಸುಲೆಪೇಟ್ ಉಮರಗಾ ಹೆದ್ದಾರಿಯಲ್ಲಿ ಅಲ್ಲಲ್ಲಿ ರಸ್ತೆ ಹಾನಿಯಾಗಿದೆ. ಇದೇ ಹೆದ್ದಾರಿಯ ಆಳಂದ-ಖಜೂರಿ ವರೆಗಿನ ಹೆದ್ದಾರಿ ತೆಗ್ಗು ದಿನ್ನೆಗಳು ಬಿದ್ದಿದ್ದು, ತಡಕಲ್ ಬಳಿ ರಸ್ತೆ ಕೊಚ್ಚಿ ಸಂಚಾರಕ್ಕೆ ಅಡೆತಡೆಯಾಗಿದೆ. ಅವರಾದ-ಸದಾಶಿವಘಡ ಹೆದ್ದಾರಿ ರಸ್ತೆಗೆ ತೆಗ್ಗು ದಿನ್ನೆಗಳು ಬಿದ್ದಿವೆ. ಪಟ್ಟಣದ ಚೆಕ್‌ಪೋಸ್ಟ್‌ನಿಂದ ಎಚ್ ಕೆಇ ಡಿಗ್ರಿ ಕಾಲೇಜು ಸಂಪರ್ಕದ ಹೊಸ ರಸ್ತೆ ಸೇತುವೆಯ ಎರಡು ಬದಿಯಲ್ಲಿರುವ ದಿಬ್ಬು ಕೊಚ್ಚಿಹೋಗಿದೆ. ಮಳೆಯ ನೀರಿನ ರಭಸಕ್ಕೆ ಮಟಕಿ ಸೇತುವೆ ಮೇಲೆ ಪ್ರವಾಹ ಹರಿದು ರಸ್ತೆ ಕೊಚ್ಚಿಹೋಗಿ ಸಂಚಾರ ಕಡಿತವಾಗಿದೆ. ಸದ್ಯ ತಾತ್ಕಾಲಿಕವಾಗಿ ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿದೆ.
ಹಡಲಗಿ, ಯಳಸಂಗಿ, ಕಣಮಸ್ ಸೇರಿದಂತೆ ಹಲವೆಡೆ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಹೊನ್ನಳ್ಳಿ, ದೇವಂತಗಿ, ಮಾಡಿಯಾಳ ನಡುವಿನ ರಸ್ತೆ ಇನ್ನೂ ಡಾಂಬರೀಕರಣ ಕಾಮಗಾರಿ ನಡೆಯಬೇಕಾಗಿದೆ. ಅನೇಕ ಗ್ರಾಮಗಳ ಸಂಪರ್ಕ ರಸ್ತೆಗಳಿಗೆ ಕೈಗೊಂಡ ಸೇತುವೆಗಳಿಗೆ ತಡೆಗೋಡೆಗಳಿಲ್ಲದ್ದಕ್ಕೆ ರಾತ್ರಿ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಕುರಿತು ಸಂಬಂಧಿತ ಲೋಕೋಪಯೋಗಿ ಇಲಾಖೆ ಕಾರ್ಯಪ್ರವೃತ್ತವಾಗಬೇಕಿದೆ.
–ಮಹಾದೇವ ವಡಗಾಂವ