ಕುಂಬಳೆ: ಅನಂತಪುರದ ಶ್ರೀ ಪದ್ಮನಾಭ ದೇವಸ್ಥಾನದ ಸರೋವರದಲ್ಲಿ ದೀಪಾವಳಿ ವೇಳೆ ಪ್ರತ್ಯಕ್ಷಗೊಂಡ ಮೊಸಳೆಯನ್ನು ನೋಡಲು ಭಕ್ತರ ದಂಡು ಹರಿದು ಬರುತ್ತಿದೆ. ರವಿವಾರ ಸಂಜೆ ಒಮ್ಮೆ ಮೊಸಳೆಯು ಗುಹೆಯಿಂದ ಹೊರಗೆ ಬಂದಿದೆ. ಜನರ ಸದ್ದು ಕೇಳಿ ಭಯವಾಗಿ ಗುಹೆಯೊಳಗಿನಿಂದ ಹೊರಬರಲು ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಕಾಂಞಂಗಾಡಿನ ಭಕ್ತರ ಕುಟುಂಬ ಸದಸ್ಯರು ಕ್ಷೇತ್ರಕ್ಕೆ ಬಂದಿದ್ದರು. ಇವರ ಜತೆಗಿದ್ದ ಮಗುವೊಂದು ಮೊಸಳೆ ನೋಡಬೇಕೆಂದು ಹಠ ಹಿಡಿದಾಗ ಇಲ್ಲ ಎಂದು ಅಮ್ಮ ಹೇಳಿದರೂ ಮಗು ಅಳು ನಿಲ್ಲಿಸಿಲ್ಲ. ಇದೇ ಸಂದರ್ಭ ಕ್ಷೇತ್ರದ ಗುಹೆಯಿಂದ ಮೊಸಳೆ ಹೊರಬಂದು ಕೊಳದ ದಡದ ಕಲ್ಲಿನಲ್ಲಿ ನಿಂತುದನ್ನು ತಂಡ ತಮ್ಮ ಮೊಬೈಲಿನಲ್ಲಿ ಸೆರೆಹಿಡಿದರು.
ಇದರಿಂದ ಮಗು ಅಳು ನಿಲ್ಲಿಸಿತು. ಈ ಮಾಹಿತಿಯನ್ನು ಜಾಲತಾಣ ಮತ್ತು ಮಾಧ್ಯಮಗಳಿಗೆ ನೀಡಿದರೂ ಇದನ್ನು ಅಧಿಕೃತವೆಂಬುದಾಗಿ ಪರಿಗಣಿಸಿಲ್ಲ.ಆದರೆ ಕಾಂಞಂಗಾಡಿನ ಅದೇ ಕುಟುಂಬ ಶುಕ್ರವಾರ ಮತ್ತೆ ಕ್ಷೇತ್ರಕ್ಕೆ ಬಂದಾಗ ಮೊಸಳೆ ದರ್ಶನ ನೀಡಿದ್ದರಿಂದ ಅವರ ಸಹಿತ ಅರ್ಚಕ, ಭಕ್ತರಲ್ಲಿದ್ದ ಸಂಶಯ ನಿವಾರಣೆಯಾಯಿತು.