Advertisement

Anantapura ಸರೋವರದಲ್ಲಿ ಮೊಸಳೆ ಪ್ರತ್ಯಕ್ಷ!: “ಬಬಿಯಾ’ ಅಗಲಿ ಒಂದೇ ವರ್ಷಕ್ಕೆ ಪವಾಡ!

09:15 PM Nov 11, 2023 | Team Udayavani |

ಕುಂಬಳೆ: ಪುರಾತನ ಸರೋವರ ಕ್ಷೇತ್ರ ಅನಂತಪುರ ಶ್ರೀ ಪದ್ಮನಾಭ ದೇವಸ್ಥಾನದಲ್ಲಿ ಶತಮಾನಗಳಿಂದ ನೆಲೆಸಿದ್ದ ದೇವರ ಮೊಸಳೆ “ಬಬಿಯಾ’ ಮೃತಪಟ್ಟು ವರ್ಷ ಕಳೆಯುವಷ್ಟರಲ್ಲಿ ಇನ್ನೊಂದು ಮೊಸಳೆ ಅದೇ ಕೆರೆಯಲ್ಲಿ ಕಾಣಿಸಿಕೊಂಡಿದೆ.

Advertisement

ಇದರೊಂದಿಗೆ ಇಂದಲ್ಲ ನಾಳೆ ಇನ್ನೊಂದು ಮೊಸಳೆ ಬಂದೇ ಬರುತ್ತದೆ ಎಂಬ ಆಸ್ತಿಕರ ನಂಬಿಕೆಗೆ ಇಂಬು ನೀಡಿದೆ. ಮೊಸಳೆ ಕಂಡುಬಂದಿರುವುದನ್ನು ದೇಗುಲದ ಆಡಳಿತ ಮಂಡಳಿ ದೃಢಪಡಿಸಿದೆ.

ಶತಮಾನಗಳಿಂದ ದೇವಾಲಯದ ಕೊಳದಲ್ಲಿ ಮೊಸಳೆಯೊಂದು ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿತ್ತು. “ಬಬಿಯಾ’ ಎಂಬ ಹೆಸರಿನಿಂದ ಅದನ್ನು ಕರೆಯುತ್ತಿದ್ದರು. ಬ್ರಿಟಿಷರ ಆಡಳಿತವಿದ್ದಾಗ ಅಧಿಕಾರಿಯೊಬ್ಬ ಅದನ್ನು ಗುಂಡಿಟ್ಟು ಕೊಂದಿದ್ದ. ಬಳಿಕ ಎರಡನೇ “ಬಬಿಯಾ’ ಕಾಣಿಸಿಕೊಂಡಿತ್ತು. ಕ್ಷೇತ್ರದಲ್ಲಿ ಮಧ್ಯಾಹ್ನ ಪೂಜೆಯ ಬಳಿಕ ಪುರೋಹಿತರು ಅನ್ನ ನೈವೇದ್ಯದೊಂದಿಗೆ ಕೆರೆ ಬಳಿ ತೆರಳಿ ಕರೆದಾಗ ಗುಹೆಯಿಂದ ಹೊರಬಂದು ನೈವೇದ್ಯವನ್ನು ಸ್ವಿಕರಿಸಿ ಗುಹೆಗೆ ಮರಳುತ್ತಿತ್ತು. 75 ವರ್ಷಗಳ ಕಾಲ ಪೂಜಿಸಲ್ಪಟ್ಟ 2ನೇ ಬಬಿಯಾ 2022ರ ಅಕ್ಟೋಬರ್‌ 9ರಂದು ವೃದ್ಧಾಪ್ಯದ ಕಾರಣ ಅಸುನೀಗಿತ್ತು. ಒಂದು ವರ್ಷದ ಬಳಿಕ ಅಗಲಿದ ಮೊಸಳೆಯ ಸಂಸ್ಮರಣೆ ಕಾರ್ಯಕ್ರಮವನ್ನೂ ಮಾಡಲಾಗಿತ್ತು.

ಕಳೆದ ಮಂಗಳವಾರ ಕೇರಳ ಭಾಗದಿಂದ ಆಗಮಿಸಿದ ನಾಲ್ವರು ಭಕ್ತರ ತಂಡಕ್ಕೆ ಕೆರೆ ಬಳಿಯ ಪಾದೆಯ ಮೇಲೆ ವಿಹರಿಸುತ್ತಿದ್ದ ಮೊಸಳೆ ಕಾಣಿಸಿದ್ದು, ಛಾಯಾಚಿತ್ರ ಕ್ಲಿಕ್ಕಿಸಿ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಮಲೆಯಾಳ ಸಂಜೆ ಪತ್ರಿಕೆಯೊಂದು ವರದಿಯನ್ನು ಪ್ರಕಟಿಸಿದರೂ ಕ್ಷೇತ್ರದ ಆಡಳಿತದವರು ದೃಢಪಡಿಸಿರಲಿಲ್ಲ. ಈ ಬಾರಿಯ ದೀಪಾವಳಿಗೆ ಈ ಪವಾಡಸದೃಶ ಘಟನೆ ಆಸ್ತಿಕ ಭಕ್ತರ ಸಂಭ್ರಮವನ್ನು ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next