ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾಮದ ಕುದೂರು ಸಮೀಪ ರಬ್ಬರ್ ತೋಟವೊಂದರಲ್ಲಿ ಇಂದು ಬೆಳಗ್ಗೆ 11 ರ ಸುಮಾರಿಗೆ ಕೆಲಸ ನಿರ್ವಹಿಸುತ್ತಿದ್ದವರಿಗೆ ಮೊಸಳೆಯೊಂದು ಎದುರಾದ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಕುದೂರು ನಿವಾಸಿ ಸದಾಶಿವ ಎಂಬುವವರ ರಬ್ಬರ್ ತೋಟ ಸಮೀಪದ ತೋಡಿನಲ್ಲಿ ಸುಮಾರು 8 ರಿಂದ 9 ಅಡಿ ಉದ್ದದ ಮೊಸಳೆ ಕಂಡುಬಂದಿದೆ.
ಸ್ಥಳೀಯರಾದ ಸಂತೋಷ್ ಅವರು ರಬ್ಬರ್ ತೋಟದ ಸೊಪ್ಪು ತೆರವುಗೊಳಿಸುವ ವೇಳೆ ಪತ್ತೆಯಾಗಿದೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಕಳೆದ 2019 ರ ಜೂನ್ ಅವಧಿಯಲ್ಲಿ ಧರ್ಮಸ್ಥಳ ಗ್ರಾಮದ ದೊಂಡೋಲೆ ಸಮೀಪ ಪಾಳು ಬಾವಿಯಲ್ಲಿ ಮೊಸಳೆ ಪತ್ತೆಯಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ಬಳಿಕ ಅರಣ್ಯ ಇಲಾಖೆಯ ಕಾರ್ಯಚರಣೆಯಿಂದ ಮೊಸಳೆಯನ್ನು ಸಂರಕ್ಷಿಸಿ ಚಾರ್ಮಾಡಿ ರಕ್ಷಿತಾರಣ್ಯಕ್ಕೆ ಬಿಡಲಾಗಿತ್ತು.
ಎರಡು ವರ್ಷಗಳ ಬಳಿಕ ಬೆಳ್ತಂಗಡಿ ತಾಲೂಕಿನಲ್ಲಿ ಎರಡನೆ ಬಾರಿಗೆ ಮೊಸಳೆಯೊಂದು ಪತ್ತೆಯಾಗಿದೆ. ಸಾಮಾನ್ಯವಾಗಿ ರಕ್ಷಿತಾರಣ್ಯ ಸೇರಿದಂತೆ, ಕಾಡಂಚಿನ ನದಿಗಳಲ್ಲಿ ಮೊಸಳೆಗಳು ಕಂಡುಬರುತ್ತವೆ. ಇದೀಗ ಕಳೆದ ತಿಂಗಳು ಚಾರ್ಮಾಡಿ ಚಿಕ್ಕಮಗಳೂರು ಆಸುಪಾಸು ಅತೀ ಹೆಚ್ಚು ಮಳೆ ಸುರಿದಿದ್ದರಿಂದ ಆಹಾರ ಅರಸುತ್ತಾ ಮೊಸಳೆ ಕೆಳಭಾಗಕ್ಕೆ ಬಂದಿರುವ ಸಾಧ್ಯತೆ ಇದೆ. ಸಿಬ್ಬಂದಿಗಳು ಮೊಸಳೆ ರಕ್ಷಿಸಿ ಮತ್ತೆ ದೂರದ ಅರಣ್ಯ ಭಾಗದಲ್ಲಿ ಬಿಡುವಂತೆ ಸೂಚಿಸಲಾಗಿದೆ ಎಂದು ಬೆಳ್ತಂಗಡಿ ವಲಯ ಅರಣ್ಯಧಿಕಾರಿ ತ್ಯಾಗರಾಜ್ ಉದಯವಾಣಿಗೆ ತಿಳಿಸಿದ್ದಾರೆ.