Advertisement
ವಾರಾಣಸಿಯಲ್ಲಿ ಶನಿವಾರ, ಬಿಜೆಪಿ ರಾಷ್ಟ್ರವ್ಯಾಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಕ್ಷದ ಸಂಸ್ಥಾಪಕರಾದ ಶ್ಯಾಮಪ್ರಸಾದ್ ಮುಖರ್ಜಿಯವರ 118ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
Related Articles
Advertisement
ಇದೇ ವೇಳೆ, ”ಬಡತನವನ್ನು ಸದ್ಗುಣಗಳ ಸಂಕೇತ ಎಂದು ಮೊದಲಿನಿಂದಲೂ ಭಾವಿಸುತ್ತಾ ಬಂದಿದ್ದೇವೆ. ಆದರೆ, ಮುಂದೊಂದು ದಿನ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯನ್ನು ನಾವು ಸಾಧಿಸಿದಾಗ ಯಾರಾದರೂ ಯಾವ ಕಾರಣಕ್ಕಾಗಿ ಬಡವರಾಗಿಯೇ ಮುಂದುವರಿಯಬೇಕು?” ಎಂದು ಪ್ರಶ್ನಿಸಿದರು.
ಮಿಂಚಿನ ಓಟ: ”ನಮ್ಮ ರಾಷ್ಟ್ರ ಆರ್ಥಿಕತೆಯಲ್ಲಿ ಹೊಸ ಮಜಲುಗಳನ್ನು ಮುಟ್ಟುವಲ್ಲಿ ಇಂಥ ಅನೇಕ ಘಟನೆಗಳು ಇತಿಹಾಸದಲ್ಲಿ ದಾಖಲಾಗಿವೆ. ಆದರೆ, ಈಗ ನಮ್ಮ ದೇಶ ಹೊಸ ಗುರಿಯತ್ತ ಮಿಂಚಿನ ಓಟ ಆರಂಭಿಸಿದೆ” ಎಂದ ಅವರು, ”ದೇಶದ ಸಿರಿವಂತರು, ಬಡವರು ಈ ರಾಷ್ಟ್ರದ ಎರಡು ಕೈಗಳಿದ್ದಂತೆ. ಇವರಿಬ್ಬರೂ ಶ್ರಮಪಟ್ಟರೆ ದೇಶದ ಆರ್ಥಿಕತೆಯನ್ನು ಬಲಾಡ್ಯಗೊಳಿಸಬಹುದು” ಎಂದರು.
ದೇಶದ ಪ್ರತಿನಿಧಿಗಳೂ ಆಗಬೇಕು: ಸದಸ್ಯತ್ವ ಅಭಿಯಾನದಡಿ ಪಕ್ಷಕ್ಕೆ ಸೇರ್ಪಡೆಗೊಳ್ಳುವವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ”ಬಿಜೆಪಿಯ ತಾಕತ್ತು ಇರುವುದೇ ಆ ಪಕ್ಷದ ಸರಳತೆ ಹಾಗೂ ವಿನಯಶೀಲತೆಯಲ್ಲಿ. ಬಿಜೆಪಿಗೆ ಸೇರ್ಪಡೆಗೊಳ್ಳುವ ವ್ಯಕ್ತಿಗಳು ಈ ಗುಣಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಯಾರೂ ಹೇಳುವುದಿಲ್ಲ. ಆದರೆ, ಅಂಥ ಗುಣಗಳನ್ನು ಅಳವಡಿಸಿಕೊಂಡರೆ ಅವರಿಗೇ ಅದು ಅನುಕೂಲ. ಈ ಹಿಂದೆ, ಅಟಲ್, ಅಡ್ವಾಣಿ, ಜೋಷಿಯವರೂ ಇದೇ ಗುಣ ಅಳವಡಿಸಿಕೊಂಡು ಮುಂದೆ ಬಂದವರು. ಅವರ ಪರಂಪರೆಯನ್ನು ನಾವೆಲ್ಲರೂ ಮುಂದುವರಿಸಿಕೊಂಡು ಹೋಗಬೇಕಿದೆ. ನಾವು ಪಕ್ಷದ ಸದಸ್ಯರಾಗುವುದರ ಜತೆಗೆ, ದೇಶದ ಪ್ರತಿನಿಧಿಯಾಗಿಯೂ ಕೆಲಸ ಮಾಡಬೇಕು. ಬಿಜೆಪಿಯು ‘ಎಲ್ಲರೂ ಒಟ್ಟಾಗಿ ಬನ್ನಿ, ದೇಶ ಕಟ್ಟೋಣ’ ಎಂದು ಕರೆ ನೀಡಿದರೆ, ಇತರ ಪಕ್ಷಗಳು ‘ಎಲ್ಲರೂ ಒಟ್ಟಾಗಿ ಬನ್ನಿ ಸರ್ಕಾರ ರಚಿಸೋಣ’ ಎಂದು ಕರೆ ನೀಡುತ್ತವೆ. ಇದೇ ನಮಗೂ, ಇತರರಿಗೂ ಇರುವ ವ್ಯತ್ಯಾಸ” ಎಂದರು.
ಲಾಲ್ ಬಹದ್ದೂರ್ ಶಾಸ್ತ್ರಿ ನೆನಪುವಾರಾಣಸಿಯ ವಿಮಾನ ನಿಲ್ದಾಣದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಯನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಅಸಾಧ್ಯವಾದದನ್ನು ಸಾಧ್ಯವಾಗಿಸುವ ತಾಕತ್ತು ಜನರಿಗಿದೆ ಎನ್ನುತ್ತಾ ಶಾಸ್ತ್ರಿ ಅವರು ಪ್ರಧಾನಿಯಾಗಿದ್ದಾಗ ನಡೆದಿದ್ದ ಘಟನೆಯನ್ನು ಮೆಲುಕು ಹಾಕಿದರು. ”ದಶಕಗಳ ಹಿಂದೆ, ಭಾರತವು ತನಗೆ ಅಗತ್ಯವಿರುವ ಧಾನ್ಯಗಳನ್ನು ಪರರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿತ್ತು. ಆದರೆ, ಅಂದಿನ ಪ್ರಧಾನಿ ಶಾಸ್ತ್ರಿಯವರು ಜೈ ಜವಾನ್, ಜೈ ಕಿಸಾನ್ ಎಂಬ ಕರೆಯನ್ನು ಈ ದೇಶದ ರೈತರಿಗೆ ನೀಡಿದಾಗ, ದೇಶದ ಎಲ್ಲಾ ರೈತರೂ ಪ್ರಧಾನಿಯವರ ಕರೆಗೆ ಓಗೊಟ್ಟು ಕಷ್ಟಪಟ್ಟು ದುಡಿದು ಉತ್ತಮ ಬೆಳೆ ಬೆಳೆದರಲ್ಲದೆ, ದೇಶದ ಎಲ್ಲಾ ಗೋದಾಮುಗಳನ್ನು ಧಾನ್ಯಗಳಿಂದ ತುಂಬಿಸಿದರು. ಜನರು ಮನಸ್ಸು ಮಾಡಿದರೆ ಎಂಥ ಪವಾಡವನ್ನಾದರೂ ಮಾಡಬಹುದು ಎಂಬುದಕ್ಕೆ ಇದು ಸಾಕ್ಷಿ ಎಂದರು. ಈ ಕಾರ್ಯಕ್ರಮದ ಬಳಿಕ ಮೋದಿ ಅವರು ‘ಆನಂದ್ ಕಾನನ್’ ಎಂಬ ಗಿಡ ನೆಡುವ ಕಾರ್ಯಕ್ರಮದಲ್ಲೂ ಭಾಗಿಯಾದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುತ್ರರಾದ ಅನಿಲ್ ಶಾಸ್ತ್ರಿ, ಸುನಿಲ್ ಶಾಸ್ತ್ರಿ ಹಾಗೂ ಉತ್ತರ ಪ್ರದೇಶದ ಸಂಪುಟದಲ್ಲಿ ಸಚಿವರಾಗಿರುವ ಶಾಸ್ತ್ರಿಯವರ ಸಂಬಂಧಿ ಸಿದ್ದಾರ್ಥ್ ನಾಥ್ ಸಿಂಗ್, ಬಿಜೆಪಿ ಕಾರ್ಯದರ್ಶಿ ಜೆ.ಪಿ. ನಡ್ಡಾ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.