Advertisement

ಟೀಕೆಗೆ ತುತ್ತಾದ ಖಾಸಗಿ ಶಾಲೆ ಚೀನಿ ವರ್ಷಾಚರಣೆ

11:13 AM Aug 10, 2017 | Team Udayavani |

ಬೆಂಗಳೂರು : ಬ್ರಿಟಿಷ್‌ ಕೌನ್ಸಿಲ್‌ನ ಅಂತಾರಾಷ್ಟ್ರೀಯ ಶಾಲಾ ಪ್ರಶಸ್ತಿಗಾಗಿ ಮಕ್ಕಳಿಗೆ ಚೀನಿ ಹೊಸ ವರ್ಷ ಆಚರಣೆಯ ಸ್ಪರ್ಧೆ
ನಡೆಸಲು ಮುಂದಾಗಿರುವ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ (ಉತ್ತರ) ಆಡಳಿತ ಮಂಡಳಿಯ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ. ಕಳೆದ ಕೆಲವು ತಿಂಗಳಿಂದ ಭಾರತ-ಚೀನಾ ಗಡಿ ಪ್ರದೇಶದಲ್ಲಿ ಬಿಗುವಿನ ವಾತವರಣ ಉಂಟಾಗಿದೆ. ಚೀನಿ ಸೈನಿಕರು ಭಾರತದ ಗಡಿಯೊಳಗೆ ಕಾಲಿಡುತ್ತಿದ್ದಾರೆ. ಹಾಗೆಯೇ ದೇಶಾದ್ಯಂತ ಚೀನಿ ವಸ್ತುಗಳ ಬಹಿಷ್ಕಾರದ ಅಭಿಯಾನವೂ ಆರಂಭವಾಗಿದೆ. ಈ ಮಧ್ಯೆ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನ(ಉತ್ತರ) ಆಡಳಿತ ಮಂಡಳಿಯು ಆಗಸ್ಟ್‌ 11ರಂದು ಒಂದನೇ ತರಗತಿಯ ಎ, ಬಿ ಮತ್ತು ಸಿ ವಿಭಾಗದ ಮಕ್ಕಳಿಗೆ ಚೀನಾ ಹೊಸ ವರ್ಷಾಚರಣೆ ಸ್ಪರ್ಧೆ ಏರ್ಪಡಿಸಿ, ಆ.3ರಂದು ಸುತ್ತೋಲೆ ಹೊರಡಿಸಿದೆ.

Advertisement

ಬ್ರಿಟಿಷ್‌ ಕೌನ್ಸಿಲ್‌ನ ಅಂತಾರಾಷ್ಟ್ರೀಯ ಶಾಲಾ ಪ್ರಶಸ್ತಿಯ ಅಂಗವಾಗಿ ಒಂದು ಪ್ರಾಜೆಕ್ಟ್‌ನ ರೀತಿ ಈ ಸ್ಪರ್ಧೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಆಸಕ್ತ ಮಕ್ಕಳು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮಕ್ಕಳಿಗೆ ಬ್ರಿಟಿಷ್‌ ಕೌನ್ಸಿಲ್‌ ಪ್ರಶಸ್ತಿ ನೀಡಲಿದೆ. ಬೇರೆ ಶಾಲೆಗಳ ರೀತಿ ನಮ್ಮ ಶಾಲೆಯಲ್ಲೂ ಸ್ಪರ್ಧೆ ನಡೆಸಲಾಗುತ್ತದೆ ಎಂದು ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನ (ಉತ್ತರ) ಉನ್ನತ ಮೂಲಗಳಿಂದ ತಿಳಿದುಬಂದಿದೆ. ಶಾಲಾಡಳಿತ ಮಂಡಳಿಯ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪೋಷಕರು, ದೇಶದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಚೀನಿ ವರ್ಷಾಚರಣೆಯ ಸ್ಪರ್ಧೆಯ ಅವಶ್ಯಕತೆ ಏನಿತ್ತು? ಮಕ್ಕಳು ಚೀನಿ ಸಂಪ್ರದಾಯದ ಉಡುಗೆ ಧರಿಸಬೇಕು, ಅವರ ಆಹಾರ ಪದ್ಧತಿ ಅನುಸಾರ ತಿಂಡಿ ಮಾಡಿಕೊಂಡು ಬರಬೇಕು, ಅವರ ಸಂಪ್ರದಾಯದ ಅಲಂಕಾರ ವಸ್ತು ತರಬೇಕು ಎನ್ನುವುದು ಸರಿಯಲ್ಲ.

ಚೀನಿ ಸಾಂಪ್ರದಾಯಿಕ ಚಿತ್ರಗಳನ್ನು ಬಿಡಿಸುವುದನ್ನು ಕಡ್ಡಾಯ ಗೊಳಿಸುವುದು ಒಪ್ಪುವಂತದಲ್ಲ ಎಂದು ಅಸಮಾಧಾನ ವ್ಯಕ್ತಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ವರದಿ ತರಿಸಿಕೊಂಡು, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ. ಐಸಿಎಸ್‌ಇ, ಸಿಬಿಎಸ್‌ಇ ಶಾಲೆಗಳ ಮೇಲೆ ರಾಜ್ಯ ಸರ್ಕಾರಕ್ಕೆ ನೇರವಾದ ನಿಯಂತ್ರಣ ಇರುವುದಿಲ್ಲ. ಪೋಷಕರಿಂದ ದೂರು ಬಂದರೆ, ಅದನ್ನು ಜಿಲ್ಲಾಧಿಕಾರಿಗಳ ನೇತೃತ್ವದ ನಿಯಂತ್ರಣಾ ಸಮಿತಿಗೆ ವರ್ಗಾಯಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next