ನವದೆಹಲಿ: ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳಿಗೆ ನೇಮಕ ಮಾಡುವ ವಿಚಾರದಲ್ಲಿ ಕೇಂದ್ರ ಹಾಗೂ ಸುಪ್ರೀಂಕೋರ್ಟ್ ನಡುವಿನ ಭಿನ್ನಾಭಿಪ್ರಾಯ ಇನ್ನೂ ತಣ್ಣಗಾಗಿಲ್ಲ. “ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಸುಪ್ರೀಂಕೋರ್ಟ್ ಸಂವಿಧಾನವನ್ನು ಹೈಜಾಕ್ ಮಾಡಿದೆ’ ಎಂದು ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ಎಸ್.ಸೋಧಿ ಸಂದರ್ಶನವೊಂದರಲ್ಲಿ ಹೇಳಿದ್ದ ಅಂಶವನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ. “ಇದು ಜಡ್ಜ್ ಒಬ್ಬರ ಅಭಿಪ್ರಾಯ. ಹೆಚ್ಚಿನವರೂ ಕೂಡ ಇದೇ ರೀತಿಯ ಅಭಿಪ್ರಾಯ ಹೊಂದಿರಬಹುದು’ ಎಂದು ಬರೆದುಕೊಂಡಿದ್ದಾರೆ.
“ದೇಶದ ಜನರು ಹೊಂದಿರುವ ಸ್ವಯಂ ಆಡಳಿತದಲ್ಲಿಯೇ ಪ್ರಜಾಪ್ರಭುತ್ವದ ವಿಜಯ ಇದೆ. ಅದಕ್ಕಾಗಿ ಅವರು ತಮ್ಮ ಪ್ರತಿನಿಧಿಗಳನ್ನು ಅವಲಂಬಿಸಿರುತ್ತಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಹಳೆಯ ಸಂದರ್ಶನವೊಂದರಲ್ಲಿ ನಿವೃತ್ತ ನ್ಯಾಯಮೂರ್ತಿ ಆರ್.ಎಸ್.ಸೋಧಿ “ಕಾನೂನುಗಳನ್ನು ಬದಲು ಮಾಡುವ ಅಧಿಕಾರ ಸಂಸತ್‌ಗೆ ಸೇರುತ್ತದೆ. ಸುಪ್ರೀಂಕೋರ್ಟ್‌ಗೆ ಅಂಥ ಅಧಿಕಾರವೇ ಇಲ್ಲ. ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರ ಕೂಡ ಸುಪ್ರೀಂಕೋರ್ಟ್‌ಗೆ ಇಲ್ಲ. ಅದು ಸಂಸತ್‌ನ ಪರಮಾಧಿಕಾರ. ಸುಪ್ರೀಂಕೋರ್ಟ್ ಸಂವಿಧಾನವನ್ನು ಹೈಜಾಕ್ ಮಾಡಿದೆ. ಈ ಮೂಲಕ ಅದು ನ್ಯಾಯಮೂರ್ತಿಗಳನ್ನು ನೇಮಕ ಮಾಡುತ್ತಿದೆ. ಸದ್ಯ ಸರ್ಕಾರದ ಪಾತ್ರ ಏನೂ ಇಲ್ಲ’ ಎಂದು ಹೇಳಿದ್ದರು’ ಎಂದು ಹೇಳಿದ್ದಾರೆ.
ಇತ್ತೀಚೆಗೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ನ್ಯಾಯಾಂಗದ ಬಗ್ಗೆ ಆಕ್ಷೇಪ ಮಾಡಿದ್ದರು. ಕಾನೂನು ಸಚಿವರು ಕೊಲಿಜಿಯಂ ವ್ಯವಸ್ಥೆ ಹಳೆಯ ಪದ್ಧತಿ ಎಂದು ಹೇಳಿದ್ದರು. ಈ ಅಂಶ ಟೀಕೆಗೆ ಕೂಡ ಗುರಿಯಾಗಿತ್ತು.
ಶೀಘ್ರವೇ ತೀರ್ಮಾನ
ನ್ಯಾಯಮೂರ್ತಿಗಳ ನೇಮಕದ ಮೊದಲು ಅವರ ಹಿನ್ನೆಲೆಯನ್ನು ಶೋಧಿಸುವ ಬಗ್ಗೆ ಗುಪ್ತಚರ ವರದಿಗಳನ್ನು ಬಹಿರಂಗ ಮಾಡುವ ವಿಚಾರವೂ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ನಿಟ್ಟಿನಲ್ಲಿ ನ್ಯಾಯಮೂರ್ತಿಗಳು ವ್ಯಕ್ತಪಡಿಸುವ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಪರಿಶೀಲಿಸಲಿದೆ. ಈ ಬಗ್ಗೆ ಮುಂದಿನ ವಾರವೇ ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ನ್ಯಾಯಮೂರ್ತಿ ಹುದ್ದೆಗೆ ಪರಿಶೀಲನೆಯಲ್ಲಿದ್ದ ಸೋಮಶೇಖರ್ ಸುಂದರೇಶನ್, ಆರ್.ಜಾನ್ ಸತ್ಯನ್ ಮತ್ತು ಸೌರಭ್ ಕೃಪಾಲ್ ಅವರ ಬಗ್ಗೆ ಗುಪ್ತಚರ ಸಂಸ್ಥೆಗಳು ನಡೆಸಿದ್ದ ತನಿಖೆಯ ವರದಿಯನ್ನು ಬಹಿರಂಗಗೊಳಿಸಲಾಗಿತ್ತು.