ತಿರುಪತಿ/ಹೈದರಾಬಾದ್: ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿ ತಿರುಮಲ ದೇಗುಲದ ಸಂಪತ್ತನ್ನು ಸರಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ನಿರ್ಧಾರಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಒತ್ತಡಕ್ಕೆ ಮಣಿದಿರುವ ಸರಕಾರ ಕೊನೆಗೆ ಈ ನಿರ್ಧಾರದಿಂದ ಹಿಂದೆ ಸರಿದಿದೆ.
ಶನಿವಾರ ಟಿಟಿಡಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಮಾಹಿತಿ ಯಲ್ಲಿ, ಬ್ಯಾಂಕ್‌ಗಳಲ್ಲಿನ ಠೇವಣಿ ಮೇಲಿನ ಬಡ್ಡಿ ದರ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕಡಿಮೆಯಾಗುತ್ತಾ ಬರುತ್ತಿದೆ. ಹೀಗಾಗಿ, ದೇಗುಲದ ಸಂಪತ್ತನ್ನು ಸರಕಾರಿ ಸ್ವಾಮ್ಯದ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೇರಿದಂತೆ ಹಲವು ಆಯ್ಕೆಗಳ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಪ್ರಸ್ತಾಪಿಸಲಾಗಿತ್ತು.
ಬಿಜೆಪಿ ಮತ್ತು ಇತರ ಹಿಂದೂ ಸಂಘಟನೆಗಳು ತಿರುಮಲ ದೇಗುಲದ ಆಡಳಿತ ಮಂಡಳಿಯ ನಿರ್ಧಾರಕ್ಕೆ ಆಕ್ಷೇಪ ಮಾಡಿವೆ. ಭಕ್ತರು ನೀಡಿದ 12 ಸಾವಿರ ಕೋಟಿ ರೂ.ಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಲಾಗಿದೆ. ಇದೇ ವೇಳೆ, 5 ಸಾವಿರ ಕೋಟಿ ರೂ.ಗಳ ಠೇವಣಿ ಅವಧಿ ಶೀಘ್ರವೇ ಮುಕ್ತಾಯವಾಗಲಿದೆ. ಅದನ್ನು ಬೇರೆಡೆ ಹೂಡಿಕೆ ಮಾಡಲು ಚಿಂತನೆ ನಡೆದಿದೆ ಎಂದು ಬಿಜೆಪಿ ದೂರಿದೆ.
2019-20ನೇ ಸಾಲಿನಲ್ಲಿ ಟಿಟಿಡಿಗೆ 857 ಕೋಟಿ ರೂ. ಮೊತ್ತ ಬಡ್ಡಿ ರೂಪದಲ್ಲಿಯೇ ಬಂದಿದೆ. 2020-21ನೇ ಸಾಲಿನಲ್ಲಿ ಅದರ ಪ್ರಮಾಣ 706 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. ಆ.28ರಂದು ನಡೆದಿದ್ದ ಟಿಟಿಡಿ ಟ್ರಸ್ಟಿಗಳ ಸಭೆಯಲ್ಲಿ ಬ್ಯಾಂಕ್‌ಗಳಲ್ಲಿ ಠೇವಣಿ ಮೇಲಿನ ಬಡ್ಡಿ ಇಳಿಕೆಯಾಗುತ್ತಿರುವ ಕಾರಣ ಸರಕಾರಿ ಸೆಕ್ಯುರಿಟಿಗಳ ಮೇಲೆ ಹೂಡಿಕೆ ಮಾಡಲು ಮಂಡಳಿ ಅಧ್ಯಕ್ಷ ವೈ.ವಿ.ಸುಬ್ಟಾ ರೆಡ್ಡಿಯವರಿಗೆ ಅಧಿಕಾರ ನೀಡಲಾಗಿತ್ತು.
ಸಾಲ ತೀರಿಸಲು ದೇವರ ಹಣ: ಆಂಧ್ರಪ್ರದೇಶ ಸರಕಾರದ ಮೇಲೆ 3 ಲಕ್ಷ ಕೋಟಿ ರೂ. ಸಾಲವಿದೆ. ಅದನ್ನು ತೀರಿಸಲು ಟಿಟಿಡಿಯ ಸಂಪತ್ತು ಬಳಸಲು ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ನೇತೃತ್ವದ ಸರಕಾರ ಯತ್ನಿಸುತ್ತಿದೆ ಎಂದು ಆಂಧ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ ರೆಡ್ಡಿ ಆರೋಪಿಸಿದ್ದಾರೆ.