ಬೆಂಗಳೂರು : ಪೇಜಾವರ ಶ್ರೀಗಳು ದಲಿತರ ಕೇರಿಗೆ ಹೋಗುತ್ತಿದ್ದರು, ಅಲ್ಲಿ ಅವರು ಕೋಳಿ ಮಾಂಸ ಕೊಟ್ಟಿದ್ದರೆ ತಿನ್ನುತ್ತಿದ್ದರೇ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ವ್ಯಾಪಕ ಆಕ್ರೋಶದ ಬಳಿಕ ಸೋಮವಾರ ಬಹಿರಂಗ ಕ್ಷಮೆಯಾಚಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಆ ರೀತಿ ಹೇಳಿಕೆ ನೀಡಬಾರದಿತ್ತು. ನನ್ನ ಹೇಳಿಕೆಯನ್ನು ನನ್ನ ಹೆಂಡತಿಯೇ ವಿರೋಧಿಸಿದ್ದಾಳೆ. ಈ ಕುರಿತು ಕ್ಷಮೆ ಯಾಚಿಸುವುದಾಗಿ ಹೇಳಿದ್ದಾರೆ.
‘ಕ್ಷಮೆ ಇರಲಿ, ಎಲ್ಲಾ ಮಾತುಗಳು ವೇದಿಕೆಗೆ ಅಲ್ಲ ಅನ್ನುವುದು ನನಗೆ ಗೊತ್ತಿದೆ, ಪ್ರಶಸ್ತಿ ಪುರಸ್ಕಾರ ಸಭೆಯಲ್ಲಿ, ನುಡಿದರೆ ಮುತ್ತಿನ ಹಾರದಂತೆ ಇರಬೇಕು ಎನ್ನುವಂತೆ ಇರಬೇಕಿತ್ತು. ನಾನು ಹಾಗೇ ಅಲಂಕರಿಸಬೇಕಿತ್ತು, ಅಸ್ಪೃಶ್ಯತೆ ನಮ್ಮ ದೇಶಕ್ಕೆ ಅಂಟಿದ ಶಾಪ. ಇದು ಜಿಡ್ಡು ಕೃಷ್ಣಮೂರ್ತಿಗಳ ಮಾತು, ನನ್ನ ಮಾತಲ್ಲ. ಅಸ್ಪೃಶ್ಯತೆಯ ಅನಿಷ್ಟವನ್ನು ತೊಡೆದು ಹಾಕೋದಕ್ಕೆ ಪೇಜಾವರ ಶ್ರೀಗಳು ಸೇರಿದಂತೆ ಎಲ್ಲ ಗುರು-ಹಿರಿಯರು ಪ್ರಯತ್ನ, ಸಂಧಾನಗಳನ್ನು ಮಾಡುತ್ತಲೇ ಇದ್ದಾರೆ. ಆ ಪ್ರಯತ್ನ, ಸಂಧಾನಗಳ ಬಗ್ಗೆ ನನಗೆ ಅಪಾರವಾದ ಗೌರವ ಇದೆ’ ಎಂದಿದ್ದಾರೆ.
ನವೆಂಬರ್ 12 ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಅವರು, ಪೇಜಾವರ ಶ್ರೀಗಳಾಗಿದ್ದ ಪದ್ಮವಿಭೂಷಣ ವಿಶ್ವೇಷ ತೀರ್ಥರನ್ನು ಟೀಕಿಸಿದ್ದರು. ಮಾತ್ರವಲ್ಲದೆ ರಾಜಕಾರಣಿಗಳ ಗ್ರಾಮ ವಾಸ್ತವ್ಯವನ್ನೂ ಟೀಕಿಸಿದ್ದರು. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಮಾಡಿದರು, ಈಗ ಸಿಟಿಯಲ್ಲಿರುವ ಅಶೋಕ್, ಅಶ್ವಥ್ ನಾರಾಯಣ್ ಕೂಡ ಮಾಡುತ್ತಿದ್ದಾರೆ ಎಂದಿದ್ದರು.