ಬೆಂಗಳೂರು: ಕನ್ನಡ ಪುಸ್ತಕ ಖರೀದಿಗೆ ಅನುಸರಿಸಲಾಗುತ್ತಿರುವ ಮಾನದಂಡಗಳನ್ನೇ ಇನ್ನು ಮುಂದೆ ಆಂಗ್ಲ ಭಾಷಾ ಪುಸ್ತಕಗಳ ಖರೀದಿಗೂ ಅನುಸರಿಸಬೇಕೆಂದು ಗ್ರಂಥಾಲಯ ಇಲಾಖೆಯ ನಿರ್ದೇಶಕರಿಗೆ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಇಲಾಖೆ ಸಚಿವ ಎಸ್.ಸುರೇಶ್ ಕುಮಾರ್ ಸೂಚಿಸಿದ್ದಾರೆ. ಡಿ.26ರಂದು ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದ ಸಭೆ ನಡೆದಿದ್ದು, ಸಭೆಯಲ್ಲಿ ಚರ್ಚಿಸುವ ವಿಷಯಗಳಲ್ಲಿ ಕೆಲವೊಂದನ್ನು ಅತಿ ತುರ್ತಾಗಿ ನಿರ್ವಹಿಸಲು ನಿರ್ದೇಶಿಸಿದ್ದಾರೆ.
2019-20ನೇ ಸಾಲಿನ ಆಯವ್ಯಯ ಅನುಮೋದನೆ ಕೂಡಲೇ ನೀಡಬೇಕು. ವಾಸ್ತವ ಅನುದಾನದ ಲಭ್ಯತೆಗೆ ಅನುಗುಣವಾಗಿ ಅಯವ್ಯಯವನ್ನು ಅನುಮೋದಿಸಬೇಕು. 2014ನೇ ಸಾಲಿನ ಪುಸ್ತಕ ಖರೀದಿ ಬಾಕಿ ಅನುದಾನವನ್ನು ಹಾಗೂ 2015, 2016ಕ್ಕೆ ಸಂಬಂಧಿಸಿದ ಪುಸ್ತಕದ ಆಯ್ಕೆಗೆ ಅನುಗುಣವಾದ ಸರಾಸರಿ ಅನುದಾನದ ಮೊತ್ತವನ್ನು ಲಭ್ಯವಿರುವ ಎಸ್‌ಎಫ್ಸಿ ಅನುದಾನದಲ್ಲಿ ಮೀಸಲಿಟ್ಟುಕೊಳ್ಳಬೇಕು.
ಉಳಿದ ಹಣದಲ್ಲಿ ಡಿಜಿಟಲೈಸೇಷನ್ ಸೇರಿದಂತೆ ಬಾಕಿ ಪ್ರಕ್ರಿಯೆಗಳನ್ನು ನಡೆಸಬೇಕು. 2014ರ ಬಾಕಿ ಅನುದಾನವನ್ನು ಸಂಬಂಧಿತರಿಗೆ ಕೂಡಲೇ ಬಿಡಗಡೆ ಮಾಡಬೇಕು. 2015-16ರ ಪುಸ್ತಕ ಆಯ್ಕೆ ಪಟ್ಟಿಯನ್ನು ಇಷ್ಟರಲ್ಲಿಯೇ ಅನುಮೋದಿತಗೊಳಿಸಿರುವ ಪುಸ್ತಕ ಆಯ್ಕೆ ಸಮಿತಿಯ ಪರಿಶೀಲನೆಗೆ ಒದಗಿಸಬೇಕು ಎಂದು ಸಚಿವರು ನಿರ್ದೇಶಿಸಿದ್ದಾರೆ.
ಇ-ಬುಕ್ ಖರೀದಿ ಸೇರಿ ಡಿಜಿಟಲೈಸೇಷನ್ ಪ್ರಕ್ರಿಯೆಗೆ ಮಾನದಂಡಗಳನ್ನು ರೂಪಿಸುವಲ್ಲಿ ಇನ್ನು ಮುಂದೆ ರಚಿಸಲಾಗುವ ಪುಸ್ತಕ ಆಯ್ಕೆ ಸಮಿತಿಯಲ್ಲಿ ಕಡ್ಡಾಯವಾಗಿ ಮಾಹಿತಿ ತಂತ್ರಜ್ಞಾನದ ಜ್ಞಾನವುಳ್ಳ ಸದಸ್ಯರೊಬ್ಬರನ್ನು ನೇಮಕಕ್ಕೆ ಪ್ರಸ್ತಾಪಿಸಬೇಕು. ಒಂದು ಲಕ್ಷ ರೂ.ಗಳಿಗೂ ಮೀರಿ ಪ್ರಕಾಶನ ಪುಸ್ತಕಗಳನ್ನು ಖರೀದಿಸಬೇಕೆಂದು ಪ್ರಕಾಶಕರು ಅಥವಾ ಲೇಖಕರ ಸಮುದಾಯದ ಬೇಡಿಕೆಯಾಗಿದೆ.
ಹೀಗಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದ ಪ್ರಕರಣ-4(ಜಿ) ಅಡಿಯಲ್ಲಿ ವಿನಾಯ್ತಿ ಕುರಿತಂತೆ ಆರ್ಥಿಕ ಇಲಾಖೆಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಲು ಕಡತ ಮಂಡಿಸಬೇಕು. ಮುಂದಿನ ಆಯವ್ಯಯ ಪೂರ್ವದಲ್ಲಿ ಬಿಬಿಎಂಪಿ ಸೇರಿದಂತೆ ನಗರ ಪಾಲಿಕೆಗಳಿಂದ ಗ್ರಂಥಾಲಯ ಇಲಾಖೆಗೆ ಬರಬೇಕಾದ ಗ್ರಂಥಾಲಯ ಕರ(ಸೆಸ್) ಬಾಕಿಯನ್ನು ಆಯಾ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ನೀಡುವ ಅನುದಾನದ ಮೂಲದಲ್ಲೇ ಕಡಿತಗೊಳಿಸಿ, ಗ್ರಂಥಾಲಯ ಇಲಾಖೆಗೆ ಪಡೆಯುವ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಪ್ರಕಾಶಕರು ಇ-ಮಾಧ್ಯಮದಲ್ಲಿ ಪುಸ್ತಕ ಪ್ರಕಟಣೆಗೆ ಹೊಂದಿಕೊಳ್ಳುವ ಅನಿವಾರ್ಯತೆ ಇದೆ. ಇದಕ್ಕಾಗಿ ಇಲಾಖೆತಯೂ ಸಜ್ಜುಗೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಇಲಾಖೆಗೆ ನಿಗದಿಪಡಿಸುವ ಅನುದಾನದಲ್ಲಿ ಡಿಜಿಟಲೈಸೇಷನ್‌ಗೆ ಪ್ರಾಮುಖ್ಯತೆ ಕೊಟ್ಟಾಗ ಮಾತ್ರ ಕನ್ನಡ ಪುಸ್ತಕ ಜಾಗತಿಕರಣ ಸವಾಲವನ್ನು ತೆರೆದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. 25 ವರ್ಷಗಳ ಹಿಂದೆ ಪ್ರಕಟಗೊಂಡು, ಖರೀದಿಯಾದ ಪುಸ್ತಕಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಎಂದು ಸಚಿವರು ನಿರ್ದೇಶಿಸಿದ್ದಾರೆ.
ಶಾಲಾ ಪಠ್ಯದಲ್ಲಿ ಟಿಪ್ಪು ವಿಷಯ: ವರದಿ ಸಲ್ಲಿಕೆ
ಬೆಂಗಳೂರು: ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ವಿಷಯ ಕುರಿತಂತೆ ತಜ್ಞರ ಸಮಿತಿ ವರದಿ ನೀಡಿದ್ದು, ಪರಿಶೀಲಿಸಲಾಗುವುದು ಎಂದು ಪ್ರಾಥಮಿಕ ಮತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು. ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸರ್ಕಾರಿ ಮುದ್ರಣಾಲಯದಿಂದ ಹೊರತಂದಿರುವ 2020ರ ಕ್ಯಾಲೆಂಡರ್‌ಅನ್ನು ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಜ್ಞರ ಸಮಿತಿ ಗುರುವಾರ ಸಂಜೆ ವರದಿ ನೀಡಿದ್ದು, ನಾನಿನ್ನೂ ಪರಿಶೀಲನೆ ನಡೆಸಿಲ್ಲ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.