ಶಹಾಬಾದ: ಜೈಲಿನಲ್ಲಿರಬೇಕಾದ ಕ್ರಿಮಿನಲ್ ಗಳು ರಾಜಕಾರಣಕ್ಕೆ ಬಂದು ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ಜನಾಂದೋಲನ ಮಹಾಮೈತ್ರಿ ನಾಯಕ ಎಸ್.ಆರ್.ಹಿರೇಮಠ ಆರೋಪಿಸಿದರು.
ನಗರದಲ್ಲಿ ಏರ್ಪಡಿಸಲಾಗಿದ್ದ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಕಲಬುರಗಿ ಗ್ರಾಮೀಣ ಮೀಸಲು ಮತಕ್ಷೇತ್ರದ ಅಭ್ಯರ್ಥಿ ಗಣಪತರಾವ್ ಕೆ.ಮಾನೆ ಅವರ ಚುನಾವಣಾ ಪ್ರಚಾರದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಸ್ವಜನ ಪಕ್ಷಪಾತ, ಅಕ್ರಮ ಸಂಪತ್ತು ಗಳಿಕೆ ಹಾಗೂ ಹಗಲು ದರೋಡೆ ಮಾಡಿ ಗದ್ದುಗೆ ಏರಿರುವ ಇಂದಿನ ಬಹುತೇಕ ರಾಜಕಾರಣಿಗಳು ಸಾರ್ವಜನಿಕ ಜೀವನಕ್ಕೆ ಯೋಗ್ಯರಲ್ಲ ಎಂದು ಹರಿಹಾಯ್ದರು.
ಸಾರ್ವಜನಿಕರು ನಿರ್ಭಯವಾಗಿ ಪ್ರಶ್ನೆ ಮಾಡುವ ಧೈರ್ಯ ಬೆಳೆಸಿಕೊಳ್ಳುವ ಮೂಲಕ ಅನೈತಿಕ ರಾಜಕಾರಣ ಸೋಲಿಸಿ, ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ರಾಜಿರಹಿತರವಾಗಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಎಸ್‌ಯುಸಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಎಚ್.ವಿ.ದಿವಾಕರ ಮಾತನಾಡಿ, ದೇಶದಲ್ಲಿ ಕೃಷಿ ಸಂಕಟ, ನಿರುದ್ಯೋಗ, ಬೆಳೆಯುತ್ತಿರುವ ಭ್ರಷ್ಟಾಚಾರ, ಖಾಸಗೀಕರಣವಾಗುತ್ತಿರುವ ಶಿಕ್ಷಣ, ಆರೋಗ್ಯ ಹಾಗೂ ಮಹಿಳೆಯರ ಬಗ್ಗೆ ಯಾವ ಕಾಳಜಿಯೂ ಇಲ್ಲದೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಇಷ್ಟು ಕಾಲ ದುರಾಡಳಿತ ನಡೆಸಿವೆ. ಚುನಾವಣೆ ಪ್ರಕ್ರಿಯೆಯನ್ನೂ ಭ್ರಷ್ಟಗೊಳಿಸಿವೆ. ಇವೆಲ್ಲದರ ವಿರುದ್ಧ ಜನಾಂದೋಲನ ಬೆಳೆಸುವ ಅಗತ್ಯವಿದೆ ಎಂದರು.
ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಟಗಿ, ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಇಬ್ರಾಹಿಂಪುರ, ಅಭ್ಯರ್ಥಿ ಗಣಪತರಾವ್ ಮಾನೆ ಮಾತನಾಡಿದರು. ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ ಅಹ್ಮದ್ ಬಾರಿ, ಕಾಮ್ರೇಡ್ ವ್ಹಿ. ನಾಗಮ್ಮಾಳ, ರಾಘವೇಂದ್ರ ಎಂ.ಜಿ., ಗುಂಡಮ್ಮ ಮಡಿವಾಳ, ಜಗನ್ನಾಥ ಎಸ್.ಎಚ್., ನಿಂಗಣ್ಣ ಜಂಬಗಿ, ಸಿದ್ದು ಚೌಧರಿ, ಭರತಕುಮಾರ ವಿಜಯಪುರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.