Advertisement

ನಕಲಿ ಕಾರ್ಮಿಕರ ವಿರುದ್ಧ ಕ್ರಿಮಿನಲ್‌ ಕೇಸ್‌

11:54 AM Jul 24, 2018 | Team Udayavani |

ಬೆಂಗಳೂರು: ಗುತ್ತಿಗೆ ಪೌರಕಾರ್ಮಿಕರ ಪಟ್ಟಿಗೆ ಅಕ್ರಮವಾಗಿ ಸೇರ್ಪಡೆಗೊಂಡವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಮೇಯರ್‌ ಆರ್‌.ಸಂಪತ್‌ರಾಜ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ವೇತನ ಪಾವತಿ ವಿಚಾರ ಸಂಬಂಧ ಸೋಮವಾರ ರಾಜರಾಜೇಶ್ವರಿನಗರ ವಲಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಹಿಂದೆ ಪಾಲಿಕೆಯಲ್ಲಿ ಆಟೋ ಚಾಲಕರಾಗಿದ್ದ ಹೆಚ್ಚಿನವರು ಸದ್ಯ ಗುತ್ತಿಗೆ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆಂಬ ದೂರುಗಳಿವೆ. ಹೀಗಾಗಿ ಎರಡೂ ಕಡೆಗಳಲ್ಲಿ ಕೆಲಸ ಮಾಡುವವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಿ ಮೊಕದ್ದಮೆ ದಾಖಲಿಸುವಂತೆ ಆದೇಶಿಸಿದ್ದಾರೆ.

ಮೇಯರ್‌ ಪ್ರಶ್ನೆಗೆ ಉತ್ತರಿಸಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಬಾಲಾಜಿ, ವಲಯದ 14 ವಾರ್ಡ್‌ಗಳಲ್ಲಿ ಒಟ್ಟು 1,698 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಒಂದು ವರ್ಷದೊಳಗಿನ ಸೇವಾವಧಿ ಹೊಂದಿರುವ 297 ಪೌರಕಾರ್ಮಿಕರಿದ್ದಾರೆ. ಆ ಪೈಕಿ 198 ಪೌರಕಾರ್ಮಿಕರಿಗೆ ಮಾತ್ರ ಜೂನ್‌ ತಿಂಗಳ ವೇತನ ಪಾವತಿಯಾಗಬೇಕಿದೆ ಎಂದು ಮಾಹಿತಿ ನೀಡಿದರು.

ಇದರಿಂದ ಕೆರಳಿದ ಮೇಯರ್‌, ಈಗಾಗಲೇ ಭೇಟಿ ನೀಡಿದ ಎಲ್ಲ 6 ವಲಯಗಳಲ್ಲಿ ಪೌರಕಾರ್ಮಿಕರಿಗೆ ಸಂಪೂರ್ಣ ವೇತನ ಪಾವತಿಯಾಗಿದೆ. ಆದರೆ, ಆರ್‌.ಆರ್‌.ನಗರ ವಲಯದಲ್ಲಿ ಮಾತ್ರ ಯಾಕೆ ಇನ್ನೂ 198 ಪೌರಕಾರ್ಮಿಕರಿಗೆ ವೇತನ ಬಾಕಿ ಉಳಿಸಿಕೊಂಡಿದ್ದೀರಾ? ನಾವೇನು ಕಾಟಾಚಾರಕ್ಕೆ ಸಭೆ ನಡೆಸುತ್ತಿದ್ದೇವೆಯೇ? ಕೌನ್ಸಿಲ್‌ ಆದೇಶಕ್ಕೆ ಕಿಮ್ಮತ್ತಿಲ್ಲವೇ? ಎಂದು ಕಿಡಿಕಾರಿದರು.

198 ಪೌರಕಾರ್ಮಿಕರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಲಯದ ಜಂಟಿ ಆಯುಕ್ತರಿಗೆ ಶೋಕಾಸ್‌ ನೋಟೀಸ್‌ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಮೂರು ದಿನಗಳಲ್ಲಿ ಎಲ್ಲ ವಾರ್ಡ್‌ಗಳ ಪೌರಕಾರ್ಮಿಕರ ವೇತನ ಪಾವತಿಯಾಗಿರುವ ಮಾಹಿತಿಯನ್ನು ಪಾಲಿಕೆಯ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬೇಕು ಎಂದು ಸೂಚನೆ ನೀಡಿದರು. 

Advertisement

ಅಕ್ರಮ ತನಿಖೆಗೆ ಆಗ್ರಹ: ಜೆ.ಪಿ.ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿರುವ ಆಟೋಟಿಪ್ಪರ್‌ಗಳ ಮಾಹಿತಿ ಕೇಳಿದಾಗ 21 ಆಟೋಗಳಿವೆ ಎಂದು ಆರೋಗ್ಯಾಧಿಕಾರಿಗಳು ಹೇಳಿದರು. ಗಂಟೆಯೊಳಗೆ ಎಲ್ಲ ಆಟೋಗಳು ಖುದ್ದು ಹಾಜರಾಗಬೇಕೆಂದಾಗ 13 ಆಟೋಗಳು ಮಾತ್ರ ಸ್ಥಳದಲ್ಲಿದ್ದವು. ಉಳಿದ ಆಟೋಗಳ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ ಎಂದು ಶಾಸಕ ಮುನಿರತ್ನ ದೂರಿದರು.

ಪಾಲಿಕೆಯಿಂದ ಆಟೋಟಿಪ್ಪರ್‌ಗಳನ್ನು ಬಳಸಬೇಕೆಂಬ ನಿಯಮವಿದ್ದರೂ, ಯಾವುದೇ ದಾಖಲಾತಿಗಳಿಲ್ಲದ ಗೂಡ್ಸ್‌ ಆಟೋಗಳನ್ನು ಬಳಸುತ್ತಿದ್ದಾರೆ. ಎರಡೂವರೆಗೆ ವರ್ಷದಿಂದ ದಾಖಲೆ ಇಲ್ಲದ 8 ಆಟೋಗಳಿಗೆ ಪ್ರತಿ ತಿಂಗಳು ಪಾಲಿಕೆಯಿಂದ 56 ಸಾವಿರ ರೂ. ಬಿಲ್‌ ಪಡೆಯುತ್ತಿದ್ದು,

ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಆಟೋಟಿಪ್ಪರ್‌ಗಳನ್ನು ಪರಿಶೀಲಿಸಿ ಸಂಪೂರ್ಣ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next