ಅದು ನ್ಯೂ ಇಯರ್ ಪಾರ್ಟಿ ನಡೆಯುತ್ತಿರುವ ರೆಸಾರ್ಟ್. ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಎಲ್ಲರೂ ಅಲ್ಲಿ ಸೇರಿದ್ದಾರೆ. ಇದೇ ಪಾರ್ಟಿಯಲ್ಲಿ ತಾವೂ ಹೊಸ ವರ್ಷವನ್ನು ಸಂಭ್ರಮಿಸಲು ಆದಿತ್ಯ (ಅನೂಪ್ ಸಿಂಗ್ ಠಾಕೂರ್) ಮತ್ತು ರಶ್ಮಿ (ಸಾಯಿ ಧನ್ಸಿಕಾ) ಅಲ್ಲಿಗೆ ಬರುತ್ತಾರೆ. ರಶ್ಮಿ ಮುಂದೆ ಆದಿತ್ಯ ತನ್ನ ಪ್ರೇಮ ನಿವೇದನೆ ಮಾಡುತ್ತಾ ಆಕೆಯ ಕೈಗೆ ರಿಂಗ್ ತೊಡಿಸುತ್ತಾನೆ. ಇದೇ ವೇಳೆ ಆದಿತ್ಯ, ಮರೆತು ಬಿಟ್ಟು ಬಂದಿರುವ ತನ್ನ ಮೊಬೈಲ್ ಫೋನ್ ತರಲು ಕಾರ್ ಬಳಿಕೆ ಹೋಗಿ ಬರುವಷ್ಟರೊಳಗೆ, ರೆಸಾರ್ಟ್ ರೂಮ್‌ವೊಂದರಲ್ಲಿ ರಕ್ತದ ಕಲೆ ಕಾಣುತ್ತವೆ.
ಅದೇ ವೇಳೆ ಆದಿತ್ಯನ ಜೊತೆಗೆ ಬಂದಿದ್ದ ರಶ್ಮಿ ಕೂಡ ಅಲ್ಲಿಂದ ಕಾಣೆಯಾಗಿರುತ್ತಾಳೆ! ಹಾಗಾದ್ರೆ ರೆಸಾರ್ಟ್ ರೂಮ್‌ನಲ್ಲಿ ಏನಾಯ್ತು? ಆದಿತ್ಯನ ಜೊತೆಗೆ ಬಂದ ರಶ್ಮಿ ಎಲ್ಲಿ ಹೋದಳು? ಏನಾದಳು..? ಅನ್ನೋದನ್ನ ತಿಳಿದುಕೊಳ್ಳಬೇಕಾದರೆ, ನೀವು “ಉದ್ಘರ್ಷ’ ಚಿತ್ರ ನೋಡಬೇಕು. ಸುಮಾರು ಎರಡು ವರ್ಷಗಳಿಂದ ಚಿತ್ರದ ತೆರೆಮರೆಯ ಕಾರ್ಯದಲ್ಲಿ ನಿರತವಾಗಿದ್ದ ಕನ್ನಡ ಚಿತ್ರರಂಗದ ಸಸ್ಪೆನ್ಸ್ ಮಾಸ್ಟರ್ ಸುನೀಲ್ ಕುಮಾರ್ ದೇಸಾಯಿ ಅಂತೂ ಈ ವಾರ ತಮ್ಮ ಬಹುನಿರೀಕ್ಷಿತ “ಉದ್ಘರ್ಷ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ.
ಇನ್ನು ಚಿತ್ರದ ಹೆಸರೇ ಹೇಳುವಂತೆ “ಉದ್ಘರ್ಷ’ ಔಟ್ ಆ್ಯಂಡ್ ಔಟ್ ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಚಿತ್ರ. ಒಂದು ಕೊಲೆ, ಒಂದು ಅಪಹರಣ, ಅದರ ಹಿಂದಿನ ಜಾಡು ಹಿಡಿದು ಹೊರಡುವ ಪೊಲೀಸರು ಮತ್ತು ನಾಯಕ ನಟ ಇವಿಷ್ಟರ ನಡುವೆ ನಡೆಯುವ ಹಾವು-ಏಣಿ ಆಟವೇ ಚಿತ್ರದ ಕಥಾಹಂದರ. ಬಹುತೇಕ ಚಿತ್ರಗಳಲ್ಲಿರುವಂತೆ ಒಂದು ಕೊಲೆ, ಅದರ ಜಾಡು ಹುಡುಕುವ ಸಾಮಾನ್ಯ ಕಥೆ ಈ ಚಿತ್ರದಲ್ಲೂ ಇದೆ. ಆದರೆ ಅದು ಸಾಗುವ ರೀತಿ ನೋಡುಗರಿಗೆ ಥ್ರಿಲ್ಲಿಂಗ್ ಆಗಿದೆ. “ಉದ್ಘರ್ಷ’ ಚಿತ್ರದ ಜೀವಾಳ ಎಂದರೆ, ಚಿತ್ರದ ನಿರೂಪಣೆ ಮತ್ತು ಅದನ್ನು ನಿರ್ದೇಶಕ ದೇಸಾಯಿ ಕಟ್ಟಿಕೊಟ್ಟ ರೀತಿ.
ಆರಂಭದಿಂದ ಅಂತ್ಯದವರೆಗೂ ಗುಟ್ಟನ್ನು ರಟ್ಟು ಮಾಡದೆ, ಕುತೂಹಲವನ್ನು ಕಾಯ್ದುಕೊಳ್ಳುವುದರಲ್ಲೇ, ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಚಿತ್ರದ ಯಶಸ್ಸು ಅಡಗಿದೆ ಎಂಬ ಸತ್ಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ದೇಸಾಯಿ, ಆರಂಭದಿಂದ ಅಂತ್ಯದವರೆಗೂ ಆ ಗುಟ್ಟನ್ನು ಬಚ್ಚಿಟ್ಟು, ಆಗಾಗ್ಗೆ ಪ್ರೇಕ್ಷಕರನ್ನು ಬೆಚ್ಚಿಸಿ ಕುತೂಹಲ ಮೂಡಿಸುತ್ತ ಕೊನೆಗೆ ಬಿಚ್ಚಿಟ್ಟು ನೋಡುಗರು ನಿಟ್ಟುಸಿರು ಬಿಡುವಂತೆ ಮಾಡುತ್ತಾರೆ.
ಅಲ್ಲಲ್ಲಿ ಒಂದಷ್ಟು ನೋಡುಗರ ಕಣ್ಣು ತೆರೆಯಿಂದ ಅತ್ತಿತ್ತ ಹರಿಯುತ್ತಿದೆ ಎನ್ನುವಾಗಲೇ ಒಂದೊಂದು ಟ್ವಿಸ್ಟ್ ಕೊಟ್ಟು, ಸಸ್ಪೆನ್ಸ್ ಜರ್ನಿಯಲ್ಲಿ, ಕ್ರೈಂ ಸ್ಟೋರಿಯನ್ನು ಹೇಳುತ್ತಾ ಎಲ್ಲೂ ಬೋರ್ ಹೊಡೆಸದೆ, ಕೊನೆವರೆಗೂ ಕರೆದುಕೊಂಡು ಹೋಗುತ್ತಾರೆ. ಇನ್ನು ಚಿತ್ರದ ಬಹುತೇಕ ಕಲಾವಿದರದ್ದು ಅದ್ಭುತ ಎನ್ನುವುದಕ್ಕಿಂತ, ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ ಎನ್ನಬಹುದು. ಎಲ್ಲಾ ಕಲಾವಿದರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
ತಾಂತ್ರಿಕವಾಗಿ ಹೇಳುವುದಾದರೆ, ಚಿತ್ರದ ಛಾಯಾಗ್ರಹಣ ಮತ್ತು ಸಂಕಲನ ಕಾರ್ಯ ತೆರೆಮೇಲೆ ಎದ್ದು ಕಾಣುತ್ತದೆ. ಹಿನ್ನೆಲೆ ಸಂಗೀತ ಅಬ್ಬರ ಅಲ್ಲಲ್ಲಿ ಹೆಚ್ಚಾದಂತಿದೆ. ಹುಡುಕುತ್ತಾ ಹೊರಟರೆ “ಉದ್ಘರ್ಷ’ ಕೆಲವೊಂದು ಲೋಪಗಳಿಂದ ಹೊರತಾಗಿಲ್ಲ. ಆದರೆ ಒಪ್ಪಬಹುದಾದ ತಪ್ಪುಗಳನ್ನು ಬದಿಗಿಟ್ಟು ನೋಡಿದರೆ, ಥ್ರಿಲ್ಲಿಂಗ್ ಅನುಭವ ಕೊಡೋದರಲ್ಲಿ ಅನುಮಾನವಿಲ್ಲ. ಗಾಂಧಿನಗರದ ಮಾಮೂಲಿ ಸಿದ್ಧಸೂತ್ರಗಳಿಂದ ಹೊಸಥರದ ಚಿತ್ರಕೊಟ್ಟಿರುವ ದೇಸಾಯಿ ಸಸ್ಪೆನ್ಸ್-ಥ್ರಿಲ್ಲರ್ ಮೂಲಕ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಭರ್ಜರಿ ಸ್ಕೋರ್ ಮಾಡಿದ್ದಾರೆ.
ಚಿತ್ರ: ಉದ್ಘರ್ಷ
ನಿರ್ದೇಶನ: ಸುನೀಲ್ ಕುಮಾರ್ ದೇಸಾಯಿ
ನಿರ್ಮಾಣ: ದೇವರಾಜ್ ಆರ್
ತಾರಾಗಣ: ಅನೂಪ್ ಸಿಂಗ್ ಠಾಕೂರ್, ಸಾಯಿ ಧನ್ಸಿಕಾ, ಕಬೀರ್ ದುಹಾನ್ ಸಿಂಗ್, ಕಿಶೋರ್, ವಂಶಿಕೃಷ್ಣ, ಪ್ರಭಾಕರ್, ತಾನ್ಯಾ ಹೋಪ್ ಇತರರು.
* ಜಿ.ಎಸ್ ಕಾರ್ತಿಕ ಸುಧನ್