ಹೊಸದಿಲ್ಲಿ : ಆಗ್ರಾದ ಫತೇಪುರ್ ಸಿಕ್ರಿಯಲ್ಲಿ ಸ್ವಿಸ್ ಜೋಡಿಯ ಮೇಲೆ ಕಳೆದ ಭಾನುವಾರ ಕಾಮಾಂಧ ಗುಂಪಿನಿಂದ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಪ್ರಾಪ್ತ ವಯಸ್ಸಿನವರು ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸ್ವಿಸ್ ಜೋಡಿ ಈಗ ಚೇತರಿಸಿಕೊಳ್ಳುತ್ತಿದೆ.
ಆದರೆ ಈ ಆಘಾತಕಾರಿ ಘಟನೆಯಿಂದ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಳಿಸಲಾಗದ ಕಳಂಕ ತಟ್ಟಿದೆ. ಭಾರತದ ಪ್ರವಾಸೋದ್ಯಮ ಮತ್ತು ವಿದೇಶ ಸಚಿವರು ಈ ಘಟನೆಗೆ ಅತ್ಯಂತ ತುರ್ತಾಗಿ ಸ್ಪಂದಿಸಿದ್ದಾರೆ. ಆದರೆ ಭಾರತ ಪ್ರವಾಸ ಕೈಗೊಳ್ಳುವ ವಿದೇಶೀರಿಯಗೆ ಆಯಾ ದೇಶಗಳ ಸರಕಾರ, ವಿಶೇಷವಾಗಿ ಸ್ವಿಸ್ ಪ್ರವಾಸಿಗಳಿಗೆ, ಸ್ವಿಸ್ ಸರಕಾರ ಸುದೀರ್ಘ ಎಚ್ಚರಿಕೆಗಳನ್ನು ಕೊಟ್ಟಿದೆ.
ಸ್ವಿಟ್ಸರ್ಲಂಡ್ ಮತ್ತು ಯುರೋಪ್‌ನ ಇತರ ದೇಶಗಳ ಮಾಧ್ಯಮದವರು ಫತೇಪುರ ಸಿಕ್ರಿಯಲ್ಲಿ ಸ್ವಿಸ್ ಜೋಡಿಯ ಮೇಲೆ ಕಾಮಾಂಧ ಯುವಕರ ಗುಂಪಿನಿಂದ ನಡೆದ ಹಲ್ಲೆಯನ್ನು ಭಾರೀ ದೊಡ್ಡದಾಗಿ ಹೈಲೈಟ್ ಮಾಡಿದ್ದು ಭಾರತದಲ್ಲಿ ಸಂಚರಿಸುವುದು ಎಷ್ಟು ಅಪಾಯಕಾರಿ ಎಂಬುದನ್ನು ವಿವರಿಸಿವೆ.
ಆಗಸ್ಟ್ 25ರಷ್ಟು ಹಿಂದೆಯೇ ಕೊಡಲಾಗಿದ್ದ ಎಚ್ಚರಿಕೆಯಲ್ಲಿ ಸ್ವಿಸ್ ಸರಕಾರ, “ಭಾರತದಲ್ಲಿ ಅಪರಾಧ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ; ಮಹಿಳೆಯರ ಮೇಲೆ ಹಲ್ಲೆ, ರೇಪ್ ನಡೆಯುವುದು ಸಾಮಾನ್ಯವಾಗಿದೆ. ಭಾರತದ ಆದ್ಯಂತ ಈ ಬಗೆಯ ಲೈಂಗಿಕ ಅಪರಾಧಗಳು ನಡೆಯುತ್ತಿರುವ ವರದಿಗಳು ಬರುತ್ತಲೇ ಇವೆ’ ಎಂದು ಹೇಳಿತ್ತು.
“ಆದುದರಿಂದ ಭಾರತ ಪ್ರವಾಸ ಕೈಗೊಳ್ಳುವ ಮಹಿಳೆಯರು ಎಚ್ಚರಿಕೆಯಿಂದಿರಬೇಕು. ಮಹಿಳೆಯರು ಮಾತ್ರವೇ ಗುಂಪಿನಲ್ಲಿ ಪ್ರಯಾಣಿಸುವಾಗ ಕೂಡ ಎಚ್ಚರಿಕೆಯಿಂದಿರಬೇಕು; ಪುರುಷರೊಂದಿಗೆ ಇರುವಾಗ ಅಪಾಯಗಳು ಕಡಿಮೆ ಇರಬಹುದಾದರೂ ಎಚ್ಚರಿಕೆಯಿಂದಿರುವುದು ತುಂಬಾ ಅಗತ್ಯ’ ಎಂದು ಸ್ವಿಸ್ ಸರಕಾರ ಹೇಳಿದೆ.