Advertisement

ಉಪ್ಪಿನಂಗಡಿ: ಮತ್ತೆ ಕಾಡಿದ ಮೋಡಿಗಾರ; 50 ಸಾ. ರೂ. ಕಳೆದುಕೊಂಡ ಅಡಿಕೆ ವರ್ತಕ !

12:44 AM Oct 16, 2022 | Team Udayavani |

ಉಪ್ಪಿನಂಗಡಿ: ಮಾತಿನ ಮೋಡಿಗೆ ಮರುಳಾಗಿ, ತನ್ನ ಮೂರು ಪವನ್‌ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳೆದು ಕೊಂಡ ಘಟನೆಯ ಕಳ್ಳ ಇನ್ನೂ ಪತ್ತೆಯಾಗದೇ ಇರುವ ಸಮಯದಲ್ಲೇ ಉಪ್ಪಿನಂಗಡಿಯ ಅಡಿಕೆ ವರ್ತಕರೊಬ್ಬರು ಚಿಲ್ಲರೆ ಪಡೆಯುವ ನೆಪದಲ್ಲಿ ಬಂದ ಮೋಡಿಗಾರನ ಮಾತಿಗೆ ಮರುಳಾಗಿ 50 ಸಾವಿರ ರೂ. ಕಳೆದುಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

Advertisement

ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಡಿಕೆ ವರ್ತಕರು ಹಣ ಕಳೆದುಕೊಂಡವರು. ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವರು 500 ರೂ. ಚಿಲ್ಲರೆ ಪಡೆಯಲು ಬಂದು 50 ಸಾವಿರ ರೂ.ಗಳನ್ನು ಸುಲಭವಾಗಿ ಪಡೆದು ಹೋದ ವಂಚನೆ ಯ ಕೃತ್ಯ ವಿಸ್ಮಯಕಾರಿಯಾಗಿದೆ.

ಅಡಿಕೆ ಅಂಗಡಿಗೆ ಬೈಕ್‌ನಲ್ಲಿ ಇಬ್ಬರು ಬಂದಿದ್ದು ಓರ್ವ ಬೈಕ್‌ನಿಂದ ಇಳಿದು ಬಂದು 500 ರೂ. ನೀಡಿ ಚಿಲ್ಲರೆ ಕೇಳುತ್ತಾನೆ. ವರ್ತಕ ಚಿಲ್ಲರೆ ಕೊಡುತ್ತಾರೆ. ವ್ಯಕ್ತಿ ತನ್ನ ಬಳಿ ಇದ್ದ 500 ರೂ.ಗಳ ಇನ್ನೊಂದು ನೋಟು ತೋರಿಸಿ, ಇದರ ಮಧ್ಯದಲ್ಲಿ ಹಳದಿ ಬಣ್ಣ ಇದೆ ನೋಡಿ, ಇಂತಹ ನೋಟಿಗೆ ಭಾರೀ ಬೇಡಿಕೆ ಇದೆ, ನಿಮ್ಮಲ್ಲಿ ಎಷ್ಟು ಇದ್ದರೂ ನನಗೆ ಬೇಕು, ಇದೆಯಾ ಎಂದು ಪ್ರಶ್ನಿಸುತ್ತಾನೆ.

ಆಗ ವರ್ತಕ ತನ್ನ ಡ್ರಾಯರಿನಲ್ಲಿ ಇದ್ದ 50 ಸಾವಿರ ಮೊತ್ತದ 500 ರೂ.ಗಳ ಒಂದು ಕಟ್ಟು ತೆಗೆದು ಈತನ ಕೈಗೆ ಕೊಟ್ಟು ಇದರಲ್ಲಿ ನಿನಗೆ ಬೇಕಾದ ನೋಟು ಎಷ್ಟು ಇದೆ ಎಂದು ನೋಡಿ ತೆಗೆದುಕೊ ಎಂದು ಹೇಳುತ್ತಾರೆ. ಈ ವ್ಯಕ್ತಿ ಎಣಿಸುತ್ತಿದ್ದಂತೆ ಬೈಕ್‌ನ ಹತ್ತಿರ ಇದ್ದ ಇನ್ನೊರ್ವ ವ್ಯಕ್ತಿ ಬಂದು ಅಡಿಕೆಯ ದರ ಕೇಳುತ್ತಾನೆ, ಆಗ ವರ್ತಕ ಆ ವ್ಯಕ್ತಿಯೊಂದಿಗೆ ಮಾತು ಆರಂಭಿಸುತ್ತಿದ್ದಂತೆ ನೋಟು ಎಣಿಸುತ್ತಿದ್ದ ವ್ಯಕ್ತಿ 50 ಸಾವಿರವಿದ್ದ 500 ರೂ.ಗಳ ಕಟ್ಟಿನ ಜತೆ ಪರಾರಿಯಾಗುತ್ತಾನೆ.

ನಗದು ಕಳೆದುಕೊಂಡ ವರ್ತಕ ಪೊಲೀಸ್‌ ಠಾಣೆಯಲ್ಲಿ ಮೌಖಿಕವಾಗಿ ದೂರು ನೀಡಿದ್ದು, ಪೊಲೀಸರು ವಿವಿಧ ಮಜಲಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next