ಉಡುಪಿ: ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಬ್ರಹ್ಮಾವರದ ನವ್ಯಾ ಅವರು ಆರೋಪಿ ಸುಕೇಶ್‌ರೊಂದಿಗೆ ಎ. 24ರಂದು ಕೋಟೇಶ್ವರದಲ್ಲಿ ವಿವಾಹವಾಗಿದ್ದರು. ಮದುವೆಗೆ ಮುನ್ನ ಆರೋಪಿ ವರ ಸಹಿತ ಪರಮೇಶ್ವರ ಆಚಾರ್ಯ, ಸುಶೀಲಾ, ಸಂದೇಶ, ಮಾಲತಿ, ಪ್ರಮೋದ್ ಆವರು ಮದುವೆಯ ಮಾತುಕತೆ ಮಾಡಲು ಸೌರಿಬೈಲಿನಲ್ಲಿರುವ ನವ್ಯಾ ಅವರ ಮನೆಗೆ ಬಂದಿದ್ದರು.
ಮಾತುಕತೆ ಸಮಯ 40 ಪವನ್ ಚಿನ್ನಾಭರಣ ಹಾಗೂ 50 ಲ.ರೂ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. ಈ ವೇಳೆ ನವ್ಯಾ ಅವರ ತಂದೆ ವರದಕ್ಷಿಣೆ ನೀಡಲು ನಿರಾಕರಿಸಿದಾಗ ಆರೋಪಿತಗಳೆಲ್ಲರೂ ವರದಕ್ಷಿಣೆ ನೀಡದಿದ್ದರೆ ಮದುವೆಯ ಪ್ರಸ್ತಾವ ಮುರಿಯುವುದಾಗಿ ಹೆದರಿಸಿದ್ದರು.
ಆರೋಪಿಗಳ ಒತ್ತಡಕ್ಕೆ ಒಳಗಾದ ಅವರು, 20 ಪವನ್ ಚಿನ್ನಾಭರಣ ಹಾಗೂ 20 ಲ.ರೂ. ನಗದು ವರದಕ್ಷಿಣೆ ನೀಡಲು ಒಪ್ಪಿ 20 ಲ.ರೂ.ಗಳನ್ನು ಮದುವೆಯ ಮುನ್ನ ವರನ ಬಳಿ ನೀಡಿದ್ದರು. ಮದುವೆಯ ಅನಂತರ ಆರೋಪಿಗಳೆಲ್ಲ ಇನ್ನೂ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟು, ನವ್ಯಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ. ಮದುವೆಯಾಗಿ 20 ದಿನದಲ್ಲಿ ವರ ವಿದೇಶಕ್ಕೆ ಹೋಗಿದ್ದು, ವಿದೇಶಕ್ಕೆ ಹೋದ 1 ವಾರ ಮಾತ್ರ ನವ್ಯಾ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದ. ಅನಂತರ ಮಾತುಕತೆ ನಿಲ್ಲಿಸಿದ್ದಾನೆ.
ವಿಚ್ಛೇದನಕ್ಕೆ ಒತ್ತಡ
ಪ್ರಸ್ತುತ ಉಳಿದ ಆರೋಪಿಗಳು ವಿಚ್ಛೇದನ ನೀಡುವಂತೆ ಮಾಡುತ್ತೇವೆ ಎಂದು ಹೇಳಿ ನವ್ಯಾ ಅವರನ್ನು ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ದೂರಲಾಗಿದೆ. ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.