Advertisement

ಪಕ್ಷಿಕೆರೆಯಲ್ಲೊಂದು ಘೋರ ದುರಂತ: ಪತ್ನಿ, ಮಗುವನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ!

03:04 AM Nov 10, 2024 | Team Udayavani |

ಕಿನ್ನಿಗೋಳಿ: ಮೂಲ್ಕಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕೆಮ್ರಾಲ್‌ ಗ್ರಾಮ ಪಂಚಾಯತ್‌ನ ಪಕ್ಷಿಕೆರೆ ನಿವಾಸಿ ಕಾರ್ತಿಕ್‌ ಭಟ್‌ ಅವರು ಗರ್ಭಿಣಿ ಪತ್ನಿ ಪ್ರಿಯಾಂಕಾ (28) ಹಾಗೂ ಪುತ್ರ ಹೃದಯ್‌(4)ನನ್ನು ಕೊಂದು, ಬಳಿಕ ಬೆಳ್ಳಾಯರು ಗ್ರಾಮದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯಕ್ಕೆ ಕೌಟುಂಬಿಕ ಕಲಹ ಕಾರಣ ಎಂದು ಶಂಕಿಸಲಾಗಿದೆ.

Advertisement

ಕಾರ್ತಿಕ್‌ ಭಟ್‌ನ ಹೋಂಡಾ ಆಕ್ಟಿವಾ ಸ್ಕೂಟಿ ಕೀ ಮತ್ತು ಮನೆಯ ಕೀಗಳು ಶುಕ್ರವಾರ ಮಧ್ಯಾಹ್ನ 11 ಗಂಟೆ ಸುಮಾರಿಗೆ ರೈಲು ಹಳಿಯಲ್ಲಿ ದೊರೆತಿತ್ತು. ಶನಿವಾರ ತನಿಖೆ ಮುಂದುವರಿಸಿ ಮೃತನ ಸ್ಕೂಟಿಯನ್ನು ಹುಡುಕುತ್ತಿದ್ದಾಗ ಅದು ಬೆಳ್ಳಾಯರು ಗ್ರಾಮದ ಮಹಾಮ್ಮಾಯಿ ದೇವಸ್ಥಾನದ ಸಮೀಪ ಪತ್ತೆಯಾಯಿತು. ಪರಿಶೀಲಿಸಿದಾಗ ಅದು ಕಾರ್ತಿಕ್‌ ಭಟ್‌ನದ್ದು ಎಂಬುದು ಖಚಿತವಾಯಿತು. ಅದರ ಮೂಲಕವೇ ಆತನ ಮನೆ ಕೆಮ್ರಾಲ್‌ ಗ್ರಾಮದ ಪಕ್ಷಿಕೆರೆಯಲ್ಲಿರುವುದು ತಿಳಿದು ಬಂದಿದೆ.

ಮೃತನ ತಂದೆ- ಜನಾರ್ದನ ಭಟ್‌ ಮತ್ತು ತಾಯಿ ಶ್ಯಾಮಲಾ ಅವರು ಪಕ್ಷಿಕೆರೆಯಲ್ಲಿ ಕ್ಯಾಂಟೀನ್‌ ನಡೆಸುತ್ತಿದ್ದಾರೆ. ಬಳಿಕ ಹೆಚ್ಚಿನ ತನಿಖೆಗಾಗಿ ಕಾರ್ತಿಕ್‌ನ ಮನೆಗೆ ತೆರಳಿ ಪರಿಶೀಲಿಸಿದಾಗ ಒಂದು ರೂಮು ಬೀಗ ಬಾಕಿದ ಸ್ಥಿತಿಯಲ್ಲಿತ್ತು. ರೈಲು ಹಳಿಯಲ್ಲಿ ಸಿಕ್ಕಿದ್ದ ಕೀ ಮೂಲಕ ಈ ಕೊಠಡಿಯ
ಬಾಗಿಲು ತೆರೆದು ಪರಿಶೀಲಿಸಿದಾಗ ಆತನ ಪತ್ನಿ ಹಾಗೂ ಮಗುವಿನ ಮೃತದೇಹವು ರಕ್ತಸಿಕ್ತವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಯಿತು.

ಶುಕ್ರವಾರವೇ ಕೊಲೆ
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಾರ್ತಿಕ್‌ ಭಟ್‌ ಶುಕ್ರವಾರ ಪತ್ನಿ ಮತ್ತು ಮಗುವನ್ನು ಕೊಂದು ಡೈರಿಯಲ್ಲಿ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಿಯಾಂಕಾಳ ಪೋಷಕರು ಶಿವಮೊಗ್ಗದವರು. ಪ್ರಿಯಾಂಕಾ ಮತ್ತು ಕಾರ್ತಿಕ್‌ ವಿವಾಹವು 6 ವರ್ಷಗಳ ಹಿಂದೆ ನಡೆದಿತ್ತು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಭೇಟಿ ನೀಡಿದ್ದಾರೆ.

ಗಾಜಿನಿಂದ ಇರಿದು ಕೊಲೆ
ಕಾರ್ತಿಕ್‌ ಪತ್ನಿ ಮತ್ತು ಮಗುವನ್ನು ಕಿಟಿಕಿಯ ಗಾಜಿನಿಂದ ಇರಿದು ಕೊಂದಿರುವುದಾಗಿ ತಿಳಿದುಬಂದಿದೆ.

Advertisement

ಸಹಕಾರಿ ಬ್ಯಾಂಕ್‌ ಉದ್ಯೋಗಿ
ಕಾರ್ತಿಕ್‌ ಭಟ್‌ ಸಹಕಾರಿ ಬ್ಯಾಂಕೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಮಗು ಸುರತ್ಕಲ್‌ ಶಾಲೆಗೆ ಹೋಗುತ್ತಿತ್ತು. ಕಾರ್ತಿಕ್‌ ಅಕ್ಕಪಕ್ಕದವರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಎಲ್ಲರ ಪ್ರೀತಿಪಾತ್ರರಾಗಿದ್ದರು ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಶಾಸಕ‌ಉಮಾನಾಥ ಕೋಟ್ಯಾನ್‌, ಕೆಮ್ರಾಲ್‌ ಗ್ರಾಮ ಪಂಚಾಯತ್‌ ಅಧ್ಯಕ್ಷ ಮಯ್ಯದ್ದಿ ಮೊದಲಾದವರು ಭೇಟಿ ನೀಡಿದ್ದಾರೆ. ಡಿಸಿಪಿ ಸಿದ್ದಾರ್ಥ ಗೋಯಲ್‌, ಪಣಂಬೂರು ಎಸಿಪಿ ಶ್ರೀಕಾಂತ್‌ , ಮೂಲ್ಕಿ ಠಾಣಾಧಿಕಾರಿ ವಿದ್ಯಾಧರ ಬೈರಕೆರ್‌, ಎಸ್‌. ಐ. ಅನಿತಾ ತನಿಖೆ ನಡೆಸುತ್ತಿದ್ದಾರೆ.


ಪತ್ನಿ ಮನೆಯವರು ಅಂತ್ಯಕ್ರಿಯೆ ನಡೆಸಲಿ

ತನ್ನ ಅಂತಿಮ ಕ್ರಿಯೆಯನ್ನು ಪತ್ನಿ ಮನೆಯವರು ಮಾಡಬೇಕು ಎಂದು ಕಾರ್ತಿಕ್‌ ಬರೆದಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಕಾರ್ತಿಕ್‌ ಮೂರು ವರ್ಷಗಳಿಂದ ಹೆತ್ತವರ ಜತೆಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದು ತಂದೆ ಜನಾರ್ದನ ಭಟ್‌ ತಿಳಿಸಿದ್ದಾರೆ ಎಂದು ಅಗರ್‌ವಾಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next