Advertisement

ನಕ್ಸಲರು ಬೈಕ್‌, ಕಾರು ಸುಟ್ಟ ಪ್ರಕರಣ: ಆರೋಪಿ ಖುಲಾಸೆ

05:19 PM Oct 11, 2022 | Team Udayavani |

ಮಂಗಳೂರು: ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್‌ನಲ್ಲಿ 2013ರಲ್ಲಿ ನಕ್ಸಲರು ರಾಮಚಂದ್ರ ಭಟ್‌ ಅವರ ಅಂಗಳದಲ್ಲಿದ್ದ ಬೈಕ್‌ ಮತ್ತು ಕಾರನ್ನು ಸುಟ್ಟು ಹಾಕಿದ ಪ್ರಕರಣದ ಓರ್ವ ಆರೋಪಿ ಚಿನ್ನಿ ರಮೇಶ್‌ ಅಲಿಯಾಸ್‌ ರಮೇಶ್‌ ಅಲಿಯಾಸ್‌ ಶಿವಕುಮಾರ್‌ನನ್ನು ದೋಷಮುಕ್ತಗೊಳಿಸಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

Advertisement

ಪ್ರಕರಣದ ವಿವರ
2013ರ ನ. 9ರ ಬೆಳಗಿನ ಜಾವ 2 ಗಂಟೆಗೆ ಮಾವೊವಾದಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಚಿನ್ನಿ ರಮೇಶ್‌ ಅಲಿಯಾಸ್‌ ರಮೇಶ್‌ ಅಲಿಯಾಸ್‌ ಶಿವಕುಮಾರ್‌ ಇತರ ಆರೋಪಿಗಳಾದ ವಿಕ್ರಂ ಗೌಡ, ಸಾವಿತ್ರಿ, ಸುಂದರಿ, ವಿಜಯ್‌, ಜಯಣ್ಣ ಮತ್ತು ಇತರರೊಂದಿಗೆ ಬಂದು ರಾಮಚಂದ್ರ ಭಟ್ಟರ ಮನೆಯ ಬಾಗಿಲನ್ನು ಬಡಿದು ಹೊರಗೆ ಕರೆದಿದ್ದರು. ಅವರು ಹೊರಗೆ ಬಾರದೇ ಇದ್ದಾಗ ಅಂಗಳದಲ್ಲಿದ್ದ ಬೈಕ್‌ ಮತ್ತು ಮಾರುತಿ ಕಾರಿಗೆ ಬೆಂಕಿ ಹಚ್ಚಿ 2,69,555 ರೂ. ನಷ್ಟ ಉಂಟು ಮಾಡಿದ್ದ ಬಗ್ಗೆ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಆರೋಪಿಗಳ ವಿರುದ್ಧ ಯುಎಪಿಎ ಸೆಕ್ಷನ್‌ 10 (ಬಿ) ಮತ್ತು 13, ಭಾರತೀಯ ಸಶಸ್ತ್ರ ಕಾಯಿದೆಯ ಸೆಕ್ಷನ್‌ 3, 25, ಐಪಿಸಿ ಸೆಕ್ಷನ್‌ 143, 147, 148, 447, 435, 427 ಮತ್ತು 149ರಡಿ ಪ್ರಕರಣ ದಾಖಲಾಗಿತ್ತು.

ಡಿವೈಎಸ್‌ಪಿ ರವೀಶ್‌ ಸಿ.ಆರ್‌. ಅವರು ಆರಂಭಿಕ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡುವ ಸಾಧ್ಯತೆ ಕಡಿಮೆ ಇರುವುದರಿಂದ ಇದೊಂದು ಪತ್ತೆಯಾಗದ ಪ್ರಕರಣವೆಂದು ಪರಿಗಣಿಸಿ 2017ರ ಜ. 17ರಂದು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.

ಮರು ತನಿಖೆ
ಅನಂತರ ಉಡುಪಿಯಲ್ಲಿ ಎಸ್‌ಪಿಯಾಗಿದ್ದ ಅಣ್ಣಾಮಲೈ ಅವರು ಬೆಂಗಳೂರಿನಲ್ಲಿ ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿದ್ದ ಚಿನ್ನಿ ರಮೇಶ್‌ನನ್ನು ವಶಕ್ಕೆ ಪಡೆದಿದ್ದರು. ಪ್ರಕರಣದ ಮರು ತನಿಖೆಗೆ ಆದೇಶ ಮಾಡಲಾಗಿತ್ತು. ಮರುತನಿಖೆ ಆರಂಭಿಸಿದ ಡಿವೈಎಸ್‌ಪಿ ರವೀಶ್‌ ಸಿ.ಆರ್‌. ಅವರು ಆರೋಪಪಟ್ಟಿ ತಯಾರಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪ ಪಟ್ಟಿಯಲ್ಲಿದ್ದ 22 ಸಾಕ್ಷಿಗಳಲ್ಲಿ 9 ಸಾಕ್ಷಿಗಳ ವಿಚಾರಣೆ ನಡೆಸಿತು. ಅದರಲ್ಲಿ 5 ಮಂದಿ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು. 2013ರಲ್ಲಿ ಕುತ್ಲೂರು ಪ್ರದೇಶದಲ್ಲಿ ಅರಣ್ಯ ನಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿತ್ತು. ಈ ಸಂದರ್ಭ ದೂರುದಾರ ರಾಮಚಂದ್ರ ಭಟ್‌ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಕ್ಸಲರು ಈ ಕೃತ್ಯ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಅ. 10ರಂದು ನ್ಯಾಯಾಧೀಶ ರವೀಂದ್ರ ಎಂ. ಜೋಷಿ ಅವರು ಅಂತಿಮ ತೀರ್ಪು ಪ್ರಕಟಿಸಿ ಆರೋಪಿ ಚಿನ್ನಿ ರಮೇಶ್‌ನನ್ನು ದೋಷಮುಕ್ತಗೊಳಿಸಿದ್ದಾರೆ.

Advertisement

ಚಿಕ್ಕಮಗಳೂರಿನಲ್ಲಿ ಈತನ ವಿರುದ್ಧದ 4 ಪ್ರಕರಣಗಳು ವಿಚಾರಣೆಯಲ್ಲಿದ್ದು ಪ್ರಸ್ತುತ ಬೆಂಗಳೂರು ಜೈಲಿನಲ್ಲಿದ್ದಾನೆ. ಚಿನ್ನಿ ರಮೇಶ್‌ ಹೊರತುಪಡಿಸಿ ಇತರ ಆರೋಪಿಗಳನ್ನು ತಲೆಮರೆಸಿಕೊಂಡ ಆರೋಪಿಗಳು ಎಂದು ಕಾಣಿಸಲಾಗಿದೆ. ಆರೋಪಿ ಪರ ದಿನೇಶ್‌ ಹೆಗ್ಡೆ ಉಳೆಪಾಡಿ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next