Advertisement

ಸುತ್ತಿಗೆಯಿಂದ ಹೊಡೆದು ಪ್ರೇಯಸಿ ಕೊಲೆ: ರಾತ್ರಿಯಿಡೀ ಶವದ ಜೊತೆ ಕಾಲ ಕಳೆದ ಆರೋಪಿ!

12:02 PM Jan 14, 2022 | Team Udayavani |

ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮದ್ಯದ ಅಮಲಿನಲ್ಲಿದ್ದ ಪ್ರೇಯಸಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದು, ಬಳಿಕ ಆಸ್ಪತ್ರೆಗೆ ದಾಖಲಿಸಿ ಸುಳ್ಳು ವಿಳಾಸ ಕೊಟ್ಟು ಪರಾರಿಯಾಗಿದ್ದ ಪ್ರಿಯಕರನೊಬ್ಬ ಕೋಣನಕುಂಟೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಮಂಡ್ಯ ಜಿಲ್ಲೆ ಮಳವಳ್ಳಿ ಮೂಲದ ಮಂಜುನಾಥ್‌ (40) ಬಂಧಿತ. ಆರೋಪಿ ಜ.6ರಂದು ತನ್ನ ಪ್ರೀಯತಮೆ ಮಂಜುಳಾ ಎಂಬಾಕೆಯನ್ನು ಕೊಲೆಗೈದಿದ್ದ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಏಳು ವರ್ಷಗಳ ಹಿಂದೆ ನಗರಕ್ಕೆ ಬಂದಿರುವ ಮಂಜುನಾಥ್‌ ಅವಿವಾಹಿತನಾಗಿದ್ದು, ಬಾರ್‌ ಬೆಡ್ಡಿಂಗ್‌ ಕೆಲಸ ಮಾಡುತ್ತಿದ್ದ. ಕೋಣನಕುಂಟೆಯ ಬೀರೇಶ್ವರನಗರದಲ್ಲಿ ವಾಸವಾಗಿದ್ದ. ಹಲವು ಮಹಿಳೆಯರ ಜತೆ ಸಂಬಂಧ ಬೆಳೆಸಿಕೊಂಡಿದ್ದ. ಈ ಮಧ್ಯೆ ವೇಶ್ಯಾವಾಟಿಕೆ ದಂಧೆ ನಡೆಸುವ ಲಕ್ಷ್ಮೀ ಎಂಬಾಕೆ ಮೂಲಕ ಮಂಜುಳಾ ಪರಿಚಯವಾಗಿದೆ.

ವಿವಾಹಿತೆಯಾಗಿದ್ದ ಮಂಜುಳಾ, ಪತಿಯಿಂದ ದೂರವಾಗಿದ್ದಳು. ಇಬ್ಬರು ಮಕ್ಕಳು ಸಂಬಂಧಿಕರ ಮನೆಯಲ್ಲಿದ್ದಾರೆ. ದುರ್ನಡತೆಯಿಂದ ಸಂಬಂಧಿಕರು ಈಕೆಯನ್ನು ಮನೆಯಿಂದ ಹೊರ ಹಾಕಿದ್ದರು. ಹೀಗಾಗಿ ಮಡಿವಾಳದಲ್ಲಿ ಬಾಡಿಗೆ ಮನೆಯಲ್ಲಿದ್ದು, ಹೌಸ್‌ಕಿಪಿಂಗ್‌ ಕೆಲಸಕ್ಕೆ ಹೋಗುತ್ತಿದ್ದಳು. ಲಕ್ಷ್ಮೀ ಮೂಲಕ ಪರಿಚಯವಾದ ಆರೋಪಿ ಮಂಜುನಾಥ್‌ ಜತೆ ಸಂಬಂಧ ಬೆಳೆಸಿಕೊಂಡು, ಕೋಣನಕುಂಟೆಯಲ್ಲಿರುವ ಆತನ ಮನೆಯಲ್ಲಿಯೇ ವಾಸವಾಗಿದ್ದಳು.

ಸುಮಾರು 16 ವರ್ಷಗಳಿಂದ ಮದ್ಯದ ಚಟ ಅಂಟಿಸಿಕೊಂಡಿದ್ದ ಮಂಜುಳಾ ಪ್ರತಿ ನಿತ್ಯ ಕುಡಿಯುತ್ತಿದ್ದಳು. ಪ್ರಿಯಕರನೇ ಆಕೆಗೆ ಮದ್ಯ ತುಂದು ಕೊಡುತ್ತಿದ್ದ. ಈ ನಡುವೆ ಆಕೆ ಪರ ಪುರುಷರ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದರು.

Advertisement

ಸುತ್ತಿಗೆಯಲ್ಲಿ ಹೊಡೆದು ಕೊಂದ!: ಗುರುವಾರ ರಾತ್ರಿ ಮಂಜುಳಾ, ಮಂಜುನಾಥ್‌ ಗೆ ಮದ್ಯ ತರುವಂತೆ ಹೇಳಿದ್ದಾಳೆ. ಆತ ಒಂದು ಬಾಟಲಿ ತಂದು ಕೊಟ್ಟಿದ್ದಾನೆ. ಅನಂತರ ಮತ್ತೂಂದು ಬಾಟಲಿ ಬೇಕೆಂದು ಹಠ ಹಿಡಿದಾಗ ತರಲು ಹಣವಿಲ್ಲ ಎಂದು ಆತ ಹೇಳಿದ್ದಾನೆ. ಆಗ ಮಂಜುಳಾ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ, ಮದ್ಯದ ಅಮಲಿನಲ್ಲಿದ್ದ ಆಕೆ ಮೇಲೆ ಹಲ್ಲೆ ನಡೆಸಿ, ತಲೆಯನ್ನು ಗೋಡೆಗೆ ಗುದ್ದಿಸಿ, ಬಳಿಕ ಬಾರ್‌ ಬೆಡ್ಡಿಂಗ್‌ ಕೆಲಸಕ್ಕೆ ಬಳಸುವ ಸುತ್ತಿಗೆಯಿಂದ ಆಕೆಯ ತೊಡೆ, ಬೆನ್ನಿಗೆ ಹೊಡೆದು ಮೂಳೆ ಮುರಿದಿದ್ದು, ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ:ಕಾನನಕಟ್ಟೆ ಟೋಲ್ ಬಳಿ ಭೀಕರ ಅಪಘಾತ: ಏಳು ಮಂದಿ ಸಾವು!

ಮೃತ ದೇಹಕ್ಕೆ ಸ್ನಾನ ಮಾಡಿಸಿದ್ದ ಪ್ರಿಯತಮ: ಆಕೆ ಮೃತಪಟ್ಟಿರುವುದನ್ನು ಖಾತ್ರಿ ಪಡಿಸಿಕೊಂಡು ಕೆಲ ಹೊತ್ತಿನ ಬಳಿಕ ಮೃತದೇಹಕ್ಕೆ ಸ್ನಾನ ಮಾಡಿಸಿ, ಬಟ್ಟೆ ಬದಲಿಸಿದ್ದಾನೆ. ರಾತ್ರಿಯಿಡಿ ಮೃತದೇಹದ ಜತೆಯೇ ಇದ್ದು, ಶುಕ್ರವಾರ ಬೆಳಗ್ಗೆ ಕುಸಿದು ಬಿದ್ದಿದ್ದಾಳೆಂದು ಮನೆ ಮಾಲೀಕರ ಸಹಾಯ ಪಡೆದು ಜಯನಗರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದಿದ್ದ. ಚಿಕಿತ್ಸೆ ನೀಡಿದ ವೈದ್ಯರು ಮೃತಪಟ್ಟಿದ್ದಾಳೆಂದು ದೃಢಪಡಿಸಿದ್ದರು. ಆಗ ಆರೋಪಿ ಚುಂಚಘಟ್ಟ ಎಂದು ಸುಳ್ಳು ವಿಳಾಸ ನೀಡಿ ಪರಾರಿಯಾಗಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆಕೆಯ ವಿಳಾಸ ಪತ್ತೆ ಹಚ್ಚಿದಾಗ ಸುಳ್ಳು ಎಂಬುದು ಗೊತ್ತಾಗಿದೆ. ನಂತರ ಬಾತ್ಮೀದಾರರು ಹಾಗೂ ಇತರರ ಮೂಲಕ ಮಾಹಿತಿ ಸಂಗ್ರಹಿಸಿ ಬೀರೇಶ್ವರನಗರದಲ್ಲಿರುವ ಮನೆ ಪತ್ತೆ ಹಚ್ಚಿ, ಶೋಧಿ ಸಿದಾಗ ಡೈರಿಯೊಂದು ಪತ್ತೆಯಾಗಿತ್ತು. ಅದರಲ್ಲಿ ಸುಮಾರು ನೂರಾರು ಮೊಬೈಲ್‌ ನಂಬರ್‌ ಇತ್ತು. ಆ ಪೈಕಿ ಈ ಹಿಂದೆ ಮಡಿವಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಪೊಲೀಸ್‌ ಸಿಬ್ಬಂದಿಯೊಬ್ಬರ ಮೊಬೈಲ್‌ ನಂಬರ್‌ ಸಿಕ್ಕಿದ್ದು, ಅವರನ್ನು ಸಂಪರ್ಕಿಸಿದಾಗ ಕೆಲವೊಂದು ವಿಚಾರ ಬೆಳಕಿಗೆ ಬಂದಿದೆ. ಮಂಜುನಾಥ್‌ ಜತೆ ವಾಸವಾಗಿರುವ ಪತ್ತೆಯಾಗಿದೆ. ಬಳಿಕ ನಗರದಲ್ಲೇ ತಲೆಮರೆಸಿಕೊಂಡಿದ್ದ ಆರೋಪಿ ಬುಧವಾರ ರಾತ್ರಿ ಬೈನಪಾಳ್ಯ ಬಸ್‌ ನಿಲ್ದಾಣದಲ್ಲಿ ಊರಿಗೆ ತೆರಳಲು ಮುಂದಾಗಿದ್ದಾಗ ಬಂಧಿಸಲಾಗಿದೆ. ಆರೋಪಿ ವಿರುದ್ಧ ಈ ಹಿಂದೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಒಂದು ತಿಂಗಳು ಜೈಲು ಸೇರಿದ್ದ ಎಂಬುದು ಗೊತ್ತಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next