Advertisement

ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

10:26 PM May 18, 2022 | Team Udayavani |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಬೀಜಾಡಿಯ ಐಸಿರಿ ಮೊಬೈಲ್‌ ಅಂಗಡಿಗೆ ಬುಧವಾರ ಬೆಳಗ್ಗಿನ ಜಾವ ಐವರು ದರೋಡೆಕೋರರು ನುಗ್ಗಿದ ಘಟನೆ ನಡೆದಿದ್ದು, ಪಕ್ಕದ ಚಿನ್ನದ ಅಂಗಡಿ, ಕೋಟೇಶ್ವರದಲ್ಲಿಯೂ ಕಳ್ಳತನಕ್ಕೆ ಯತ್ನಿಸಿದ್ದು, ಆದರೆ ಜನ ಸೇರಿದ್ದರಿಂದ ವಿಫ‌ಲಗೊಂಡಿದೆ.

Advertisement

ಕಾರಿನಲ್ಲಿ ಬಂದಿದ್ದ ಐವರು ಮುಸುಕುಧಾರಿ ದರೋಡೆಕೋರರು ಬುಧವಾರ ಬೆಳಗ್ಗಿನ ಜಾವ 3.30ರ ಸುಮಾರಿಗೆ ಬೀಜಾಡಿಯ ಮೊಬೈಲ್‌ ಅಂಗಡಿಯ ಬಾಗಿಲು ಮುರಿದು ಒಳನುಗ್ಗಿ, ಅಲ್ಲಿದ್ದ 70 ಸಾವಿರ ರೂ. ಮೌಲ್ಯದ ಮೊಬೈಲ್‌ ಮತ್ತು ಬಿಡಿಭಾಗಗಳನ್ನು ಕದ್ದೊಯ್ದಿದ್ದಾರೆ.

ಪಕ್ಕದ ಶ್ರೀ ದುರ್ಗಾ ಜುವೆಲರಿಯ ಶಟರ್‌ ಮುರಿದು ಕಳವಿಗೆ ಯತ್ನಿಸಿದ್ದಾರೆ. ಆದರೆ ಅಷ್ಟರೊಳಗೆ ಸ್ಥಳೀಯರೆಲ್ಲ ಒಟ್ಟಾಗಿದ್ದು, ಕಳ್ಳರು ಪರಾರಿಯಾಗಿದ್ದಾರೆ.

ಕೋಟೇಶ್ವರದ್ದಲ್ಲೂ ಕೂಡ ಒಂದು ಜುವೆಲರಿ ಶಾಪ್‌ನ ಶಟರ್‌ನ ಬೀಗ ಹೊಡೆಯಲು ಪ್ರಯತ್ನಪಟ್ಟಿದ್ದಾರೆ.

ಪೇಪರ್‌ ಹುಡುಗನ ಸಮಯ ಪ್ರಜ್ಞೆ
ಕಳವು ಮಾಡುತ್ತಿದ್ದ ಸಂದರ್ಭದಲ್ಲಿ ಬೆಳಗ್ಗೆ 3.45 ರ ಸುಮಾರಿಗೆ ಅಲ್ಲಿನ ಪಕ್ಕದ ರಸ್ತೆಯಲ್ಲಿ ದಿನಪತ್ರಿಕೆ ವಿತರಣೆಗೆಂದು ಬರುತ್ತಿದ್ದ ಹುಡುಗನೊಬ್ಬ ಈ ಕೃತ್ಯವನ್ನು ನೋಡಿದ್ದು, ಆಗ ಆ ಕಳ್ಳರು ಈತನನ್ನು ಬೆದರಿಸಿ, ಇದನ್ನು ಯಾರಿಗೂ ಹೇಳದಂತೆ ಎಚ್ಚರಿಸಿದ್ದಾರೆ. ಆತ ಹೇಳುವುದಿಲ್ಲವೆಂದು ಅಲ್ಲಿಂದ ಹೊರಟಿದ್ದು, ಸ್ವಲ್ಪ ಮುಂದಕ್ಕೆ ಹೋಗಿ, ಸ್ಥಳೀಯ ಕೆಲವರಿಗೆ ಮಾಹಿತಿ ನೀಡಿದ್ದು, ಪೊಲೀಸರಿಗೂ ಮಾಹಿತಿ ನೀಡಲಾಯಿತು. ಅವರೆಲ್ಲ ಒಟ್ಟಾಗಿ ಘಟನ ಸ್ಥಳಕ್ಕೆ ಬರುತ್ತಿದ್ದಂತೆ ದರೋಡೆಕೋರರು ಪರಾರಿಯಾಗಿದ್ದಾರೆ. ಇಲ್ಲದಿದ್ದರೆ ಚಿನ್ನದ ಅಂಗಡಿ ಸಹಿತ ಇನ್ನಷ್ಟು ಹೆಚ್ಚಿನ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುವ ಸಾಧ್ಯತೆಗಳಿತ್ತು. ಪತ್ರಿಕೆ ಹಂಚುವ ಹುಡುಗನ ಸಮಯ ಪ್ರಜ್ಞೆಯಿಂದ ಸರಣಿ ಕಳ್ಳತನ ತಪ್ಪಿದಂತಾಗಿದೆ.

Advertisement

ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ದರೋಡೆಕೋರರು ಪೇಪರ್‌ ಹುಡುಗನ ಬಳಿ ಕುಂದಾಪ್ರ ಕನ್ನಡದಲ್ಲಿಯೇ ಮಾತನಾಡುತ್ತಿದ್ದುದರಿಂದ ಇದು ಸ್ಥಳೀಯರದ್ದೇ ಕೃತ್ಯ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next