Advertisement

ತಂದೆಯಿಂದ ಪುತ್ರನ ಕೊಲೆ: ಹಲವು ಶಂಕೆ; ಮನೆಯಂಗಳದಲ್ಲಿ ದಿನೇಶ್‌ ಉಟ್ಟ ಬಟ್ಟೆ ಪತ್ತೆ

12:12 AM Feb 26, 2022 | Team Udayavani |

ವಿಟ್ಲ: ವಿಟ್ಲಮುಟ್ನೂರು ಗ್ರಾಮದ ಕಾಂತಮೂಲೆಯಲ್ಲಿ ನಿವಾಸಿ ದಿನೇಶ್‌(45)ನನ್ನು ಆತನ ತಂದೆ ವಸಂತ ಗೌಡ (70) ಕೊಡಲಿಯ ಮರದ ಹಿಡಿಯಿಂದ ಹೊಡೆದು ಬುಧವಾರ ರಾತ್ರಿ ಹತ್ಯೆ ಮಾಡಿದ ವಿಚಾರ ನಿಗೂಢವಾಗಿದೆ.

Advertisement

ಪ್ರಸ್ತುತ ತಂದೆ ತಾನೇ ಕೊಲೆ ಮಾಡಿದ್ದೇನೆಂದು ಒಪ್ಪಿಕೊಂಡಿದ್ದು, ವಿಟ್ಲ ಪೊಲೀಸರು ಆತನನ್ನು ಬಂಧಿಸಿರುವುದು ನಿಜವೇ ಆಗಿದ್ದರೂ, ಸ್ಥಳೀಯರ ಶಂಕೆಗೆ ರೆಕ್ಕೆ ಪುಕ್ಕ ಸೇರಿಕೊಳ್ಳುತ್ತಿದೆ.

ವೃದ್ಧ ಕುಡುಕ ತಂದೆ, ಕುಡುಕ ಪುತ್ರನ ಜತೆ ಹೊಡೆದಾಟ ಗಲಾಟೆ ನಡೆಯುತ್ತಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ 70 ವರ್ಷದ, ಕೈಗೆ ವಾಕಿಂಗ್‌ ಸ್ಟಿಕ್‌ ಬಳಸಿ, ಕಷ್ಟದಲ್ಲಿ ನಡೆದಾಡುವ ವ್ಯಕ್ತಿ ಕೊಡಲಿಯ ಹಿಡಿಯಲ್ಲಿ ಬಡಿದು ಕೊಲೆ ಮಾಡಲು ಸಾಧ್ಯವೇ? ಎನ್ನುವ ವಾದ ಒಂದೆಡೆ. ಕುಡಿದ ಅಮಲಿನಲ್ಲಿ ತಾನು ಏನು ಮಾಡುತ್ತಿದ್ದೇನೆಂದು ಅರಿವಿಲ್ಲದೇ ಮಲಗಿದ್ದ ಮಗನನ್ನು ಬಡಿದು ಕೊಲೆ ಮಾಡುವುದು ಸುಲಭವೂ ಹೌದು ಎನ್ನುವ ವಾದ ಇನ್ನೊಂದೆಡೆ. ಆದರೆ ಕೊಲೆಗೀಡಾದ ಯುವಕ ದಿನೇಶ್‌ ತನ್ನ ಮಂಚದಲ್ಲಿ ಹಾಸಿಗೆ ಮೇಲೆ ಅರೆನಗ್ನ ಸ್ಥಿತಿಯಲ್ಲಿ ಇರುವುದಕ್ಕೆ ಕಾರಣವೇನು? ಆತನ ಉಟ್ಟ ಬಟ್ಟೆ (ಲುಂಗಿ) ಅಂಗಳದಲ್ಲಿ ಇರಲು ಕಾರಣವೇನು? ತಂದೆ ಮತ್ತು ಮಗ ಅಂಗಳದಲ್ಲಿ ಜಗಳವಾಡಿದಾಗ ಪುತ್ರ ದಿನೇಶ್‌ ಬಟ್ಟೆ ಕೆಳಗೆ ಬಿದ್ದಿತೆಂದು ಮನೆಯೊಳಗೆ ತೆರಳಿದರೂ ಅರೆ ನಗ್ನಾವಸ್ಥೆಯಲ್ಲಿ ಮಲಗಲು ಸಾಧ್ಯವೇ? ಇತ್ಯಾದಿ ಶಂಕೆಗಳು ಸ್ಥಳೀಯರಲ್ಲಿ ಬಲವಾಗಿದೆ.

ಇಬ್ಬರು ಪುತ್ರರು
ಆರೋಪಿ ವಸಂತ ಗೌಡನ ಪತ್ನಿ ನಿಧನ ಹೊಂದಿದ್ದಾರೆ. ಈ ದಂಪತಿಗೆ ದಿನೇಶ್‌ ಮತ್ತು ಎಂ.ವಿ. ಮುರಳಿ ಎಂಬ ಇಬ್ಬರು ಪುತ್ರರು. ದಿನೇಶ್‌ ವಿವಾಹವಾಗಿದ್ದರೂ ಪತ್ನಿ ತವರೂರಿಗೆ ತೆರಳಿ ಐದು ವರ್ಷಗಳೇ ಸಂದಿವೆ. ಎಂ.ವಿ. ಮುರಳಿ ಕುಟುಂಬದವರು ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದಾರೆ.

ಅವರೇ ಈ ಘಟನೆಯ ದೂರುದಾರರಾಗಿದ್ದಾರೆ. ಕೊಲೆ ಮಾಡಿದ ವಸಂತ ಗೌಡ ಅವರು ಕುಟುಂಬದವರಾದ ನೀಲಪ್ಪ ಗೌಡ ಅವರ ಮೊಬೈಲ್‌ಗೆ ಕರೆ ಮಾಡಿ, ದಿನೇಶ್‌ನನ್ನು ಕೊಂದಿದ್ದೇನೆ ಎಂದು ತಿಳಿಸಿದ್ದಾರೆ. ಆ ಬಳಿಕ ನೀಲಪ್ಪ ಗೌಡ ಅವರು ವಸಂತ ಗೌಡ ಅವರ ಮನೆಗೆ ತೆರಳಿ ವಿವರ ತಿಳಿದು, ದಿನೇಶ್‌ ಮೃತಪಟ್ಟಿರುವುದನ್ನು ಖಚಿತಪಡಿಸಿ, ಇನ್ನೋರ್ವ ಪುತ್ರ ಎಂ.ವಿ. ಮುರಳಿ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬಟ್ಟೆ ಪೊಲೀಸರ ವಶಕ್ಕೆ
ಅರೆನಗ್ನಾವಸ್ಥೆಯಲ್ಲಿದ್ದ ದಿನೇಶ್‌ ಕಾಲುಗಳಲ್ಲಿ ರಕ್ತದ ಗುರುತುಗಳಿತ್ತು. ಇದರಲ್ಲಿ ಕೈ ಗುರುತುಗಳಿತ್ತಾ? ತಲೆಯ ಭಾಗದ ಗೋಡೆಯಲ್ಲಿ ರಕ್ತದ ಗುರುತುಗಳಿರುವುದು ಸಹಜವಾದರೂ, ಕಾಲಿನ ಭಾಗದಲ್ಲಿ ಸುಮಾರು 8 ಅಡಿ ದೂರದ ಕಿಟಕಿಯಲ್ಲಿ ರಕ್ತದ ಗುರುತುಗಳು ಚಿಮ್ಮಲು ಸಾಧ್ಯವೇ? ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸದೆ ಶವವನ್ನು ತೆಗೆಯಲು ಕಾರಣವೇನು ಎನ್ನುವ ಪ್ರಶ್ನೆಗಳೂ ಮೂಡುತ್ತಿವೆ. ಆದರೆ ಕೆಲವೊಂದು ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆಗೆ ಮಾಹಿತಿಯನ್ನು ಒದಗಿಸಲು ಸಾಧ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next