ಮಂಗಳೂರು: ವಿವಾಹ ವಿಚ್ಛೇದನದ ನಕಲಿ ಡಿಕ್ರಿ ದಾಖಲೆ ಸೃಷ್ಟಿಸಿದ ಪ್ರಕರಣವೊಂದರ ತನಿಖಾ ವರದಿಯನ್ನು ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಮಂಗಳೂರಿನ ಹಿರಿಯ ವಕೀಲ ಎಂ.ಪಿ. ನೊರೊನ್ಹಾ ಅವರು ನಿರ್ದೋಷಿ ಎಂದು ತನ್ನ ವರದಿಯಲ್ಲಿ ಹೇಳಿದೆ.
ಏನಿದು ಪ್ರಕರಣ
ಮಂಗಳೂರಿನ ನಿವಾಸಿಯೊಬ್ಬರು ತಾನು ಪ್ರೀತಿಸುತ್ತಿದ್ದ ಯುವತಿಯ ಜತೆ ಮದುವೆಯಾಗುವ ಉದ್ದೇಶದಿಂದ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಲು ಮಂಗಳೂರಿನ ವಕೀಲೆಯೊಬ್ಬರನ್ನು ಸಂಪರ್ಕಿಸಿ ನ್ಯಾಯಾಲಯದ ಮುಖಾಂತರ ಆದೇಶ ದೊರಕಿಸಿಕೊಡಲು ಕೇಳಿಕೊಂಡಿದ್ದರು. ನ್ಯಾಯಾಲಯದಿಂದ 2005 ಜುಲೈ ತಿಂಗಳಲ್ಲಿ ವಿವಾಹ ವಿಚ್ಛೇದನ ಆದೇಶ ಆಗಿದೆ ಎಂದು ಡಿಕ್ರಿಯನ್ನು ಹಾಜರುಪಡಿಸಿದ್ದರು. ಆ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ ಸಾವನ್ನಪ್ಪಿದ್ದರು. ಅನಂತರ ಮೃತರ ಹೆಸರಿನಲ್ಲಿದ್ದ ಬಾಂಡ್, ಎಫ್.ಡಿ.ಗಳ ಹಂಚಿಕೆ ವಿಚಾರದಲ್ಲಿ ಮೊದಲ ಪತ್ನಿ ಮತ್ತು ಎರಡನೆಯ ಪತ್ನಿ ನಡುವೆ ತಕರಾರು ಉಂಟಾಯಿತು. ನ್ಯಾಯಾಲಯದಲ್ಲಿ ಈ ಬಗ್ಗೆ ವ್ಯಾಜ್ಯ ದಾಖಲಾಗಿತ್ತು. ಆ ವ್ಯಾಜ್ಯದಲ್ಲಿ ಎರಡನೇ ಪತ್ನಿ ಮೊದಲ ಪತ್ನಿಯ ವಿವಾಹ ವಿಚ್ಛೇದನ ಡಿಕ್ರಿ ನೈಜವಾದ ದಾಖಲೆಯೆಂದು ನಂಬಿ ವಕೀಲರಾದ ಎಂ. ಪಿ ನೊರೊನ್ಹಾ ಮುಖಾಂತರ 2009ರಲ್ಲಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು.ಆ ಡಿಕ್ರಿಯನ್ನು ನ್ಯಾಯಾಲಯದಲ್ಲಿ ಪರಿಶೀಲಿಸಿದಾಗ ಅದು ವಿವಾಹ ವಿಚ್ಛೇದನದ ನಕಲಿ ಡಿಕ್ರಿ ದಾಖಲೆ ಎಂಬುದು ಗೊತ್ತಾಯಿತು.
ಕೂಡಲೇ 2009ರಲ್ಲಿ ವಕೀಲ ಎಂ.ಪಿ. ನೊರೊನ್ಹಾ ಅವರು ನ್ಯಾಯಾಲಯದ ಮತ್ತು ವೃತ್ತಿ ಗೌರವ ಕಾಪಾಡಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಆ ಪ್ರಕರಣದಿಂದ ತತ್‌ಕ್ಷಣವೇ ನಿವೃತ್ತಿಯಾಗಿದ್ದರು. ಆದರೆ ಕೆಲ ವ್ಯಕ್ತಿಗಳು ಈ ಪ್ರಕರಣ ನಡೆದು ಐದು ವರ್ಷಗಳ ಅನಂತರ ಅಂದರೆ 2014ರಲ್ಲಿ ದುರುದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ವಕೀಲ ನೊರೊನ್ಹಾ ನ್ಯಾಯಾಲಯಕ್ಕೆ ಡಿಕ್ರಿ ಸೃಷ್ಟಿಸಿ ಹಾಜರುಪಡಿಸಿದ್ದಾರೆ ಎಂದು ಅಪಪ್ರಚಾರ ಮಾಡಿದ್ದರು.
ನಕಲಿ ಡಿಕ್ರಿ ದಾಖಲೆ ಸೃಷ್ಟಿಸಿದ ಬಗ್ಗೆ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಹೈಕೋರ್ಟ್ ಆದೇಶದ ಪ್ರಕಾರ ಸಿಐಡಿಯವರು ತನಿಖೆ ನಡೆಸಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ ಮಂಗಳೂರಿನ ವಕೀಲೆ ಹಾಗೂ ಅವರ ಗುಮಾಸ್ತರನ್ನು ಆರೋಪಿಗಳೆಂದು ಹೆಸರಿಸಿ ಅವರ ವಿರುದ್ಧ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ವಕೀಲ ಎಂ. ಪಿ ನೊರೊನ್ಹಾ ಅವರ ಮೇಲೆ ಹೊರಿಸಿದ ಆರೋಪ ಸುಳ್ಳು ಎಂದಿದ್ದಾರೆ.