ಬೆಂಗಳೂರು: ಮ್ಯಾಗಿ ನೂಡಲ್ಸ್ ಹಾಗೂ ಬಿಸ್ಕೆಟ್ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಅಬ್ದುಲ್ ರಫೀಕ್ ಮತ್ತು ಗೌತಮ್ ಬಂಧಿತರು. ಆರೋಪಿಗಳಿಂದ ಸುಮಾರು 80 ಕೆ.ಜಿ ಗಾಂಜಾ ತುಂಬಿದ್ದ ಮ್ಯಾಗಿ ನೂಡಲ್ಸ್ ಮತ್ತು ಬಿಸ್ಕೆಟ್ ಪೊಟ್ಟಣಗಳನ್ನು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ವ್ಯಸನಿ ಶ್ರೀರಾಮಪುರದ ಮುತ್ತರಾಜ್ ಸಿಕ್ಕಿಬಿದ್ದಿದ್ದ. ಈತನ ವಿಚಾರಣೆಯಲ್ಲಿ ಈ ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ.
ಅಲ್ಲದೆ, ಆರೋಪಿಗಳು ಫೆ.25ರಂದು ಗೂಡ್ಸ್ ವಾಹನದಲ್ಲಿ ಆಂಧ್ರಪ್ರದೇಶದಿಂದ ಗಾಂಜಾ ತರುತ್ತಿರುವ ಮಾಹಿತಿ ಸಿಕ್ಕಿತ್ತು. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಮೆಟ್ರೋ ನಿಲ್ದಾಣ ಸಮೀಪದ ಹೋಗುವಾಗ ದಾಳಿ ನಡೆಸಿ ಬಂಧಿಸಲಾಗಿದೆ. ಆಗ ಮ್ಯಾಗಿ ನೂಡಲ್ಸ್ ಮತ್ತು ಬಿಸ್ಕೆಟ್ ಪೊಟ್ಟಣಗಳು ಕಂಡು ಬಂದಿದ್ದು, ಅವುಗಳನ್ನು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ರಫೀಕ್ ವಿರುದ್ಧ ಆಂಧ್ರಪ್ರದೇಶದಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣಗಳು ದಾಖಲಾಗಿದೆ. ಇನ್ನು ಗೌತಮ್ ವಿರುದ್ಧ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಮಾದಕ ವಸ್ತು ಮಾರಾಟ ಪ್ರಕರಣಗಳು ದಾಖಲಾಗಿದ್ದು, ರಾಜ್ಯದ ವಿವಿಧೆಡೆ ಸಾಗಾಟ ಮಾಡುತ್ತಿರುವ ಮಾಹಿತಿ ಇದೆ ಎಂದು ಪೊಲೀಸರು ಹೇಳಿದರು.